

Haryana: ಹರಿಯಾಣದಲ್ಲಿ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಐಪಿಎಸ್ ಅಧಿಕಾರಿ ವೈ.ಪುರಣ್ ಕುಮಾರ್ ಪ್ರಕರಣವನ್ನು ತನಿಖೆ ನಡೆಸಲು ಚಂಡೀಗಢ ಪೊಲೀಸರು ಶುಕ್ರವಾರ(ಅ. 10) 6 ಸದಸ್ಯರ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಚಂಡೀಗಢ ಪೊಲೀಸ್ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಎಸ್‌ಐಟಿಯನ್ನು ಚಂಡೀಗಢ ಐಜಿ ಪುಷ್ಪೇಂದ್ರ ಕುಮಾರ್ ನೇತೃತ್ವ ವಹಿಸಲಿದ್ದಾರೆ. ತಂಡದಲ್ಲಿ ಚಂಡೀಗಢ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್, ಎಸ್‌ಪಿ ಸಿಟಿ ಕೆ.ಎಂ. ಪ್ರಿಯಾಂಕಾ, ಡಿಎಸ್‌ಪಿ ಚರಣ್‌ಜಿತ್ ಸಿಂಗ್ ವಿರ್ಕ್ ಮತ್ತು ಇತರ ಅಧಿಕಾರಿಗಳಾದ ಗುರ್ಜಿತ್ ಕೌರ್ ಮತ್ತು ಜೈವೀರ್ ರಾಣಾ ಅವರನ್ನು ಒಳಗೊಂಡಿದೆ.
ಪ್ರಕರಣದ ಗುರುತರ ಆರೋಪ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಚಂಡೀಗಢ ಐಜಿಪಿ, ಯುಟಿ ಅವರ ಮೇಲ್ವಿಚಾರಣೆಯಲ್ಲಿ ತ್ವರಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್ಐಟಿ ರಚಿಸಲಾಗಿದೆ. ಸಾಕ್ಷ್ಯ ಸಂಗ್ರಹಣೆ, ಸಾಕ್ಷಿಗಳ ಪರೀಕ್ಷೆ, ತಜ್ಞರ ಅಭಿಪ್ರಾಯಗಳು, ಕಾನೂನು ಸಲಹೆ ಇತ್ಯಾದಿಗಳನ್ನು ಒಳಗೊಂಡಂತೆ ಎಫ್‌ಐಆರ್ ಸಂಖ್ಯೆ 156/2025 ರ ಎಲ್ಲಾ ಅಂಶಗಳನ್ನು ಸಮಯಕ್ಕೆ ಅನುಗುಣವಾಗಿ ತನಿಖೆ ಮಾಡಿ ಅಂತಿಮ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ.
2001ರ ಬ್ಯಾಚ್ ಅಧಿಕಾರಿ ವೈ ಪೂರಣ್ ಕುಮಾರ್ ಮಂಗಳವಾರ ತಮ್ಮ ಸೆಕ್ಟರ್ 11 ಚಂಡೀಗಢದ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಟು ಪುಟಗಳ ಡೆತ್ನೋಟ್ನಲ್ಲಿ ಹಿರಿಯ ಅಧಿಕಾರಿಗಳು ಜಾತಿ ತಾರತಮ್ಯ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಉನ್ನತ ಪೊಲೀಸ್ ಅಧಿಕಾರಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಪೊಲೀಸ್ ಮುಖ್ಯಸ್ಥ ನರೇಂದ್ರ ಬಿಜಾರ್ನಿಯಾ ಸೇರಿದಂತೆ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)