

ನವದೆಹಲಿ: ಅಮ್ಮ ಹಾಗೂ ಮಕ್ಕಳ ಪ್ರೀತಿಯ ವರ್ಣನೆ ಶಬ್ದಗಳಿಗೆ ನಿಲುಕದ್ದು. ಮಕ್ಕಳು ಎಷ್ಟೇ ಎತ್ತರದ ಸ್ಥಾನಕ್ಕೇರಿದ್ದರೂ ಅಮ್ಮನಿಗೆ ಮಕ್ಕಳು ಸದಾ ಮಕ್ಕಳೆ. ಅವರು ರಾಷ್ಟ್ರಪತಿಯೇ ಆಗಿರಬಹುದು, ಪ್ರಧಾನಿಯೇ ಆಗಿರಬಹುದು ಇಲ್ಲವೇ ಸಮಾಜದ ಕಟ್ಟಕಡೆಯ ವ್ಯಕ್ತಿಯೇ ಆಗಿರಬಹುದು. ಏನೇ ಆದರೂ ಮಕ್ಕಳ ಮೇಲಿನ ಪ್ರೀತಿ ಅಮ್ಮನಿಗೆ ಕಡಿಮೆಯಾಗುವುದೇ ಇಲ್ಲ.
ಅದೇ ರೀತಿ ಎಷ್ಟೋ ಮಕ್ಕಳು ತಾವು ದೊಡ್ಡ ದೊಡ್ಡ ಹುದ್ದೆಯಲ್ಲಿ ಏರಿದ್ದರೂ ಅಮ್ಮನ ಎದುರು ಸದಾ ಚಿಕ್ಕಮಕ್ಕಳಾಗಿಯೇ ಬಿಡುತ್ತಾರೆ. ಅಮ್ಮ-ಮಗನ ಪ್ರೀತಿಯ ಬಗ್ಗೆ ಬಂದಾಗಲೆಲ್ಲಾ ಹೆಚ್ಚು ಸುದ್ದಿಗೆ ಬರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಶತಾಯುಷಿ ಹೀರಾಬೆನ್ ಅವರದ್ದು.
ಪ್ರತಿವರ್ಷ ತಮ್ಮ ಹುಟ್ಟುಹಬ್ಬಕ್ಕೆ ಅಮ್ಮನ ಆಶೀರ್ವಾದ ಪಡೆಯುವುದನ್ನು ಪ್ರಧಾನಿ ಮೋದಿ ಅವರು ಎಂದಿಗೂ ಮರೆಯುವುದಿಲ್ಲ. ಅದರಂತೆಯೇ ತಾವು ಎಷ್ಟೇ ಬಿಜಿಯಾಗಿದ್ದರೂ ಅಮ್ಮನನ್ನು ಭೇಟಿಯಾಗಲು ಹೋಗುತ್ತಲೇ ಇರುತ್ತಾರೆ. ಅವರು ಹೋದಾಗಲೆಲ್ಲ ಹೀರಾಬೆನ್ ಅವರು ಮಗನನ್ನು ಮುದ್ದಾಡುವುದು ಹಾಗೂ ಅಮ್ಮನ ಎದುರು ಪ್ರಧಾನಿ ಚಿಕ್ಕಮಗುವಾಗಿ ಬಿಡುವ ವಿಡಿಯೋಗಳು ಈಗಾಗಲೇ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದೆ.
ಇದೇ ವಿಡಿಯೋ ಇದೀಗ ಇರಾನ್- ಅರಬ್‌ಗಳಲ್ಲಿಯೂ ಮೋಡಿ ಮಾಡಿದೆ. ಅಲ್ಲಿಯ ಸೋಷಿಯಲ್ ಮೀಡಿಯಾಗಳಲ್ಲಿ ಮೋದಿ ಅವರ ಅಮ್ಮ ಮೋದಿಯವರಿಗೆ ತಿಂಡಿ ತಿನಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಟ್ವೀಟ್ ಮಾಡಿದ್ದು, ಅಮ್ಮ-ಮಗನ ಈ ವಿಡಿಯೋ ಹೇಗೆ ಇರಾನ್-ಅರಬ್ ವಾಸಿಗಳ ಮನಗೆದ್ದಿದೆ ಎಂಬ ಬಗ್ಗೆ ಬರೆದಿದ್ದಾರೆ.
ಅಮ್ಮ-ಮಗುವಿನ ಪ್ರೀತಿ ಊಹೆಗೆ ನಿಲುಕದ್ದು, ಇದಕ್ಕೆ ಮಿತಿಯೇ ಇಲ್ಲ. ಅಮ್ಮನ ಪ್ರೀತಿಗೆ ಸಾಟಿಗೆ ಇಲ್ಲ. ಈ ವಿಡಿಯೋ ಅರಬ್ ಮತ್ತು ಇರಾನ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ’ ಎಂದು ನಖ್ವಿ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಆರೂವರೆ ಸಾವಿರಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದು, ಹಲವಾರು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ.