ಸಮಸ್ಯೆ ಸರಮಾಲೆಯಲ್ಲಿ ಸರ್ಕಾರಿ ಆಸ್ಪತ್ರೆ?

hospital story
ಮಾಲೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆ.
Published on

ಎಂ.ವಿ.ರವೀಂದ್ರ ಮಾಲೂರು

ಮಾಲೂರು ತಾಲೂಕು ಹೇಳಿ ಕೇಳಿ ಕೈಗಾರಿಕೆಗಳ ಪ್ರದೇಶ, ಈ ಭಾಗದಲ್ಲಿ ಅತಿ ಹೆಚ್ಚು ಕಾರ್ಮಿಕರೇ ವಾಸವಿದ್ದು, ಗಂಭೀರ ಕಾಯಿಲೆ ಸಮಸ್ಯೆ ಎದುರಾದರೆ ಸರ್ಕಾರಿ ಆಸ್ಪತ್ರೆ ಮೇಲೆ ಅವಲಂಬನೆ ಅನಿವಾರ್ಯ.

ಆದರೆ, 1952ರಲ್ಲಿ ಸ್ಥಾನಪನೆಯಾದ ಆಸ್ಪತ್ರೆ 100 ಬೆಡ್​ ಸಾಮರ್ಥ್ಯ ಹೊಂದಿದ್ದರೂ ಆರೋಗ್ಯ ಸೇವೆ ದೊರೆಯುವುದು ಅಷ್ಟಕಷ್ಟೆ. ಕಾಲಕ್ಕೆ ತಕ್ಕಂತೆ ಹೇಳಿಕೊಳ್ಳುವಷ್ಟರಮಟ್ಟದಲ್ಲಿ ಅಭಿವೃದ್ಧಿ ಹೊಂದದೆ ಇರುವುದು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುವುದು ಕಷ್ಟವಾಗಿದೆ.

ಮಾಲೂರು&ಹೊಸೂರು ರಸ್ತೆ, ನರಸಾಪುರ ರಸ್ತೆಯಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಲಾಂತರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೈಗಾರಿಕಾ ಪ್ರಾಂಗಣದಲ್ಲಿ ಆಸ್ಪತ್ರೆಗಳು ಇಲ್ಲದೆ ಇರುವುದರಿಂದ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ನಿತ್ಯ ಸುಮಾರು 700 ರಿಂದ 800 ಮಂದಿ ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. 50 ರಿಂದ 70 ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಸುಮಾರು 85 ಮಂದಿ ವೈದ್ಯರು, ಸಿಬ್ಬಂದಿ ಮಂಜೂರು ಆಗಿದ್ದು, 45 ಮಂದಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಚಿಕಿತ್ಸೆ ನೀಡಲು ಮೂವರು ತಜ್ಞ ವೈದ್ಯರ ಕೊರತೆ ಇದೆ. ಸ್ತ್ರೀರೋಗ, ಅರಿವಳಿಕೆ, ಮಕ್ಕಳ ತಜ್ಞರ ನೇಮಕವಾಗಬೇಕಿದೆ.

ನೋಡಲು ದೊಡ್ಡ ಕಟ್ಟಡವಿದ್ದರೂ ಇಲ್ಲಗಳ ನಡುವೆ ಆಸ್ಪತ್ರೆ ನಡೆಯುತ್ತಿದೆ. ಡಿ ಗ್ರೂಪ್​ ಸಿಬ್ಬಂದಿ, ದ್ವೀತಿಯ ದರ್ಜೆ ಮತ್ತು ಪ್ರಥಮ ದರ್ಜೆ ಸಹಾಯಕ, ಫಾರ್ಮಸಿ ಅಧಿಕಾರಿ, ನೇತ್ರ ಪರೀಕ್ಷೆ, ರಕ್ತ ಪ್ರಯೋಗಾಲಯದಲ್ಲಿ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ.

* ಬಜೆಟ್​ನಲ್ಲಿ ಮಂಜೂರು ಮಾಡಿಸುವ ಭರವಸೆ

ಶಾಸಕ ಕೆ.ವೈ.ನಂಜೇಗೌಡ ಕಳೆದ ತಿಂಗಳು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿಸಿ, ಹೊಸ ಆಸ್ಪತ್ರೆ ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಆಸ್ಪತ್ರೆಯ ಕಟ್ಟಡ ಗಮನಿಸಿ ಹೊಸ ಆಸ್ಪತ್ರೆ ಮಂಜೂರು ಮಾಡಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದು ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಅಂತೆಯೇ, ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ವಿವಿಧ ಸಂ&ಸಂಸ್ಥೆಗಳವರು ಮನವಿ ಮಾಡಿದ್ದರು. ಮೌಖಿಕವಾಗಿ ಭರವಸೆ ನೀಡಿದರೇ ಹೊರತು, ಕಾರ್ಯಗತಗೊಂಡಿಲ್ಲ. ಮಾ.7ರಂದು ರಾಜ್ಯ ಸರ್ಕಾರವು ಮಂಡನೆ ಮಾಡುವ ಬಜೆಟ್​ನಲ್ಲಾದರೂ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆಯೆ ಎಂಬ ನಿರೀೆ ಜನರದ್ದಾಗಿದೆ.

* ಪಾರ್ಕಿಂಗ್​ ಸಮಸ್ಯೆ

ಬೆಂಗಳೂರು ಮತ್ತಿತರೆಡೆಯಿಂದ ಕೆಲಸಗಳಿಗೆ ಹೋಗುವವರು ಆಸ್ಪತ್ರೆಯ ಆವರಣವನ್ನು ಪಾರ್ಕಿಂಗ್​ ಪ್ರದೇಶ ಮಾಡಿಕೊಂಡಿದ್ದಾರೆ. ಬೆಳಗ್ಗೆ ವಾಹನ ನಿಲ್ಲಿಸಿ ಹೋದರೆ ಸಂಜೆ ತೆಗೆದುಕೊಂಡು ಹೋಗುತ್ತಾರೆ.

ಈ ಮಧ್ಯೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಲು ಜಾಗ ಇರುವುದಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ ಸಮರ್ಪಕ ಪಾರ್ಕಿಂಗ್​ ವ್ಯವಸ್ಥೆ ಮಾಡಬೇಕಾಗಿದೆ.

ಕೋಟ್​....

ಮಾಲೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು 70 ಪೂರೈಸಿದ್ದು, ಶಾಸಕ ಕೆ.ವೈ.ನಂಜೇಗೌಡ ಅವರ ಸತತ ಪ್ರಯತ್ನದಿಂದಾಗಿ 10 ಎಕರೆ ಜಮೀನು ಗುರುತಿಸಿದ್ದು, ಮಂಜೂರು ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಾದ ಕೂಡಲೇ ಹೊಸ ಕಟ್ಟಡ ನಿರ್ಮಾಣವಾಗಲಿದ್ದು, ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಅನುಕೂಲವಾಗುತ್ತದೆ.

> ವಸಂತ ಕುಮಾರ್​, ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ, ಮಾಲೂರು

ಕೋಟ್​...

ಮಾಲೂರು ತಾಲೂಕಿನಲ್ಲಿ ಎಲ್ಲ ವರ್ಗದವರು ವಾಸವಿದ್ದಾರೆ. ಆರೋಗ್ಯ ಸಮಸ್ಯೆ ಎಂದು ಸರ್ಕಾರಿ ಆಸ್ಪತ್ರೆಗೆ ಹೋದರೆ ಕೋಲಾರ ಅಥವಾ ಬೆಂಗಳೂರಿಗೆ ಹೋಗಿ ಎಂದು ಹೇಳುತ್ತಾರೆ. ಬಡವರು ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವೇ?. ಆದ್ದರಿಂದಾಗಿ ಕಾಲಕ್ಕೆ ತಕ್ಕಂತೆ ಆಸ್ಪತ್ರೆ ನಿರ್ಮಾಣ ಮಾಡಬೇಕಾಗಿದೆ.

- ಹೆಸರು ಹೇಳಲು ಇಚ್ಛಿಸದ ನಾಗರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net