

ಟೆಹರಾನ್: ನೌಕಾ ಸಮರಾಭ್ಯಸದಲ್ಲಿ ನಿರತವಾಗಿದ್ದ ಯುದ್ಧ ಹಡಗಿಗೆ ಮತ್ತೊಂದು ಹಡಗಿನಿಂದ ಹಾರಿಬಂದ ಕ್ಷಿಪಣಿ ಬಡಿದು 19 ಯೋಧರು ಸ್ಥಳದಲ್ಲಿಯೇ ಛಿದ್ರವಾಗಿರುವ ಘಟನೆ ಇರಾನ್ನಲ್ಲಿ ನಡೆದಿದೆ.
ಇರಾನ್‌ನ ದಕ್ಷಿಣ ಕರಾವಳಿಯ ಬಂಡಾರ್-ಎ-ಜಾಸ್ಕ್ ಬಳಿ ನೌಕಾಪಡೆಯ ಯುದ್ಧ ಹಡಗುಗಳು ಸಮರಾಭ್ಯಾಸದಲ್ಲಿ ನಿರತವಾಗಿದ್ದಾಗ ಈ ಘಟನೆ ಸಂಭವಿಸಿದೆ, ಅನೇಕ ಹಡಗುಗಳು ಸಮರಾಭ್ಯಾಸದಲ್ಲಿ ನಿರತವಾಗಿದ್ದವು. ಆದರೆ ಅಚಾನಕ್ ಆಗಿ ಒಂದು ಹಡಗಿನಿಂದ ಸಿಡಿದ ಕ್ಷಿಪಣಿ ಸಮೀಪವೇ ಇದ್ದ ಇನ್ನೊಂದು ಹಡಗಿಗೆ ಬಡಿದು ಈ ಅನಾಹುತ ಸಂಭವಿಸಿದೆ.
ಕ್ಷಿಪಣಿ ಬಡಿದ ಕೂಡಲೇ ಹಡಗು ಸ್ಫೋಟಿಸಿದೆ. ಈ ಹಡಗಿನಲ್ಲಿದ್ದ ಅಷ್ಟೋ ಯೋಧರು ಮೃತಪಟ್ಟಿದ್ದಾರೆ. ಸಿಬ್ಬಂದಿಯ ಅಚಾತುರ್ಯದಿಂದ ಕ್ಷಿಪಣಿ ಹಾರಿಸಲಾಗಿದ್ದು, ಅದು ತುಸು ದೂರದಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದ ಕೊನಾರಕ್ ಹಡಗಿಗೆ ಬಡಿದು ಸ್ಫೋಟಗೊಂಡಿದೆ ಎಂದು ಇರಾನ್ ನೌಕಾಪಡೆ ವಕ್ತಾರ ಸ್ಪಷ್ಟಪಡಿಸಿದ್ದಾರೆ.
ತನ್ನ ಯೋಧರನ್ನು ಕಳೆದುಕೊಂಡಿರುವ ನೋವಿಗಿಂತ ಇರಾನ್ಗೆ ಈಗ ಸ್ಪಷ್ಟನೆ ನೀಡುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಏಕೆಂದರೆ ವೈರಿ ರಾಷ್ಟ್ರ ಅಮೆರಿಕ ಕೊನಾರಕ್ ನೌಕೆಯನ್ನು ಹೊಡೆದುರುಳಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇರಾನ್-ಅಮೆರಿಕ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿರುವುದರಿಂದ, ಅಮೆರಿಕವೇ ಕೊನಾರಕ್ ಯುದ್ಧ ಹಡಗನ್ನು ಹೊಡೆದುರುಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದರಿಂದ ತುಂಬಾ ನೊಂದುಕೊಂಡಿರುವ ಇರಾನ್, ಇದಕ್ಕೆ ನಮ್ಮ ನೌಕಾ ಸಿಬ್ಬಂದಿಯೇ ಕಾರಣ ವಿನಾ ಅಮೆರಿಕ ಅಲ್ಲ, ಯಾರೂ ದಯವಿಟ್ಟು ವದಂತಿಗಳನ್ನು ನಂಬಬೇಡಿ ಎನ್ನುತ್ತಿದೆ. ಆದರೂ ಸರ್ಕಾರ ಸುಳ್ಳು ಹೇಳುತ್ತಿದ್ದು ಅಮೆರಿಕವೇ ಈ ಕೃತ್ಯ ಎಸಗಿದೆ ಎಂಬ ಮಾತೇ ಎಲ್ಲೆಡೆ ಕೇಳಿಬರುತ್ತಿದೆ. (ಏಜೆನ್ಸೀಸ್)