ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣದ ತನಿಖೆ ಶುರು

dcc bank
ಶಿವಮೊಗ್ಗ ಡಿಸಿಸಿ ಬ್ಯಾಂಕ್
Published on

ಶಿವಮೊಗ್ಗ: ಕೆಲ ತಿಂಗಳ ಹಿಂದೆ ನಡೆದಿದ್ದ ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ ನೇಮಕಾತಿ ಪರೀಕ್ಷೆ ಹಾಗೂ ಮೌಲ್ಯಮಾಪನದ ಕುರಿತು ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ಬುಧವಾರ ಆರಂಭವಾಗಿದೆ.

ತನಿಖಾಧಿಕಾರಿಗಳಾಗಿ ನೇಮಕಗೊಂಡಿರುವ ಬೆಂಗಳೂರು ನಗರ ಜಿಲ್ಲೆ 4ನೇ ವಿಭಾಗದ ಸಹಕಾರ ಸಂಘಗಳ ಉಪನಿಬಂಧಕ ಪಿ.ಶಶಿಧರ್ ಹಾಗೂ ದಾವಣಗೆರೆ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಮಹೇಶ್ವರಪ್ಪ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಹಲವು ದಾಖಲೆಗಳನ್ನು ಪರಿಶೀಲಿಸಿದರು.
ಈ ಇಬ್ಬರು ಹಿರಿಯ ಅಧಿಕಾರಿಗಳೊಂದಿಗೆ ಇಬ್ಬರು ಸಹಾಯಕರು ಮಾತ್ರ ಆಗಮಿಸಿದ್ದು, ಕೆಲವು ದೃಢೀಕೃತ ದಾಖಲೆಗಳನ್ನು ನೀಡುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಕೋರಿದ್ದರು. ಅದರಂತೆ ದಾಖಲೆಗಳನ್ನು ಒದಗಿಸಿದ್ದು ಅವುಗಳ ಪರಿಶೀಲನೆ ನಡೆದಿದೆ. ಬುಧವಾರ ಯಾವುದೇ ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳಷ್ಟೇ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಡಿಸಿಸಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಕುರಿತು ತನಿಖೆಗೆ ಒತ್ತಾಯಿಸಿದ್ದರು. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ ಅನಧಿಕೃತ ವಿವಿಗೆ ಕಳಿಸಿರುವ ಆರೋಪಗಳು ಕೇಳಿಬಂದಿವೆ. ಪರೀಕ್ಷೆ ಸಂದರ್ಭದಲ್ಲಿ ಅನೇಕ ದೂರುಗಳಿದ್ದವು. ಹೀಗಾಗಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆದಿರುವ ಸಾಧ್ಯತೆಗಳು ಕಡಿಮೆ ಎಂಬ ಆರೋಪವಿದೆ. ಸಹಕಾರ ಇಲಾಖೆ ಅಥವಾ ಸಿಐಡಿ ಮೂಲಕ ತನಿಖೆ ನಡೆಸಬೇಕೆಂದು ಶಾಸಕರಾದ ಬಿ.ಕೆ.ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ ಕೂಡ ಪತ್ರ ಬರೆದಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಿ ಎಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮಧು ಬಂಗಾರಪ್ಪ ಪತ್ರ ಬರೆದಿದ್ದರು.
ಪರೀಕ್ಷೆ ನಡೆದ ಬಳಿಕ ಅನೇಕ ಅಭ್ಯರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಎದುರು ಗೋಳು ತೋಡಿಕೊಂಡಿದ್ದರು. ಅವರಿಗೆ ನ್ಯಾಯ ಒದಗಿಸಲು ಸೂಕ್ತ ತನಿಖೆ ಅವಶ್ಯಕವಿದೆ. ನೇಮಕಾತಿ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿಲ್ಲ. ಹೀಗಾಗಿ ಅನೇಕ ಸಂದೇಹಗಳು ಮೂಡುತ್ತಿವೆ ಎಂದು ಪತ್ರದಲ್ಲಿ ಮಧು ಬಂಗಾರಪ್ಪ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ತನಿಖಾಧಿಕಾರಿಗಳನ್ನು ನೇಮಕ ಮಾಡಿದ್ದ ಸರ್ಕಾರ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net