ಮಕ್ಕಳಿಗೆ ವೀರವನಿತೆಯರ ಚರಿತ್ರೆ ಪರಿಚಯಿಸಿ

skp channamma
ಶಿಕಾರಿಪುರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರನ್ನು ಗೌರವಿಸಲಾಯಿತು. ನಾಗರಾಜ ಗೌಡ, ಶಿವರಾಜ್, ಡಾ. ಮಹಂತೇಶ್, ಶೈಲಾ ಮಡ್ಡಿ ಇತರರಿದ್ದರು.
Published on

ಶಿಕಾರಿಪುರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಕೂಡ ಪುರುಷರಷ್ಟೇ ಪ್ರಮುಖವಾಗಿದೆ. ಬ್ರಿಟಿಷರಿಗೆ ಭಾರತೀಯ ಮಹಿಳೆಯರ ಶೌರ್ಯ, ಪರಾಕ್ರಮ ಪರಿಚಯಿಸಿದವಳು ಕಿತ್ತೂರು ರಾಣಿ ಚನ್ನಮ್ಮ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.

ತಾಪಂ ಸಭಾಂಗಣದಲ್ಲಿ ತಾಲೂಕು ಪಂಚಮಸಾಲಿ ಸಮಾಜ ಮತ್ತು ತಾಲೂಕು ಆಡಳಿತ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತಿಹಾಸದಲ್ಲಿ ಚನ್ನಮ್ಮ ಮಿನುಗುವ ನಕ್ಷತ್ರವಾಗಿ ಇಂದಿಗೂ ಪ್ರಕಾಶಿಸುತ್ತಿದ್ದಾಳೆ. ಆಕೆಯ ಶೌರ್ಯ, ಪರಾಕ್ರಮ, ದೇಶಭಕ್ತಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಆಂಗ್ಲರ ಯಾವ ಬೆದರಿಕೆಗೂ ಎದೆಗುಂದದೆ ಕಿತ್ತೂರು ಸಾಮ್ರಾಜ್ಯ ಕಟ್ಟಿದ ಮಹಾತಾಯಿ. ಇಂತಹ ವೀರವನಿತೆಯನ್ನು ಸ್ಮರಿಸುವುದರಿಂದ ನಮ್ಮಲ್ಲೂ ಆ ಭಾವನೆ ಮೂಡುತ್ತದೆ. ನಮ್ಮ ಮಕ್ಕಳಿಗೆ ವೀರವನಿತೆಯರ ಜೀವನ ಚರಿತ್ರೆಯನ್ನು ಪರಿಯಿಸಬೇಕು ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾಗರಾಜ ಗೌಡ ಮಾತನಾಡಿ, ಮಹಿಳೆಯರು ಅನಾದಿ ಕಾಲದಿಂದಲೂ ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಶ್ರದ್ಧೆ, ಸಂಕಲ್ಪ ಮತ್ತು ಪರಿಶ್ರಮಕ್ಕೆ ಮತ್ತೊಂದು ಹೆಸರೇ ಮಹಿಳೆಯರು. ಸ್ವಾತಂತ್ರೃ ಸಂಗ್ರಾಮದಲ್ಲಿ ಚನ್ನಮ್ಮನ ಹೆಸರು ಚಿರಸ್ಥಾಯಿಯಾಗಿದೆ ಎಂದರು.

ಸಾಹುಕಾರ್ ವೀರಣ್ಣ ಅವರು ಕೇವಲ ಒಂದು ರೂಪಾಯಿ ದಂಡವನ್ನು ಬ್ರಿಟಿಷರಿಗೆ ಕಟ್ಟಲು ನಿರಾಕರಿಸಿ ಪಟ್ಟಣದ ಹೃದಯಭಾಗದಲ್ಲಿ ಇರುವಂತಹ ಕಟ್ಟಡವನ್ನು ಕಟ್ಟಿಸಿಕೊಟ್ಟರು. ಆದರೆ ಅದು ಇಂದು ಪಾಳುಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅದನ್ನು ಸ್ವಾತಂತ್ರ್ಯದ ಸವಿನೆನಪಿಗಾಗಿ ಜೀರ್ಣೋದ್ಧಾರ ಮಾಡಿ ಸ್ಮಾರಕವನ್ನಾಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಿವರಾಜ್, ಜಿಲ್ಲಾ ಸಂಚಾಲಕರಾದ ಡಾ. ಮಹಂತೇಶ್, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಇಒ ನಾಗರಾಜ್, ಸಹಾಯಕ ಕೃಷಿ ಅಧಿಕಾರಿ ಕಿರಣ್‌ಕುಮಾರ್ ಹರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net