

ಬೆಂಗಳೂರು: ನಗರದ ಆನೇಕಲ್ನಲ್ಲಿರುವ ಎಸ್ಬಿಐ ಶಾಖೆಯ ವ್ಯವಸ್ಥಾಪಕರೊಬ್ಬರು ಕನ್ನಡ ಮಾತನಾಡಲು ನಿರಾಕರಿಸುತ್ತಿರುವುದ ವೀಡಿಯೊ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇನ್ಫೋಸಿಸ್ನ ಮಾಜಿ ನಿರ್ದೇಶಕ ಟಿವಿ ಮೋಹನ್ ದಾಸ್ ಪೈ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮ್ಯಾನೇಜರ್ ಅನ್ನು ಸಮರ್ಥಿಸಿಕೊಂಡ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪೈ, ಪ್ರತಿಯೊಂದು ವ್ಯವಹಾರವು ತನ್ನ ಸ್ಥಳೀಯ ಗ್ರಾಹಕರಿಗೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಸೇವೆ ಸಲ್ಲಿಸಬೇಕು. ಇದು ಮತ್ತೆ ಬ್ರಿಟಿಷ್ ರಾಜ್ ಅಲ್ಲ. ಇದು ಸೇವಾ ವ್ಯವಹಾರ. 200 ಪದಗಳಲ್ಲಿ ಮಾತನಾಡುವುದನ್ನು ಕಲಿಯುವುದು ಕಷ್ಟವೇ? ಯಾರೂ ಯಾರನ್ನೂ ಓದಲು ಮತ್ತು ಬರೆಯಲು ಕೇಳುವುದಿಲ್ಲ. ಆದರೆ ಮಾತನಾಡಲು ನಿಮ್ಮ ಗ್ರಾಹಕರಿಗೆ ಗೌರವ ತೋರಿಸಲು ಕೆಲವು ಪದಗಳನ್ನು ಕಲಿಯಬೇಕಾಗಿರುತ್ತದೆ. ಅವರು ಗ್ರಾಹಕರು ನಿಮ್ಮ ಬಂಧಿತರಲ್ಲ. ಆದ್ದರಿಂದ ಈ ದುರಹಂಕಾರವು ತುಂಬಾ ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಚಂದಾಪುರದಲ್ಲಿರುವ ಎಸ್ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಕನ್ನಡದ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ್ದರು. ಬ್ಯಾಂಕ್ಗೆ ಹೋಗಿದ್ದ ಕನ್ನಡಿಗರು ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಿದ್ದಕ್ಕೆ, ಅದು ಆಗುವುದಿಲ್ಲ ಎಂದು ಉದ್ಧಟತನದಿಂದ ಮಾತನಾಡಿದ್ದರು. ಇದು ಕರ್ನಾಟಕ ಎಂದು ಹೇಳಿದ್ದಕ್ಕೆ ಕರ್ನಾಟಕ ಆದರೆ ನನಗೇನು? ಇದು ಇಂಡಿಯಾ, ಹಾಗಾಗಿ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ಏನಾದರೂ ಮಾಡಿಕೊಳ್ಳಿ ನಾನು ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎಂದು ಸವಾಲು ಹಾಕಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
(ಏಜೆನ್ಸೀಸ್)