

ರಾಯಚೂರು: ಐಪಿಎಲ್-13ರ ಹಂತದ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದು, ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕವನ್ನೂ ಮಾಡಿಸಿದ್ದಾರೆ.
ಆರ್‌ಸಿಬಿ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಗೆದ್ದರೆ ಪ್ಲೇ–ಆಫ್ ಸ್ಥಾನ ಖಚಿತವಾಗಲಿದೆ. ಈ ಮಹತ್ವದ ಪಂದ್ಯ ಇಂದು (ಸೋಮವಾರ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕೊಹ್ಲಿ ಟೀಂ ಗೆಲುವಿಗಾಗಿ ಆರ್‌ಸಿಬಿ ಅಭಿಮಾನಿಗಳು ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ. ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಡೇಲ್ ಸ್ಟೇನ್ ಮತ್ತು ಉಮೇಶ್ ಯಾದವ್ ಸೇರಿದಂತೆ ಎಲ್ಲ ಆಟಗಾರರೂ ಕನ್ನಡಿಗರಿಗೆ ಶುಭ ಕೋರಿದ್ದ ವಿಡಿಯೋವನ್ನು ಅಧಿಕೃತ ಆರ್‌ಸಿಬಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಕನ್ನಡಿಗರು ಕೂಡ ಆರ್ಸಿಬಿಗೆ ರಾಜ್ಯೋತ್ಸವ ಮತ್ತು ಐಪಿಎಲ್ ಗೆಲುವಿಗೆ ಶುಭಕೋರಿದ್ದರು.