

ಬೆಂಗಳೂರು: ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಮೇಲೂ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಬೊಮ್ಮಾಯಿ, ಶ್ರೀರಾಮುಲು ಮೂಗಿನ ನೇರದಲ್ಲೇ ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಿ ಅಕ್ರಮ ನಡೆದಿದ್ದು ಇವರ ಮೇಲೂ ಸಿಐಡಿ ತನಿಖೆ ನಡೆಸಬೇಕು ಎಂದರು.
ಬೋಗಸ್ ದಾಖಲೆಗಳನ್ನು ಸಲ್ಲಿಸಿ ಹಣ ಪಡೆದುಕೊಂಡಿರುವ ಅಂಶ ಕೆಲವು ನಿರ್ದೇಶಕರ ಗಮನಕ್ಕೆ ಬಂದಿದೆ. ಯಾವ, ಯಾವ ಸಂಸ್ಥೆಗಳಿಗೆ ಹಣ ಪಾವತಿ ಆಗಿರುವುದು ಬೋಗಸ್ ಬಿಲ್ಗಳನ್ನು ನೀಡಿ ಅಕ್ರಮ ಎಸಗಿರುವುದು ಸೇರಿದಂತೆ ಅನೇಕ ಅಕ್ರಮಗಳನ್ನು ನಿರ್ದೇಶಕ ಮಂಡಳಿ ಅಂದಿನ ಸಿಎಂ ಹಾಗೂ ಸಚಿವರ ಗಮನಕ್ಕೆ ತರಲಾಗಿತ್ತು ಎಂದು ಹೇಳಿದರು.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ನಲ್ಲಿ ಅನುಮಾನಿತರು ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಎಂಡಿ ಅವರ ಹೆಸರನ್ನು ಉಲ್ಲೇಖಿಸುತ್ತಾರೆ ಹೊರತು ಡಿ.ಎಸ್ ವೀರಯ್ಯ ಹೆಸರು ಸಹ ಇಲ್ಲ. ಪತ್ರ ವ್ಯವಹಾರವಾಗಿದೆ ಎಂದರೆ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ಬರದೆ ಇವುಗಳು ನಡೆದಿರುವುದಿಲ್ಲ. ಆದ ಕಾರಣಕ್ಕೆ ಇವರನ್ನೂ ಸಹ ಆರೊಪಿಗಳನ್ನಾಗಿ ಮಾಡಬೇಕು ಎಂದರು.
50 ಕೋಟಿ ದುರುಪಯೋಗವಾಗಿದೆ ಎಂದು ಎಂಡಿ ಅವರು ಲಿಖಿತವಾಗಿ ದೂರು ನೀಡಿದ ನಂತರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಗಮನಕ್ಕೆ ಬಂದರು ಏಕೆ ಸುಮ್ನಿದ್ದರು. ಗಮನಕ್ಕೆ ಬರದೇ ಇದ್ದಿದ್ದರೇ ಬೇರೆ ವಿಚಾರವಾಗಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಹಗರಣದ ಕುರಿತು ಮಾತನಾಡಬೇಕಾಗುತ್ತದೆ ಎಂದು ನಿಗಮದ ಮಾಜಿ ಅಧ್ಯಕ್ಷರಾದ ಡಿ.ಎಸ್. ವೀರಯ್ಯ ಸಭೆಯನ್ನು ಮುಂದಕ್ಕೆ ಹಾಕುತ್ತಲೇ ಬಂದಿದ್ದರು ಎಂದು ಆರೋಪಿಸಿದರು.