

ಬೆಂಗಳೂರು: ಕಾಂಗ್ರೆಸ್‌ನವರದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯೇ ಅಥವಾ ಸರ್ಕಾರಿ ಪ್ರಾಯೋಜಿತ ಬೆದರಿಕೆಯೆ ?. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್ ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ನೀಡಿದರೆ ಇದೇ ರೀತಿ ವರ್ತಿಸುತ್ತಾರೆಯೆ ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದನ್ನೇ ಅಪರಾಧ ಎಂದು ಬಿಂಬಿಸಿ, ಸರ್ಕಾರವೇ ನೇತೃತ್ವವಹಿಸಿ ದಂಗೆ ಎಬ್ಬಿಸುವ ಮಾತು ದುರದೃಷ್ಟಕರ, ಸಂವಿಧಾನ ವಿರೋಧಿ ಎಂದು ಆಕ್ಷೇಪಿಸಿದರು.
ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೇ ಎಂದು ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯ ಆ.29ರವರೆಗೆ ತಡೆಯಾಜ್ಞೆ ನೀಡಿದರು. ಒಂದು ವೇಳೆ ನ್ಯಾಯಾಧೀಶರು ಸಿದ್ದರಾಮಯ್ಯ ವಿರುದ್ಧ ತೀರ್ಪು ಕೊಟ್ಟರೆ ಅವರ ವಿರುದ್ಧವೂ ದಂಗೆ ಏಳಿಸುತ್ತಾರಾ ? ಎಂದು ಕೇಳಿದರು.
ಐವನ್ ಡಿಸೋಜ ಸೇರಿ ಯಾರೆಲ್ಲ ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದಾರೋ, ಭಯೋತ್ಪಾದಕರ ತರಹ ಮಾತನಾಡಿದ್ದಾರೋ ಅವರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಳ್ಳಬೇಕಾಗಿತ್ತು.
ಎಷ್ಟೋ ಪ್ರಕರಣಗಳಲ್ಲಿ ದೂರುದಾರರೇ ಇಲ್ಲದೆ ಡಿಜಿಪಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದಿದ್ದಿದೆ. ಆದರೆ ಇಲ್ಲಿ ಇನ್ನೂ ಯಾಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಲ್ಲವೆಂದು ಸಿ.ಟಿ.ರವಿ ಕೇಳಿದರು.