ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆ: ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಯುವತಿಯರು

Honor killing
Published on

ತೆಹ್ರಾನ್​: ಇರಾನ್​​ನಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, 22 ವರ್ಷದ ಯುವತಿಯೊಬ್ಬಳು ತಂದೆಯಿಂದಲೇ ಹತ್ಯೆಯಾಗುವ ಮೂಲಕ ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆಗೆ ಇರಾನ್​ ಸಾಕ್ಷಿಯಾಗಿದೆ.

ಇರಾನ್​ ದಕ್ಷಿಣ ಕೇಂದ್ರದ ನಿವಾಸಿಯಾಗಿರುವ ರೇಹನೇಹ್ ಅಮೆರಿ ಮೃತ ಯುವತಿ. ಕಳೆದ ಭಾನುವಾರ ಸಂಜೆ ಮನೆಗೆ ತಡವಾಗಿ ಬಂದಿದ್ದಕ್ಕೆ ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆಗೈಯ್ಯಲಾಗಿದೆ. ದಾಳಿಯ ಬಳಿಕವೂ ಸುಮಾರು 24 ಗಂಟೆಗಳ ಕಾಲ ಬದುಕಿದ್ದ ರಹನೇಹ್​ ಗಂಭೀರ ಗಾಯಗಳಿಂದ ಸಾವಿಗೀಡಾಗಿದ್ದಾಳೆ.

19 ವರ್ಷದ ಫಾತೇಮೆಹ್​ ಬರಿಹಿ ಎಂಬ ಯುವತಿ ತನ್ನ ಗಂಡನಿಂದಲೇ ಹತ್ಯೆಯಾದ ದಿನದ ಬೆನ್ನಲ್ಲೇ ರೇಹನೇಹ್​ ಕೊಲೆಯಾಗಿದೆ. ಕೆಲ ದಿನಗಳ ಹಿಂದಷ್ಟೇ 13 ವರ್ಷದ ರೊಮಾನಿಯಾ ಅಶ್ರಫಿ ಎಂಬ ಬಾಲಕಿ ತನಗಿಂತ ಹಿರಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ತಂದೆಯ ಕುಡುಗೋಲಿನ ದಾಳಿಗೆ ತುತ್ತಾಗಿದ್ದಳು. ಇದನ್ನೂ ಓದಿ: ಮತ್ತೆ ಬಿಗಿಯಾಗಲಿದೆ ಲಾಕ್​ಡೌನ್​?: ಡಬ್ಲ್ಯುಎಚ್​ಒದಿಂದ ಹೊರಬಿತ್ತು ಆಘಾತಕಾರಿ ಮಾಹಿತಿ

ರೇಹನೇಹ್​ ಭಾನುವಾರ ರಾತ್ರಿ 11:30ಕ್ಕೆ ಮನೆಗೆ ಬಂದಿದ್ದಕ್ಕೆ ಕೋಪಗೊಂಡ ತಂದೆ ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಕೊಲೆ ಮುಚ್ಚಿಹಾಕಲು ಯತ್ನಿಸಿ, ಕಾರಿನಲ್ಲಿ ಆಗಿದ್ದ ರಕ್ತದ ಕಲೆಗಳ ಜಾಡಿನಿಂದ ಪೊಲೀಸರಿಗೆ ಸಿಕ್ಕಿಬಿದ್ದು, ಕೊನೆಗೆ ತಪ್ಪೊಪ್ಪಿಕೊಂಡಿದ್ದಾನೆ.

ಮಗಳ ವರ್ತನೆಗೆ ಬೇಸತ್ತು 2017ರಲ್ಲೂ ಒಮ್ಮೆ ಕೊಲ್ಲಲು ಯತ್ನಿಸಿದ್ದಂತೆ. ರೇಹನೇಹ್​ ತಾಯಿಯ ಬಳಿ ಮಗಳನ್ನು ಕೊಲ್ಲುವುದಾಗಿ ಆಗಾಗ ಹೇಳುತ್ತಿದ್ದನಂತೆ. ಇದೀಗ ಹತ್ಯೆ ಮಾಡಿಯೇ ಬಿಟ್ಟಿದ್ದಾನೆ.

ಇದಕ್ಕೂ ಒಂದು ದಿನದ ಮುಂಚೆ ಫಾತೇಮೆಹ್​ ಬರಿಹಿ ಎಂಬ ಯುವತಿ ಬಲವಂತವಾಗಿ ಮದುವೆಯಾದ ಎರಡೇ ದಿನದಲ್ಲಿ ಬೇರೊಬ್ಬನ ಜತೆಯಲ್ಲಿ ಓಡಿಹೋಗಿದ್ದಕ್ಕೆ, ಕೋಪಗೊಂಡ ಪತಿ ಬರಿಹಿ ತಲೆಯನ್ನು ತುಂಡರಿಸಿದ್ದ. ಬಳಿಕ ತಾನಾಗೇ ರಕ್ತಸಿಕ್ತ ಚಾಕುವಿನೊಂದಿಗೆ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದ. ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ಹೋದ ಓರ್ವ ಯುವತಿ ಇಬ್ಬರು ಯುವಕರು ಶವವಾಗಿ ಪತ್ತೆ

ಇನ್ನು ಮೇ ತಿಂಗಳ ಅಂತ್ಯದಲ್ಲಿ ರೊಮಿನಾ ಅಶ್ರಫಿ (13) ಎಂಬ ಬಾಲಕಿಯು ಇರಾನ್​ನ ತಲೇಶ್​ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ ಮಲಗಿದ್ದಾಗ ತಂದೆಯೇ ಕುಡುಗೋಲಿನಿಂದ ಮಗಳ ತಲೆಯನ್ನು ಕತ್ತರಿಸಿ ಹತ್ಯೆಗೈದಿದ್ದ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಕೆ ಓಡಿ ಹೋಗಲು ತಯಾರಾಗಿದ್ದಾರಿಂದ ಮರ್ಯಾದೆಗೆ ಅಂಜಿ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದ.

ಇದೀಗ ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆ ನಡೆದಿರುವುದು ಇರಾನ್​ನಲ್ಲಿ ಆತಂಕ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net