

ಚಿಕ್ಕಮಗಳೂರು: ಕಡೂರು ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ನಡೆದಿರುವ ಭೂ ಅಕ್ರಮ ಮಂಜೂರು ಪ್ರಕರಣ ತನಿಖೆ ಚುರುಕುಗೊಂಡಿದ್ದು ತಪ್ಪಿತಸ್ಥರಿಗೆ ಶಿಕ್ಷೆಯ ಭೀತಿ ಎದುರಾಗಿದೆ.
ಕಡೂರು ಮತ್ತು ಮೂಡಿಗೆರೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಬಗ್ಗೆ ಜಿಲ್ಲಾಡಳಿತ, ಉಪವಿಭಾಗಾಧಿಕಾರಿ ಹಾಗೂ ಸರ್ಕಾರಕ್ಕೆ ದೂರುಗಳು ಬಂದಿದ್ದವು. ಉಪ ವಿಭಾಗಾಧಿಕಾರಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇರೆಗೆ ಸರ್ಕಾರವು 15 ತಹಸೀಲ್ದಾರರ ತನಿಖಾ ತಂಡವನ್ನು ನೇಮಕ ಮಾಡಿ ಕಳುಹಿಸಿದ್ದು ಪ್ರತ್ಯೇಕವಾಗಿ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.
ತನಿಖಾ ತಂಡ ಕಡೂರು ಹಾಗೂ ಮೂಡಿಗೆರೆ ತಾಲೂಕು ಕಚೇರಿಯಲ್ಲಿನ ಕಡತಗಳನ್ನು, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದು ಒಂದೊಂದು ಪ್ರಕರಣವನ್ನು ಪರಿಶೀಲನೆ ನಡೆಸಿ ವರದಿ ತಯಾರಿಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ.
ಎರಡೂ ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ಕಡೂರಿನಲ್ಲಿ 2,240 ಪ್ರಕರಣಗಳಲ್ಲಿ 1,330 ಪ್ರಕರಣಗಳಲ್ಲಿ ಅಕ್ರಮ ನಡೆದಿರುವುದು ಖಚಿತವಾಗಿದ್ದು 2,500 ಎಕರೆಯಷ್ಟು ಮಂಜೂರು ಮಾಡಲಾಗಿದೆ. ಉಳಿದ 961 ಪ್ರಕರಣ ಅನುಮಾನವಾಗಿದ್ದು ತನಿಖೆ ನಡೆಯುತ್ತಿದೆ.
ಮೂಡಿಗೆರೆಯಲ್ಲಿ 2000 ಪೈಕಿ 1,320 ಪ್ರಕರಣ ಅಕ್ರಮವಾಗಿರುವುದು ಖಚಿತವಾಗಿದ್ದು 3,700 ಎಕರೆಯಷ್ಟು ಮಂಜೂರಾಗಿದೆ. 640 ಪ್ರಕರಣಗಳು ಅನುಮಾನವಿದ್ದು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಭೂ ಮಂಜೂರು ಮಾಡಿರುವ ದೂರುಗಳು ಬಂದಿದ್ದವು. ಜಿಲ್ಲಾಡಳಿತ, ಉಪವಿಭಾಗಾಧಿಕಾರಿ ವರದಿ ಆಧಾರದ ಮೇಲೆ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖೆಯ ಬಗ್ಗೆ ಪ್ರತಿ ದಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಅರ್ಹರಿಗೆ ಅನ್ಯಾಯವಾಗದಂತೆ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುತ್ತದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಪ್ರತಿಕ್ರಿಯಿಸಿದರು.
ಅಕ್ರಮ ನಡೆದಿರುವ ಪ್ರಕರಣಗಳಲ್ಲಿ ಕಡತ ನಿರ್ವಹಣೆ ಮಾಡದೆ ಇರುವುದು, ಪುಸ್ತಕದಲ್ಲಿ ನಮೂದು ಮಾಡದೆ ಇರುವುದು, ಅರ್ಜಿ ಸಲ್ಲಿಸದೆ ಇರುವುದು ಹೀಗೆ ನಾನಾ ರೀತಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದು ಯಾರ ಕಾಲದಲ್ಲಿ ನಡೆದಿದ್ದರೂ ಆರೋಪಿಗಳು ಶಿಕ್ಷೆಗೆ ಒಳಗಾಗುವುದು ಖಚಿತ ಎಂದು ಹೇಳಿದರು.
ಭೂ ಕಂದಾಯ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡಿಲ್ಲ. 2002ರ ಮುಂಚೆ ಜಮೀನಿನ ಅನುಭವದಲ್ಲಿದ್ದವರಿಗೆ ಜಮೀನು ಮಂಜೂರು ಮಾಡಲು ಸರ್ಕಾರ ಕ್ರಮಕೈಗೊಂಡಿತ್ತು. ನಂತರ ನಮೂನೆ 53, 54, 57 ಹಾಗೂ 94ಸಿ ಮತ್ತು 94ಸಿಸಿಯಡಿ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಜಾಗ ಮಂಜೂರು ಮಾಡಬೇಕಿತ್ತು. ಆದರೆ ಈ ಪ್ರಕರಣಗಳಲ್ಲಿ ನಿಯಮಗಳು ಉಲ್ಲಂಘನೆಯಾಗಿದ್ದು ಇಂಥ ದೊಡ್ಡ ಮಟ್ಟದ ಅಕ್ರಮ ಎಲ್ಲೂ ನಡೆದಿರಲು ಸಾಧ್ಯವಿಲ್ಲ ಎಂದರು.
ಇನ್ನುಮುಂದೆ ಭೂ ಮಂಜೂರಾತಿಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಎಚ್ಚರವಹಿಸಿದ್ದು ಮೊಬೈಲ್ ಆ್ಯಪ್ ಮೂಲಕ ಸರ್ವೇ, ದಾಖಲೆ ಸೃಷ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರು ಬಹಳ ವರ್ಷಗಳಿಂದ ಜಮೀನಿನಲ್ಲಿ ಅನುಭವದಲ್ಲಿ ಇದ್ದಾರೋ ಇಲ್ಲವೋ ಎಂಬುದರ ಬಗ್ಗೆ ಆ್ಯಪ್‌ನಲ್ಲಿ ಖಚಿತವಾಗುತ್ತದೆ. ಇಲಾಖೆಯಲ್ಲಿ ಸುಧಾರಣೆಗಳನ್ನು ತರಲು ರೆವೆನ್ಯೂ ಬೀಟ್ ಪದ್ಧತಿ ಜಾರಿಗೆ ತರಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.