ಅಮೆರಿಕಾದಲ್ಲಿ ಅದಾನಿ ವಿರುದ್ಧ ತನಿಖೆ; ಹೀಗಾಗಿ ಟ್ರಂಪ್ ಬೆದರಿಕೆಗೆ ಪ್ರಧಾನಿಗೆ ತಿರುಗೇಟು ನೀಡುತ್ತಿಲ್ಲ;ರಾಹುಲ್| Rahul Gandhi

Rahul Gandhi 4
Published on

Rahul Gandhi: ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಅಮೆರಿಕಾದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ದ ನಡೆಯುತ್ತಿರುವುದರಿಂದ ಅಧ್ಯಕ್ಷ ಟ್ರಂಪ್ ಬೆದರಿಕೆಗೆ ತಿರುಗೇಟು ನೀಡಲು ಪ್ರಧಾನಿ ಮೋದಿಗೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ ನಮ್ಮ ಜೊತೆ ಉತ್ತಮ ವ್ಯಾಪಾರ ಪಾಲುದಾರನಲ್ಲ, ರಷ್ಯಾದಿಂದ ತೈಲ ಖರೀದಿಸಿ ಅದನ್ನು ಮರು ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸುತ್ತಿದೆ. ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ಸುಂಕವನ್ನು ಹೆಚ್ಚಿಸುತ್ತೇವೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್, "ಭಾರತ, ದಯವಿಟ್ಟು ಅರ್ಥಮಾಡಿಕೊಳ್ಳಿ, ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್ ಅವರ ಪದೇ ಪದೇ ಬೆದರಿಕೆ ಹಾಕುತ್ತಿದ್ದರೂ ಅವರನ್ನು ಎದುರಿಸಲು ಸಾಧ್ಯವಾಗದಿರಲು ಕಾರಣ ಅದಾನಿ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ತನಿಖೆ. ಮೋದಿ, ಎಎ (ಅದಾನಿ) ಮತ್ತು ರಷ್ಯಾದ ತೈಲ ಒಪ್ಪಂದಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಹಿರಂಗಪಡಿಸುವ ಬೆದರಿಕೆ. ಹೀಗಾಗಿ ಮೋದಿಯವರ ಕೈಗಳನ್ನು ಕಟ್ಟಿಹಾಕಿವೆ" ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಹೇಳಿಕೆಗೆ ಸರ್ಕಾರವಾಗಲಿ ಅಥವಾ ಅದಾನಿ ಗ್ರೂಪ್ ಆಗಲಿ ತಕ್ಷಣದ ಪ್ರತಿಕ್ರಿಯೆ ನೀಡಲಿಲ್ಲ.

ಅದಾನಿ ವಿರುದ್ಧದ ಆರೋಪವೇನು?

2024 ನವೆಂಬರ್​ನಲ್ಲಿ ಯುಎಸ್​​​ ಫೆಡರಲ್ ಅಧಿಕಾರಿಗಳು ಅದಾನಿ ಸಮೂಹದ ಚೇರಮನ್ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್​ ನಿರ್ದೇಶಕ ಸಾಗರ್ ಅದಾನಿ ಸೇರಿ 7 ಮಂದಿ ವಿರುದ್ದ ಲಂಚದ ಆರೋಪ ಹೊರಿಸಿ ನ್ಯೂಯಾರ್ಕ್​ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು.

ಮುಂದಿನ 2 ದಶಕಗಳಲ್ಲಿ 2 ಬಿಲಿಯನ್ ಡಾಲರ್ ಲಾಭ ಗಳಿಸುವ ನಿರೀಕ್ಷೆಯಲ್ಲಿರುವ ಸೌರ ವಿದ್ಯುತ್ ಒಪ್ಪಂದಕ್ಕೆ ಅನುಕೂಲಕರ ನಿಯಮಗಳನ್ನು ಬದಲಾಯಿಸಲು 2020-2024ರ ನಡುವೆ ಭಾರತೀಯ ಅಧಿಕಾರಿಗಳಿಗೆ ಸುಮಾರು 265 ಮಿಲಿಯಲ್ ಡಾಲರ್ ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಟ್ರಂಪ್ ಬೆದರಿಕೆಗೆ ಭಾರತ ತಿರುಗೇಟು

ಭಾರತದ ತೈಲ ವ್ಯಾಪಾರ ಪದ್ದತಿ ಬಗ್ಗೆ ಟೀಕಿಸಿದ್ದ ಟ್ರಂಪ್, ಭಾರತ ಕಡಿಮೆ ಬೆಲೆಯಲ್ಲಿ ರಷ್ಯಾದಿಂದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ, ಅದನ್ನು ಮರು ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದೆ. ಭಾರತ ನಮ್ಮ ಜೊತೆಗಿನ ಉತ್ತಮ ವ್ಯಾಪಾರ ಪಾಲುದಾರನಲ್ಲ. ಮುಂದಿನ 24 ಗಂಟೆಯಲ್ಲಿ ಭಾರತದ ಮೇಲೆ ಮತ್ತಷ್ಟು ಸುಂಕಗಳನ್ನು ಹೆಚ್ಚಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಭಾರತ, ಅಮರಿಕ ಮತ್ತು ಯುರೋಪಿಯನ್ ಒಕ್ಕೂಟದ ಹೇಳಿಕೆಗಳು ಅಸಮರ್ಥನೀಯ ಮತ್ತು ಅಸಮಂಜಸವಾಗಿದ್ದು, ಭಾರತದ ವಿರುದ್ದ ದ್ವಿಮುಖ ನೀತಿ ಅನುಸರಿಸುತ್ತಿವೆ. ರಷ್ಯಾದಿಂದ  ಯುರೇನಿಯಂ, ರಸಗೊಬ್ಬರ ಸೇರಿ ಅನೇಕ ರಾಸಾಯನಿಕ ವಸ್ತುಗಳನ್ನು ಖರೀದಿಸುತ್ತಿವೆ ಎಂದು ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net