

ಬಾಗ್ದಾದ್: ಇರಾಕ್ನಲ್ಲಿರುವ ಅಮೆರಿಕ ಮತ್ತು ಸಮ್ಮಿಶ್ರ ಪಡೆಗಳು ನೆಲೆಸಿರುವ ಎರಡು ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್ ಡಜನ್ಗಿಂತಲೂ ಹೆಚ್ಚಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಪೆಂಟಗಾನ್(ಯುಎಸ್ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ) ತಿಳಿಸಿದೆ.
ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಡಜನ್ಗಿಂತಲೂ ಹೆಚ್ಚಿನ ಕ್ಷಿಪಣಿಗಳನ್ನು ಇರಾನ್ ಫೈರ್ ಮಾಡಿದೆ. ಇರಾಕ್ನಲ್ಲಿರುವ ಯುಎಸ್ ಮಿಲಿಟರಿ ಮತ್ತು ಸಮ್ಮಿಶ್ರ ಪಡೆಗಳ ಏರ್ಬೇಸ್ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇರಾನ್ನಿಂದ ದಾಳಿ ನಡೆದಿರುವುದು ಸ್ಪಷ್ಟವಾಗಿದೆ ಎಂದು ಸಾರ್ವಜನಿಕ ವ್ಯವಹಾರಗಳ ರಕ್ಷಣಾ ಕಾರ್ಯದರ್ಶಿಗೆ ಸಹಾಯಕ ಜೊನಾಥನ್ ಹಾಫ್ಮ್ಯಾನ್ ಹೇಳಿಕೆ ನೀಡಿದ್ದಾರೆ.
ಆದರೆ ಏರ್ಬೇಸ್ನಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ಈವರೆಗೂ ಯಾವುದೇ ವರದಿಯಾಗಿಲ್ಲ. ಕಳೆದವಾರ ಯುಎಸ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಇರಾನ್ ಸೇನಾ ನಾಯಕ ಜನರಲ್ ಕಾಸಿಂ ಸುಲೆಮಾನಿ ಹತ್ಯೆಯ ಬೆನ್ನಲ್ಲೇ ಇರಾನ್ ಪ್ರತಿಜ್ಞೆಗೆ ಇರಾಕ್ನಲ್ಲಿರುವ ತೆಹ್ರಾನ್ ಪರ ಬಣಗಳು ಸ್ಪಂದನೆ ನೀಡುವುದಾಗಿ ಹೇಳಿದ ಬೆನ್ನಲ್ಲೇ ಇರಾನ್ ಕ್ಷಿಪಣಿಗಳ ದಾಳಿ ನಡೆಸಿದೆ.
ಇನ್ನು ಇರಾನ್ ಇಡುವ ಪ್ರತಿ ಹೆಜ್ಜೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಗಮನಿಸುತ್ತಿದ್ದು, ತಮ್ಮ ರಾಷ್ಟ್ರೀಯ ರಕ್ಷಣಾ ತಂಡದೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ವೈಟ್ಹೌಸ್ ತಿಳಿಸಿದೆ.
ಈ ಕ್ಷಿಪಣಿ ದಾಳಿಗೂ ಮುನ್ನ ಸುಮಾರು 9 ರಾಕೆಟ್ಗಳು ವಿದೇಶಿ ಪಡೆಗಳು ನೆಲೆಸಿರುವ ಅತಿದೊಡ್ಡ ಇರಾಕ್ ಮಿಲಿಟರಿ ಕಾಂಪೌಂಡ್ ಐನ್ ಅಲ್ ಅಸಾದ್ ಏರ್ಬೇಸ್ ಅನ್ನು ನುಸುಳಿದ್ದವು. ಇರಾನ್ ಸಾಲು ಸಾಲು ದಾಳಿ ನಡೆಸುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಮುಂದುವರಿದಿದೆ. ಅಲ್ಲದೆ ಇರಾನ್ ಘಂಟಾಘೋಷವಾಗಿ ದಾಳಿಯ ಹೊಣೆ ಹೊತ್ತುಕೊಂಡಿದೆ. (ಏಜೆನ್ಸೀಸ್)