

ಕೋಲ್ಕತ: ನಮ್ಮಲ್ಲಿ ಕೆಲವು ಕಟ್ಟುಪಾಡುಗಳನ್ನು ನಾವೇ ಮಾಡಿಕೊಂಡಿದ್ದೇವೆ. ಈ ವಯಸ್ಸಿನವರು ಹೀಗೇ ಬಟ್ಟೆ ಹಾಕಿಕೊಳ್ಳಬೇಕು, ಇದೇ ರೀತಿಯಲ್ಲಿ ಬದುಕಬೇಕು ಎನ್ನುವ ಬೇಲಿಯೊಳಗೇ ಬದುಕಲು ಇಷ್ಟಪಡುತ್ತೇವೆ. ಯಾರಾದರೂ ಆ ಬೇಲಿ ದಾಟಿದ್ದು ಕಂಡರೆ, ಅವರನ್ನೂ ಅಪಹಾಸ್ಯ ಮಾಡಿ ನಕ್ಕು ಬಿಡುತ್ತೇವೆ. ಇದೇ ರೀತಿಯಲ್ಲಿ ಮಹಿಳೆಯೊಬ್ಬಳನ್ನು ಅಪಹಾಸ್ಯ ಮಾಡಿದ ಸಂಬಂಧಿಗಳಿಗೆ ಆಕೆಯ ಮಗ ಪಾಠ ಕಲಿಸಿದ ವಿಧಾನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಕೋಲ್ಕತ ಮೂಲದ ಪುಷ್ಪಕ್ ಸೇನ್(25) ಅವರ ಅಮ್ಮ (54) ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆರಳಿದ್ದರು. ಪಾರ್ಟಿಗೆ ತೆರಳುವಾಗ ಚಂದದ ಕೆಂಪು ಲಿಪ್ಸ್ಟಿಕ್ ಅನ್ನು ಹಚ್ಚಿಕೊಂಡು ಹೋಗಿದ್ದರಂತೆ. ಆದರೆ ಅದನ್ನು ಕಂಡ ಅವರ ಸಂಬಂಧಿಗಳು ಅವರಿಗೆ ಅಪಹಾಸ್ಯ ಮಾಡಿದ್ದಾರೆ.
ಅಮ್ಮನಿಗೆ ಆದ ಅವಮಾನದ ಬಗ್ಗೆ ಪುಷ್ಪಕ್ ಗೆ ನೋವಾಗಿದೆ. ಸಂಬಂಧಿಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಗಾಢ ಕೆಂಪು ಲಿಪ್ಸ್ಟಿಕ್ ಹಚ್ಚಿಕೊಂಡು ಫೋಟೋ ತೆಗೆದುಕೊಂಡಿದ್ದಾರೆ. ಅಮ್ಮನಿಗೆ ಅವಮಾನ ಮಾಡಿದ ಎಲ್ಲ ಸಂಬಂಧಿಗಳಿಗೆ ಆ ಫೋಟೋ ಕಳುಹಿಸಿದ್ದಾರೆ. ಗುಡ್ ಮಾರ್ನಿಂಗ್, ಗೆಟ್ ವೆಲ್ ಸೂನ್ ಎನ್ನುವ ಸಂದೇಶವನ್ನೂ ಕಳುಹಿಸಿಕೊಟ್ಟಿದ್ದಾರೆ. ನಿಮ್ಮ ಬುದ್ಧಿಗೆ ಮಂಕು ಹಿಡಿದಿದೆ. ಆದಷ್ಟು ಬೇಗ ಹುಷಾರಾಗಿ ಎನ್ನುವ ಅರ್ಥವಿದ್ದ ಸಂದೇಶವನ್ನು ಕಂಡು ಸಂಬಂಧಿಕರು ತಮ್ಮ ತಪ್ಪಿಗೆ ತಾವೇ ತಲೆ ತಗ್ಗಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪುಷ್ಪಕ್ ಆ ಫೋಟೋವನ್ನು ಫೇಸ್ಬುಕ್ನಲ್ಲೂ ಹಂಚಿಕೊಂಡಿದ್ದಾರೆ. 'ನನ್ನ ಸಂಬಂಧಿಗಳಲ್ಲಿ ಅನೇಕರ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಿದ್ದಾರೆ. ಅವರಲ್ಲಿ ಹಲವರು ಆ ಪಾರ್ಟಿಯಲ್ಲಿದ್ದರು. ನನ್ನ ಅಮ್ಮನಿಗೆ ಅವಮಾನವಾಗುತ್ತಿದ್ದರೂ, ಅವರು ಒಂದೇ ಒಂದು ಮಾತಾಡಿಲ್ಲ. ನನ್ನನ್ನು ನೋಡಿ, ಮುಖದ ತುಂಬಾ ಗಡ್ಡವಿರುವ ನಾನು ರೆಡ್ ಲಿಪ್ಸ್ಟಿಕ್ ಹಚ್ಚಿಕೊಂಡಿದ್ದೇನೆ. ನಾನು ಈ ಮೂಲಕ ಎಲ್ಲ ತಾಯಂದಿರ, ಅಕ್ಕ ತಂಗಿಯರ, ಮಹಿಳೆಯರ ಪರವಾಗಿ ನಿಲ್ಲುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಪುಷ್ಪಕ್ ಅವರ ಈ ವಿಶೇಷ ಹೋರಾಟಕ್ಕೆ ಯುವಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸಮಾಜದ ತಪ್ಪನ್ನು ಸರಿಯಾಗಿ ಎತ್ತಿ ತೋರಿಸಿದ್ದೀರಿ ಎಂದು ಚಪ್ಪಾಳೆಗಳು ಕೇಳಿಬರಲಾರಂಭಿಸಿವೆ. (ಏಜೆನ್ಸೀಸ್)