ನಿವೇದಿತಾ-ಚಂದನ್​ ನಾಲ್ಕು ವರ್ಷಗಳ ವೈವಾಹಿಕ ಜೀವನ ಅಂತ್ಯ; ಸೋಶಿಯಲ್​ ಮೀಡಿಯಾ ಕ್ರೇಜ್​ಗೆ ಬಲಿಯಾಯ್ತಾ ದಾಂಪತ್ಯ

Chandan Niveditha
Published on

ಬೆಂಗಳೂರು: ರ್‍ಯಾಪರ್​ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಸೂಚಿಸಿ ವಿಚ್ಛೇದನ ಪಡೆದಿದ್ದಾರೆ. ಕೌಟುಂಬಿಕ ನ್ಯಾಯಾಲಯವು ಇವರ ಕೋರಿಕೆಯನ್ನು ಪುರಸ್ಕರಿಸಿದೆ. ದಂಪತಿ ವಿಚ್ಛೇದನ ನಿರ್ಧಾರಕ್ಕೆ ಬರಲು ಸಾಮಾಜಿಕ ಜಾಲತಾಣವೇ ಮುಖ್ಯ ಕಾರಣ ಎಂದು ಸೋಶಿಯಲ್​ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.

ಚಂದನ್​ ಹಾಗೂ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್​ ಆಗಿರುತ್ತಿದ್ದರು. ಜೊತೆಯಾಗಿ ರೀಲ್ಸ್​ ಮಾಡುತ್ತಿದ್ದರು ಮತ್ತು ಎಲ್ಲೇ ಕಾರ್ಯಕ್ರಮ ನಡೆದರೂ ಜೊತೆಯಾಗಿ ತೆರಳುತ್ತಿದ್ದರು. ಇವರಿಬ್ಬರ ನಡುವಿನ ಅನ್ಯೋನ್ಯತೆ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇದೀಗ ದಂಪತಿ ಬೇರಾಗುವುದಕ್ಕೆ ಸಾಮಾಜಿಕ ಜಾಲತಾಣವೇ ಕಾರಣವಾಯ್ತ ಎಂಬ ಚರ್ಚೆ ಶುರುವಾಗಿದೆ. ಆದರೆ, ಇವರಿಬ್ಬರು ನ್ಯಾಯಾಲಯದಿಂದ ಹೊರಬರುವಾಗ ಕೈ ಹಿಡಿದು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇವರಿಬ್ಬರು ನಿಜವಾಗಿಯೂ ಬೇರಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.

ನಿವೇದಿತಾ ಗೌಡ ಹಾಗೂ ರ್‍ಯಾಪರ್ ಚಂದನ್​ ಶೆಟ್ಟಿ ಆಗಾಗ ತಮ್ಮ ಪೋಸ್ಟ್‌ ಹಾಗೂ ರೀಲ್ಸ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಿದ್ದರು. ಹಿಂದೊಮ್ಮೆ ಅಂಡರ್​ ವಾಟರ್​ ಶೂಟ್​ ಮಾಡಿರುವ ಜೋಡಿ ಲಿಪ್‌ ಕಿಸ್‌ ಮಾಡಿದ ರೊಮ್ಯಾಂಟಿಕ್​ ವಿಡಿಯೋ ಶೇರ್‌ ಮಾಡಿಕೊಂಡಿತ್ತು. ಸಾವಿರಾರು ಜನರು ಲೈಕ್​ ಮಾಡಿದ್ದರು. ಕೆಲವರು ಈ ವಿಡಿಯೊಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದರು.

Chandan Niveditha

ಇದಲ್ಲದೆ ಈ ಇಬ್ಬರನ್ನು ಸಾಕಷ್ಟು ವಿಚಾರಗಳಿಗೆ ಟ್ರೋಲ್​ ಮಾಡಲಾಗಿತ್ತು. 2017ರಲ್ಲಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-5ರಲ್ಲಿ ಚಂದನ್​ ಹಾಗೂ ನಿವೇದಿತಾ ಸ್ಪರ್ಧಿಸಿದ್ದರು. ಮೊದಲಿಗೆ ಇವರಿಬ್ಬರು ನಾವು ಅಣ್ಣ-ತಂಗಿ ಎಂದು ಹೇಳಿಕೊಳ್ಳುತ್ತಿದ್ದರು. ದಿನ ಕಳೆದಂತೆ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ತಿರುಗಿ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ನಿವೇದಿತಾಗೆ ಪ್ರಪೋಸ್​ ಮಾಡುವ ಮೂಲಕ ಚಂದನ್​ ವಿವಾದಕ್ಕೀಡಾಗಿದ್ದರು. ಈ ವಿಚಾರವಾಗಿ ಇಬ್ಬರನ್ನು ಟ್ರೋಲ್​ ಮಾಡಲಾಗಿತ್ತು.

ಇದಾದ ಬಳಿಕ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯು ಆ ಬಳಿಕ ರೀಲ್ಸ್​ ಮಾಡುತ್ತಾ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡರನ್ನು ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್​ ಮಾಡಲಾಗುತ್ತಿತ್ತು. ಇದೀಗ ಇವರಿಬ್ಬರು ಬೇರೆಯಾಗಲು ಸಾಮಾಜಿಕ ಜಾಲತಾಣವೇ ಕಾರಣವಾಯ್ತಾ ಎಂಬ ಅನುಮಾನ ಮೂಡಲು ಶುರುವಾಗಿದ್ದು, ಈ ಜೋಡಿ ಇನ್ನಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net