ಗುಂಡು ಹಾರಿಸಿಕೊಂಡ ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ

RP Sharma
Published on

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಅವರಿಗೆ ಗುಂಡೇಟು ತಗುಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಕೊತ್ತನೂರು ಸಮೀಪ ದೊಡ್ಡಗುಬ್ಬಿಯ ಅಪಾರ್ಟ್​ಮೆಂಟ್​ನಲ್ಲಿ ಶರ್ಮಾ ನೆಲೆಸಿದ್ದು, ಬುಧವಾರ ಸಂಜೆ 5 ಗಂಟೆಗೆ ಅವಘಡ ಸಂಭವಿಸಿದೆ. ತಕ್ಷಣವೇ ಶರ್ಮಾ ಅವರ ಪುತ್ರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ಪೊಲೀಸ್​ ಆಯುಕ್ತ ಕಮಲ್​ ಪಂತ್​ ತಿಳಿಸಿದ್ದಾರೆ.

"ಶರ್ಮಾ ಸವಿರ್ಸ್​ ರಿವಾಲ್ವಾರ್​ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 2 ಬಾರಿ ಗುಂಡು ಹಾರಿದೆ. 1 ಗುಂಡು ಕುತ್ತಿಗೆ, ಮತ್ತೊಂದು ಎದೆ ಭಾಗಕ್ಕೆ ಹೊಕ್ಕಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಬರವಣಿಗೆ ಮೂಲಕ ಶರ್ಮಾ ಸಂವಹನ ಮಾಡುತ್ತಿದ್ದಾರೆ'' ಎಂದು ಕಮಲ್​ ಪಂತ್​ ಹೇಳಿದ್ದಾರೆ.

ಉತ್ತರ ಪ್ರದೇಶ ಮೂಲದ ರಾಜವೀರ್​ ಪ್ರತಾಪ್​ ಶರ್ಮಾ, 1987ನೇ ಸಾಲಿನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ರಾಜ್ಯ ಪೊಲೀಸ್​ ಇಲಾಖೆಯಲ್ಲಿ ರೈಲ್ವೆ ಎಡಿಜಿಪಿ, ಬಿಎಂಟಿಎಫ್​ ಮುಖ್ಯಸ್ಥ ಸೇರಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ಅವರು, ಪ್ರಸುತ್ತ ರಾಜ್ಯ ಪೊಲೀಸ್​ ಗೃಹ ಮಂಡಳಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್​ನಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ಅವರ ಪತ್ನಿ, ರಾಜ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನಾಗಲಾಂಬಿಕ ದೇವಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದಾರೆ.

ಶರ್ಮಾ ಅವರಿಗೆ ಗುಂಡೇಟು ತಗುಲಿರುವ ಸುದ್ದಿ ತಿಳಿಯುತ್ತಿದ್ದಂತೆ ಆತ್ಮಹತ್ಯೆ ಯತ್ನ ಎಂಬ ಸುದ್ದಿಯೂ ಕೆಲವೆಡೆ ಹರಿದಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net