

ವೇಮಗಲ್: ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಹಾಗೂ ಅವುಗಳ ಅನುಷ್ಠಾನದಲ್ಲಿ ವಿದ್ಯಾರ್ಥಿಗಳು, ಯುವಕರ ಪಾತ್ರ ಅತಿ ಮುಖ್ಯವಾಗಿದ್ದು, ರೈತರಿಗೆ ಕೃಷಿ ಉತ್ಪನ್ನಗಳು, ನವೀನ ತಂತ್ರಜ್ಞಾನ, ವಿಜ್ಞಾನಾಧಾರಿತ ಕೃಷಿ ವಿಧಾನಗಳ ಕುರಿತು ಮಾಹಿತಿ ನೀಡಿ ಸಮಗ್ರ ಕೃಷಿ ಪದ್ಧತಿ ಅನುಸರಿಸಲು ಅರಿವು ಮೂಡಿಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ. ಸುರೇಶ್ ಕರೆ ನೀಡಿದರು.
ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಕೋಲಾರ, ಚಿಂತಾಮಣಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ರೇಷ್ಮೆಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ. ರೇಷ್ಮೆ ಕೃಷಿ ಮತ್ತು ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು.
ಕೃಷಿ ಪದ್ಧತಿಯಲ್ಲಿ ಇಂದು ಹೊಸ ತಂತ್ರಜ್ಞಾನದ ಅಳವಡಿಕೆ ನಡೆಯುತ್ತಿದೆ, ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವ ಪ್ರಯತ್ನ ಮುಖ್ಯ. ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದ್ದು, ಖರ್ಚು ಹೆಚ್ಚಳದಿಂದ ರೈತರು ವಿಚಲಿತರಾಗದಂತೆ ತಂತ್ರಜ್ಞಾನದ ಅಳವಡಿಕೆ ಮೂಲಕ ಹೇಗೆ ಲಾಭದಾಯಕವಾಗಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಅರಿವು ನೀಡಬೇಕು ಎಂದರು.
ಕೋಲಾರ ಜಿಲ್ಲೆ ಕೃಷಿಕರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಇಂದು ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಾಲಿನ್ಯವಾಗಿದೆ. ಇದರಿಂದ ಕೃಷಿಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ಮಣ್ಣಿನ ಆರೋಗ್ಯ ಕಾಪಾಡುವುದರ ಕುರಿತು ತಿಳಿಸಿಕೊಡಬೇಕು.
ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ವೆಂಕಟರಮಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಾರ್ಯಾನುಭವದ ಮೂಲಕ ಗ್ರಾಮೀಣ ರೈತರ ಮನಗೆಲ್ಲುವ ಕೆಲಸ ಮಾಡಿದ್ದಾರೆ. ಅನೇಕ ವಿಷಯಗಳಲ್ಲಿ ತಾಂತ್ರಿಕ ಅರಿವು ನೀಡಿದ್ದಾರೆ. ಇದನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.
ರೇಷ್ಮೆ ಕೃಷಿ ಇಂದು ಅವಿಭಜಿತ ಜಿಲ್ಲೆಯ ಜೀವನಾಡಿಯಾಗಿದೆ, ಇದರಿಂದ ಆರ್ಥಿಕವಾಗಿ ರೈತರು ಬದುಕು ಕಟ್ಟಿಕೊಂಡಿದ್ದು, ಕಾಲಕ್ಕೆ ತಕ್ಕಂತೆ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಸಾಗಿದರೆ ಮಾತ್ರ ಲಾಭ ಸಾಧ್ಯ ಎಂದು ತಿಳಿಸಿದರು.
ವಸ್ತುಪ್ರದರ್ಶನದಲ್ಲಿ ತಾಂತ್ರಿಕ ಉದ್ಯಾನ
ವಿದ್ಯಾರ್ಥಿಗಳು ಹಲವು ಕೃಷಿ ಮತ್ತು ರೇಷ್ಮೆ ವಿಭಾಗಗಳ ಕುರಿತು ಅತಿಥಿಗಳಿಗೆ ಮತ್ತು ರೈತರಿಗೆ ಮಾಹಿತಿ ನೀಡಿದರು. ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾದ ನೂತನ ತಳಿಗಳು ಮತ್ತು ತಂತ್ರಜ್ಞಾನ ಪರಿಚಯಿಸಲು 16 ಬೆಳೆಗಳ ತಳಿಗಳನ್ನು ಒಳಗೊಂಡ ಖುಷ್ಕಿ ಬೇಸಾಯ ಬೆಳೆ ತಾಂತ್ರಿಕ ಉದ್ಯಾನವನವನ್ನು ಸ್ಥಾಪಿಸಲಾಗಿತ್ತು. ಒಟ್ಟು 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆ ಸ್ಥಾಪಿಸಿ ರೈತರಿಗೆ ಕೃಷಿ ಉತ್ಪನ್ನಗಳು, ನವೀನ ತಂತ್ರಜ್ಞಾನಗಳು ಮತ್ತು ವಿಜ್ಞಾನಾಧಾರಿತ ಕೃಷಿ ವಿಧಾನಗಳ ಕುರಿತು ಪ್ರಾತ್ಯಕೆ ನೀಡಲಾಯಿತು. ಉಚಿತ ಮಾನವ ಹಾಗೂ ಪಶು ವೈದ್ಯಕಿಯ ಶಿಬಿರ ಏರ್ಪಡಿಸಲಾಗಿತ್ತು.