ಆಪ್ತ ಸಹಾಯಕನಿಗೆ ಸಭೆ ನಡೆಸಲು ಅವಕಾಶವಿದೆಯಾ?

sgr hakre
ಮಲ್ಲಿಕಾರ್ಜುನ ಹಕ್ರೆ
Published on

ಸಾಗರ: ಶಾಸಕರ ಆಪ್ತ ಸಹಾಯಕ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲು ಅವಕಾಶ ಇದೆಯಾ? ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಪ್ರಶ್ನಿಸಿದರು.

ಶಾಸಕರ ಅಕ್ಕನ ಮಗ ಎಂದೋ ಅಥವಾ ಶಾಸಕರು ಹೇಳಿದ್ದಾರೆಂದೋ ಸಭೆ ಕರೆಯುವ ಅಧಿಕಾರ ಬರುತ್ತದೆಯಾ? ಅತಿವೃಷ್ಟಿ ಸಂದರ್ಭ ಶಾಸಕರು ಇರದಿದ್ದಾಗ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಹಿರಿಯ ಅಧಿಕಾರಿಗಳು ಸಭೆ ಕರೆಯಬಹುದು. ಆದರೆ ಶಾಸಕರ ಆಪ್ತ ಸಹಾಯಕ ಸಭೆ ಕರೆದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರಾಜ್ಯದಲ್ಲಿಯೇ ಮೊದಲು. ತಕ್ಷಣ ಜಿಲ್ಲಾಧಿಕಾರಿಗಳು ಶಾಸಕರ ಆಪ್ತ ಕಾರ್ಯದರ್ಶಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಲೂಕಿನಲ್ಲಿ ವಿಪರೀತ ಮಳೆಯಿಂದ ಜನ ಕಂಗಾಲಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಶಾಸಕರು ವಿದೇಶ ಪ್ರವಾಸ ಎಷ್ಟು ಸರಿ? ಚುನಾಯಿತ ಪ್ರತಿನಿಧಿಗಳ ಅವಧಿಯಲ್ಲಿ ಪ್ರಜೆಗಳು ಶ್ರೀಮಂತರಾಗಬೇಕು. ಆದರೆ ನಮ್ಮ ಕ್ಷೇತ್ರದಲ್ಲಿ ಪ್ರಜೆಗಳೇ ಬಡವರಾಗುತ್ತಿದ್ದಾರೆ. ಶಾಸಕರು ಶ್ರೀಮಂತರಾಗುತ್ತಿದ್ದರೆ. ಅವರು ಎಲ್ಲೆಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಮುಂದೆ ದಾಖಲೆ ಸಹಿತ ಜನತೆ ಮುಂದಿಡುತ್ತೇನೆ ಎಂದರು.

ತಾಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪತ್ರಕರ್ತರನ್ನು ಸೇರಿ ಜನರನ್ನು ಬೆದರಿಸುವ ಕೆಲಸಕ್ಕೆ ದಂಧೆಕೋರರು ಇಳಿದಿದ್ದಾರೆ. ಅಂಥವರಿಗೆ ಪೊಲೀಸ್ ರಕ್ಷಣೆ ಸಿಗುತ್ತಿದೆ. ಮಂಕೋಡ್ ಸರ್ವೇ ನಂ.59ರ ಸರ್ಕಾರಿ ಭೂಮಿ ಫೋರ್ಜರಿ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿದ್ದ ಗ್ರಾಮ ಲೆಕ್ಕಿಗ ವೆಂಕಟೇಶ್ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದಾನೆ. ಅವನಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ಬೆಂಬಲವಿದೆ ಎನ್ನುವ ಗಂಭೀರ ಆರೋಪವಿದೆ. ಆದರೆ ಪೊಲೀಸರು ಅವರನ್ನು ಬಿಟ್ಟು ಕಳಿಸಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಬಿಟ್ಟು ಕಳಿಸಿದ ಪೊಲೀಸರ ವಿರುದ್ಧ ಎಸ್ಪಿ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು

ತುಮರಿಯಲ್ಲಿ ಮಂಜುನಾಥ್ ಎಂಬುವವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು. ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ 8-10 ಕೊಲೆ ಪ್ರಕರಣಗಳು ನಡೆದಿವೆ. ಈತನಕ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ತಾಲೂಕಿನಲ್ಲಿ ಕಾನೂನುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕರ ನಿಷ್ಕ್ರಿಯತೆಯೇ ಇದಕ್ಕೆ ಕಾರಣ ಎಂದು ದೂರಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ಪ್ರಮುಖರಾದ ಎಚ್.ಎಸ್.ರಮೇಶ್, ಗಿರೀಶ್ ಗೌಡ, ನಾಗರಾಜ್, ಅರುಣ ಪೂಜಾರಿ ಸೂರಜ್, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net