

ನವದೆಹಲಿ: ಕರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ಎಂದೇ ಬಿಂಬಿತವಾಗಿದ್ದ ಪ್ಲಾಸ್ಮಾ ಥೆರಪಿ ಇದೀಗ ಯಶಸ್ಸು ಕಂಡಿದ್ದು, 49 ವರ್ಷದ ಸೋಂಕಿತರೊಬ್ಬರು ಈ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ, ಪ್ಲಾಸ್ಮಾ ಥೆರಪಿ ಯಶಸ್ವಿ ಕಂಡ ದೇಶದಲ್ಲಿಯೇ ಮೊದಲ ಪ್ರಕರಣ ಇದಾಗಿದೆ.
ಪೂರ್ವ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈ ವ್ಯಕ್ತಿ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದೇ 4ನೇ ತಾರೀಖಿನಂದು ಈ ವ್ಯಕ್ತಿ ದಾಖಲಾಗಿದ್ದರು. ಕ್ರಮೇಣ ಅವರ ಆರೋಗ್ಯ ಹದಗೆಟ್ಟು ನ್ಯುಮೋನಿಯಾಕ್ಕೆ ತುತ್ತಾಗಿದ್ದರು. ಇವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಂತರ ಪ್ಲಾಸ್ಮಾ ಚಿಕಿತ್ಸೆ ನೀಡಲು ಬಗ್ಗೆ ವೈದ್ಯರು ಚಿಂತನೆ ನಡೆಸಿದ್ದರು.
ಕರೊನಾ ಸೋಂಕಿನಿಂದ ಗುಣ ಮುಖರಾದವರ ದೇಹದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ. ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸಲಾಗುತ್ತದೆ. ಕರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಅರ್ಹರು. ಇದೇ ಪ್ಲಾಸ್ಮಾ ಥೆರಪಿ. ಈ ಥೆರಪಿ ನೀಡಲು ವೈದ್ಯರು ಸೋಂಕಿನಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡುವ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದರು.
ಆಗ ಅವರ ನೆರವಿಗೆ ಬಂದದ್ದು, ಅಹಮದಾಬಾದ್‌ನ ಸ್ಮೃತಿ ಠಕ್ಕರ್. ಸೋಂಕುಮುಕ್ತಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 14 ದಿನಗಳ ಕ್ವಾರಂಟೈನ್‌ನಲ್ಲಿದ್ದ ಸ್ಮೃತಿ ಅವರಿಗೆ ವೈದ್ಯರು ರಕ್ತದಿಂದ ಪ್ಲಾಸ್ಮಾ ಕಣಗಳನ್ನು ನೀಡುವಿರಾ ಎಂದು ಕೇಳಿದರು. ಇದರಿಂದ ಇನ್ನೂ ಇಬ್ಬರು ಸೋಂಕಿತರಿಗೆ ಗುಣಮುಖ ಮಾಡಬಹುದು ಎಂದು ಅವರು ಹೇಳಿದರು. ಇದಕ್ಕೆ ಸ್ಮೃತಿ ಒಪ್ಪಿಕೊಂಡಿದ್ದರು. ಎರಡು ತಾಸಿನಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಪ್ಲಾಸ್ಮಾ ಥೆರಪಿಯನ್ನು ವೈದ್ಯರು ನಡೆಸಿದ್ದರು. ಅದೀಗ ಫಲಕಾರಿಯಾಗಿದೆ.
ಪ್ಲಾಸ್ಮಾ ಥೆರಪಿ ಹಾಗೂ ದಾನದ ಕುರಿತಾಗಿ ವೈದ್ಯರು ಹೇಳಿರುವುದು ಹೀಗೆ: ‘ಮನುಷ್ಯರ ದೇಹದಲ್ಲಿ ದೇಹನಿರೋಧಕ ಶಕ್ತಿ ಹೆಚ್ಚಿಗೆ ಇದ್ದಷ್ಟು ಯಾವುದೇ ವೈರಸ್‌ಗಳು ಸುಲಭದಲ್ಲಿ ಅಟ್ಯಾಕ್ ಮಾಡುವುದಿಲ್ಲ. ಕರೊನಾ ವೈರಸ್ ಕೂಡ ಇದರಿಂದ ಹೊರತಾಗಿಲ್ಲ. ರೋಗವನ್ನು ಉಂಟು ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕರೊನಾ ವೈರಸ್‌ನಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.
ಅಂಥ ವ್ಯಕ್ತಿಗಳ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದು, ಅದನ್ನು ಸೋಂಕಿತರ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಲು ಅವಕಾಶವಿದೆ. ಒಬ್ಬ ರೋಗಿಗೆ ಒಂದು ಡೋಸ್ ಸಾಕಾಗುತ್ತದೆ. ಹೀಗಾಗಿ ಗುಣಮುಖರಾದವರು ಒಬ್ಬರೇ ಇಬ್ಬರು ಸೋಂಕಿತರಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.
ಪ್ಲಾಸ್ಮಾ ಥೆರಪಿಯ ಫಲಿತಾಂಶಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತದೆ. ಏಕೆಂದರೆ ರೋಗಿಯಲ್ಲಿನ ರೋಗ ನಿರೋಧಕ ಶಕ್ತಿ ಭಿನ್ನವಾಗಿರುವ ಕಾರಣ, ಅದರ ಸಾಮರ್ಥ್ಯದ ಮೇಲೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ವೈದ್ಯರು. (ಏಜೆನ್ಸೀಸ್)