

ಚೆನ್ನೈ: ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಹಿರಿಯ ಗಾಯಕ ಕೆಜೆ ಯೇಸುದಾಸ್ (KJ Yesudas) (85) ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಯೇಸುದಾಸ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಅವರ ಮಗ ವಿಜಯ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಿಜಯ್ ಯೇಸುದಾಸ್ (Vijay Yesudas), ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರು ಆರೋಗ್ಯ ಚೆನ್ನಾಗಿದ್ದು, ಸದ್ಯ ಯುಎಸ್ಎನಲ್ಲಿ ನೆಲೆಸಿದ್ದಾರೆ ಎಂದು ಅವರ ಮಗ ವಿಜಯ್ ಯೇಸುದಾಸ್ ತಿಳಿಸಿದ್ದಾರೆ.
ಗಾನ ಗಂಧರ್ವ ಎಂದೇ ಖ್ಯಾತಿ ಪಡೆದಿರುವ ಯೇಸುದಾಸ್ (Yesudas) ಅವರು 2025ರ ಜನವರಿ 10ರಂದು 85ನೇ ವಸಂತಕ್ಕೆ ಕಾಲಿಟ್ಟಿದ್ದರು. ಸಂಗೀತ ಕ್ಷೇತ್ರದಲ್ಲಿ ಆರು ದಶಕದಿಂದ ಸೇವೆ ಸಲ್ಲಿಸುತ್ತಿರುವ ಯೇಸುದಾಸ್ ಅವರು 50 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಯೇಸುದಾಸ್ ಅವರು ಮಲಯಾಳಂ, ತಮಿಳು, ಕನ್ನಡ, ತೆಲುಗು, ತೆಲುಗು, ಅರೇಬಿಕ್, ರಷ್ಯನ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡನ್ನು ಹಾಡಿ ಖ್ಯಾತಿ ಗಳಿಸಿದ್ಧಾರೆ.
ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಯೇಸುದಾಸ್ ಅವರು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1975 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಯೇಸುದಾಸ್ ಅವರು ಪಡೆದಿದ್ದಾರೆ.