

ಬೆಂಗಳೂರು: ಕಡಿಮೆ ನೀರಿನಲ್ಲಿ ಹಾಗೂ ಹೆಚ್ಚಿನ ಇಳುವರಿ ಬರುವ ತಳಿಗಳನ್ನು ಪರಿಚಯಿಸುವ ಕೆಲಸ ಮಾಡುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಾಸಸೌಧದ ತಮ್ಮ ಕಚೇರಿ ಕೊಠಡಿಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಹಾಗೂ ಯೋಜನೆಗಳ ಅನುಷ್ಠಾನ, ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಹೊಸ ಸಂಶೋಧನೆಗಳನ್ನು ನಡೆಸುವ ಮೂಲಕ ರೈತ ಸ್ನೇಹಿ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕು. ರೈತರ ಉತ್ಪಾದನೆ ಹಾಗೂ ಜೀವನ ಮಟ್ಟ ಗಣನೀಯ ಸುಧಾರಣೆಗೆ ಅಗತ್ಯವಿರುವ ಪೂರಕ ಸಂಶೋಧನೆ ಮತ್ತು ತಂತ್ರಜ್ಞಾನದ ವರ್ಗಾವಣೆಗೆ ಇನ್ನಷ್ಟು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯಗಳು ತಳಿ ಅಭಿವೃದ್ಧಿ, ಕಡಿಮೆ ರಾಸಾಯನಿಕಗಳ ಬಳಕೆ, ಕೀಟ ನಿಯಂತ್ರಣ ಹಾಗೂ ಬದಲಾಗುತ್ತಿರುವ ಹವಾಮಾನ ವೈಪರಿತ್ಯಗಳಿಗೆ ಅನುಗುಣವಾದ ಕೃಷಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುವಂತೆ ತಿಳಿಸಿದರು.
ಸಮಗ್ರ ಬೇಸಯ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಅರಿವು ಹಾಗೂ ನೆರವಿನ ಕಾರ್ಯಕ್ರಮಗಳನ್ನು ರೂಪಿಸುವಂತೆ ಹೇಳಿದರು. ಕೃಷಿ ವಿಶ್ವವಿದ್ಯಾಲಯಗಳ ಶ್ರೇಣಿಗಳ ಬಗ್ಗೆ ಪರಿಶೀಲಿಸಿದ ಸಚಿವರು, ನಿರಂತರವಾಗಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಿದರು.
ಎನ್.ಎ.ಎ.ಎಸ್ ನಿಂದ ರೇಟಿಂಗ್ ಪಡೆದ ಪ್ರಬಂಧಗಳು 3 ವರ್ಷಗಳಿಂದ 131 ರಿಂದ 133ರಲ್ಲಿಯೇ ಇದೆ. ವರ್ಷದಿಂದ ವರ್ಷಕ್ಕೆ ಸಂಶೋಧನಾ ಪ್ರಬಂಧಗಳು ಏರಿಕೆಯಾಗಬೇಕು ಎಂದು ನಿರ್ದೇಶನ ನೀಡಿದರು.
5 ವರ್ಷಗಳಲ್ಲಿ ಕೃಷಿ ವಿಜ್ಞಾನಿಗಳು ಕೇವಲ 12 ಪೇಟೆಂಟ್ ಪಡೆದಿದ್ದು, ಕೃಷಿ ಸಂಶೋಧನೆ ಮತ್ತು ತಳಿ ಅಭಿವೃದ್ದಿ, ರೋಗ ನಿಯಂತ್ರಣ, ಇಳುವರಿ ಹೆಚ್ಚಿಸುವುದು, ಯಾಂತ್ರೀಕರಣ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಚಲುವರಾಯಸ್ವಾಮಿ ಹೇಳಿದರು.