

ಮಾಸ್ಕೋ/ಕೀವ್: ರಷ್ಯಾ ಮತ್ತು ಯೂಕ್ರೇನ್ ನಡುವೆ 3 ವರ್ಷಗಳ ಹಿಂದೆ ಯುದ್ಧ ಆರಂಭವಾಗಿದ್ದು, ಇದನ್ನು ನಿಲ್ಲಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ವೇಗ ಸಿಕ್ಕಿದ್ದು, ಹಲವು ಸುತ್ತಿನ ಮಾತುಕತೆಗಳೂ ನಡೆದಿವೆ. ಆದರೆ ಈ ಪ್ರಯತ್ನಗಳ ನಡುವೆಯೇ ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಮತ್ತಷ್ಟು ತೀವ್ರವಾಗುತ್ತಿದ್ದು, ಕದನ ವಿರಾಮ ಏರ್ಪಡುತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕದನ ವಿರಾಮ ಮಾತುಕತೆಯ ಭಾಗವಾಗಿ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಗುರುವಾರ ಭೇಟಿಯಾಗಿದ್ದರು. ಈ ವೇಳೆ 30 ದಿನಗಳ ಕದನ ವಿರಾಮದ ಕುರಿತು ಅಮೆರಿಕ ಪ್ರಸ್ತಾವನೆ ಸಂಬಂಧ ಚರ್ಚೆ ನಡೆದಿತ್ತು. ಈ ಮಾತುಕತೆ ನಡೆದ ಕೇವಲ 24 ಗಂಟೆಗಳಲ್ಲಿ ರಷ್ಯಾ ಮತ್ತು ಯೂಕ್ರೇನ್ ನಡುವೆ ಡ್ರೋನ್ ಸಮರ ನಡೆದಿದೆ. ಎರಡೂ ದೇಶಗಳ ಸೇನೆ ತಲಾ 100 ಡ್ರೋನ್ಗಳಿಂದ ತಮ್ಮ ಮೇಲೆ ದಾಳಿ ನಡೆದಿದೆ ಎಂದು ತಿಳಿಸಿವೆ.
ಇತ್ತೀಚೆಗೆ ರಷ್ಯಾದ ರಾಜಧಾನಿ ಮಾಸ್ಕೋ ಸೇರಿದಂತೆ 10 ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಯೂಕ್ರೇನ್ ನೂರಾರು ಡ್ರೋನ್ಗಳಿಂದ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವರು ಮೃತಪಟ್ಟಿದ್ದರು. ಇದೇ ಮಾದರಿಯಲ್ಲಿ ಮತ್ತೊಮ್ಮೆ ಯೂಕ್ರೇನ್ ಡ್ರೋನ್ ದಾಳಿ ನಡೆಸಿದ್ದು, ಕ್ರಾಸ್ನೋರ್ವಿುಸ್ಕಿ ಜಿಲ್ಲೆಯಲ್ಲಿರುವ ಲುಕೋಯಿಲ್ ತೈಲ ಸಂಸ್ಕರಣಾಗಾರವನ್ನು ಗುರಿ ಆಗಿಸಿಕೊಂಡಿತ್ತು. ರಷ್ಯಾದ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದ್ದು, ತೈಲ ಸಂಸ್ಕರಣಾಗಾರದ ಬಳಿ ಡ್ರೋನ್ನ ಅವಶೇಷಗಳು ಆಕಾಶದಿಂದ ಬಿದ್ದಿವೆ ಎಂದು ವೋಲ್ಗೊಗ್ರಾಡ್ನ ಪ್ರಾದೇಶಿಕ ಗವರ್ನರ್ ಆಂಡ್ರೇ ಬೊಚೆರೋವ್ ಅವರು ತಿಳಿಸಿದ್ದಾರೆ.
ಯೂಕ್ರೇನ್ ಸೇನೆ ಹಾರಿಸಿದ್ದ 126 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ವೋಲ್ಗೊಗ್ರಾಡ್ ಪ್ರದೇಶದಲ್ಲೇ 64 ಡ್ರೋನ್ಗಳನ್ನು ನಾಶ ಮಾಡಲಾಗಿದೆ. ವೊರೊನೆಜ್, ಬೆಲ್ಗೊರೊಡ್, ಬ್ರಿಯಾನ್ಸ್, ಕುರ್ಸ್ಕ್ ಪ್ರದೇಶಗಳ ಮೇಲೂ ಡ್ರೋನ್ ದಾಳಿ ನಡೆದಿದೆ ಎಂದು ರಷ್ಯಾ ಸಚಿವಾಲಯ ತಿಳಿಸಿದೆ. ಇದೇ ವೇಳೆ ಶುಕ್ರವಾರ ರಾತ್ರಿಯಿಡೀ ರಷ್ಯಾ ಸೇನೆ ಯೂಕ್ರೇನ್ ಮೇಲೆ 1,787 ಡ್ರೋನ್ಗಳು ಮತ್ತು 2 ಖಂಡಾಂತರ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂದು ಯೂಕ್ರೇನ್ ಸೇನೆ ತಿಳಿಸಿದೆ. ಇನ್ನು ರಷ್ಯಾ ಸೇನೆ ಯೂಕ್ರೇನ್ನಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ, ಇದರಿಂದ ವಿದ್ಯುತ್ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ಯೂಕ್ರೇನ್ನ ಖಾಸಗಿ ವಿದ್ಯುತ್ ಕಂಪನಿ ಡಿಟಿಇಕೆ ತಿಳಿಸಿದೆ.
ಕದನ ವಿರಾಮಕ್ಕೆ ಷರತ್ತು: ಕದನ ವಿರಾಮದ ಕುರಿತು ರಷ್ಯಾ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಇದರ ಹೊರತಾಗಿಯೂ ಪುತಿನ್ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಷರತ್ತುಬದ್ಧ ಕದನ ವಿರಾಮದ ಪ್ರಸ್ತಾವನೆ ಇಡುತ್ತಿದ್ದಾರೆ. ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ್ದ ಪುತಿನ್ ‘ಕದನ ವಿರಾಮದ ಪರಿಕಲ್ಪನೆ ಸರಿ ಇದೆ. ಆದರೆ ಈ ಸಂಬಂಧ ಹಲವು ಸಮಸ್ಯೆಗಳ ಕುರಿತು ರ್ಚಚಿಸಬೇಕಿದೆ. ಟ್ರಂಪ್ ಮತ್ತು ಅಮೆರಿಕದ ನಿಯೋಗದೊಂದಿಗೆ ವಿವರವಾದ ಚರ್ಚೆ ನಡೆಯಬೇಕಿದೆ. ಕದನ ವಿರಾಮ ಘೋಷಣೆಯಾದರೆ ರಷ್ಯಾದ ಕುರ್ಸ್ಕ್ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಯೂಕ್ರೇನ್ ಸೇನೆ ಶರಣಾಗುತ್ತಾ?’ ಎಂದು ಪ್ರಶ್ನಿಸಿದ್ದರು. ಇನ್ನು ಕದನ ವಿರಾಮದ 30 ದಿನವನ್ನು ಯೂಕ್ರೇನ್ ಹೇಗೆ ಬಳಸಿಕೊಳ್ಳಬಹುದು. ಯೂಕ್ರೇನ್ ಸೇನೆ ಮತ್ತು ಶಸ್ತ್ರಾಸ್ತ್ರ ಕ್ರೋಡೀಕರಣ ಮಾಡುವ ಸಾಧ್ಯತೆ ಇದೆ ಮತ್ತು ಕದನ ವಿರಾಮವನ್ನು ಎರಡೂ ದೇಶಗಳು ಸರಿಯಾಗಿ ಪಾಲಿಸುತ್ತಿವೆ ಎಂಬುದನ್ನು ಖಾತ್ರಿಪಡಿಸುವವರು ಯಾರು ಎಂದು ಪುತಿನ್ ಪ್ರಶ್ನೆ ಎತ್ತಿದ್ದರು.
ಯೂಕ್ರೇನ್ಗೆ ಬೆಂಬಲ: ಯೂಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲ್ಲಿಸುವ ಸಂಬಂಧ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಸಮಾನಮನಸ್ಕ ರಾಷ್ಟ್ರಗಳ ಒಕ್ಕೂಟ ಸ್ಥಾಪಿಸಲು ಬ್ರಿಟನ್ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ 25 ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾತನಾಡಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ‘ಅಮೆರಿಕ ಪ್ರಸ್ತಾಪಿಸಿರುವ ಕದನ ವಿರಾಮ ಒಪ್ಪಂದದೊಂದಿಗೆ ಪುಟಿನ್ ಆಟ ಆಡಲು ನಾವು ಬಿಡುವುದಿಲ್ಲ. ಕದನ ವಿರಾಮದ ಕುರಿತು ಪುತಿನ್ ಗಂಭೀರವಾಗಿ ಚಿಂತಿಸುತ್ತಿದ್ದರೆ, ಯೂಕ್ರೇನ್ ಮೇಲಿನ ದಾಳಿ ನಿಲ್ಲಿಸಬೇಕು. ರಷ್ಯಾ ಚರ್ಚೆಗೆ ಮುಂದಾದಾಗ ಕದನ ವಿರಾಮದ ಜಾರಿ ಸಂಬಂಧ ನಿಗಾ ವಹಿಸಲು ನಾವು ಸಿದ್ಧರಿರಬೇಕು. ರಷ್ಯಾ ಕದನ ವಿರಾಮಕ್ಕೆ ಒಪ್ಪದಿದ್ದರೆ ಯುದ್ಧ ನಿಲ್ಲಿಸಲು ಆರ್ಥಿಕ ನಿರ್ಬಂಧ ಹೆಚ್ಚಿಸಲು ನಾವು ಸಿದ್ಧರಿರಬೇಕು’ ಎಂದಿದ್ದಾರೆ. ಇಟಲಿ ಪ್ರಧಾನಿ ಎಮ್ಯಾನುಯಲ್ ಮ್ಯಾಕ್ರೇನ್ ಸಹ ಯುದ್ಧ ನಿಲ್ಲಿಸುವಂತೆ ರಷ್ಯಾವನ್ನು ಆಗ್ರಹಿಸಿದ್ದಾರೆ.
ಲಕ್ಷಾಂತರ ಜನರ ಸಾವು: 2022ರ ಫೆ.24ರಂದು ಆರಂಭವಾದ ಈ ಯುದ್ಧದಲ್ಲಿ ಎರಡೂ ಸೇನೆಗಳು ಸಾಕಷ್ಟು ಅಪಾರ ಪ್ರಮಾಣದ ನಷ್ಟ ಅನುಭವಿಸಿವೆ. ಎರಡೂ ದೇಶಗಳು ಮೃತಪಟ್ಟವರು ಮತ್ತು ಗಾಯಾಳುಗಳ ನಿಖರ ಮಾಹಿತಿ ನೀಡಿಲ್ಲ. ಆದರೆ ಯುದ್ಧದಲ್ಲಿ 7 ಲಕ್ಷ ಯೂಕ್ರೇನ್ ಸೈನಿಕರು ಮತ್ತು 10 ಲಕ್ಷ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ವಿವಿಧ ದೇಶಗಳು ಮತ್ತು ಮಾಧ್ಯಮಗಳು ಅಂದಾಜಿಸಿದಂತೆ ಸಾವು ನೋವಿನ ಪ್ರಮಾಣ ಈಗ ಲಭ್ಯವಿರುವ ಅಂಕಿ-ಅಂಶಗಳಿಗಿಂತ ಹೆಚ್ಚಿದೆ.
ಅಮೆರಿಕ ಪ್ರಯತ್ನ: ಯೂಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಸೌದಿ ಅರೇಬಿಯಾದಲ್ಲಿ ರಷ್ಯಾ ಮತ್ತು ಯೂಕ್ರೇನ್ ನಿಯೋಗದೊಂದಿಗೆ ಸಭೆಗಳನ್ನೂ ನಡೆಸಿದೆ. ಜತೆಗೆ ಪುತಿನ್ ಜತೆ ಟ್ರಂಪ್ ನಿರಂತರ ಸಂಪರ್ಕದಲ್ಲಿದ್ದು ಚರ್ಚೆ ನಡೆಸುತ್ತಿದ್ದಾರೆ. ಗುರುವಾರ ಅಮೆರಿಕದ ವಿಶೇಷ ರಾಯಭಾರಿ ಸಹ ಕದನ ವಿರಾಮ ಪ್ರಸ್ತಾವನೆ ಬಗ್ಗೆ ಪುತಿನ್ ಜತೆ ರ್ಚಚಿಸಿದ್ದರು, ಅಮೆರಿಕದ ಪ್ರಯತ್ನದ ನಡುವೆ ಯುದ್ಧ ಮತ್ತೆ ತೀವ್ರವಾಗುತ್ತಿರುವುದು ಕದನ ವಿರಾಮ ಮಾತುಕತೆಗೆ ಹಿನ್ನಡೆಯುಂಟು ಮಾಡುತ್ತಿದೆ.