ಆತ್ಮೀಯತೆ ಮಹಿಳೆ ಮೇಲಿನ ಹಲ್ಲೆಗೆ ಪರ್ಮಿಟ್ ಅಲ್ಲ ಹೈಕೋರ್ಟ್ ಅಭಿಪ್ರಾಯ

highcourt
Published on

ಪವಿತ್ರಾ ಕುಂದಾಪುರ ಬೆಂಗಳೂರು

ಪುರುಷ-ಮಹಿಳೆ ನಡುವೆ ಎಷ್ಟೇ ಆತ್ಮೀಯತೆ ಹೊಂದಿದ್ದರು ಸಹ ಅದು ಮಹಿಳೆಯ ಮೇಲೆ ಹಲ್ಲೆ ನಡೆಸಲು ಪುರುಷ ಪರವಾನಿಗೆ ಹೊಂದಿದ್ದಾನೆ ಎಂದರ್ಥವಲ್ಲ ಎಂದಿರುವ ಹೈಕೋರ್ಟ್, ವ್ಯಕ್ತಿಯ ವಿರುದ್ಧ ದಾಖಲಾಗಿರುವ ಹಲ್ಲೆ ಪ್ರಕರಣದ ವಿಚಾರಣೆಗೆ ಅಸ್ತು ಎಂದಿದೆ. ಆದರೆ, ಒಂದೇ ಸಮಯದಲ್ಲಿ ಇಬ್ಬರ ಜತೆ ಸಂಬಂಧ ಹೊಂದಿದ್ದ ಮಹಿಳೆಗೆ ಬುದ್ಧಿವಾದ ಹೇಳಿರುವ ನ್ಯಾಯಪೀಠ, ವ್ಯಕ್ತಿಯ ವಿರುದ್ಧ ಆಕೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎ್ಐಆರ್ ಅನ್ನು ರದ್ದುಗೊಳಿಸುವಂತೆ ಬೆಂಗಳೂರಿನ ವಿಜಯನಗರದ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಇಬ್ಬರೂ ಒಪ್ಪಿಗೆಯಿಂದಲೇ ಸಂಬಂಧ ಹೊಂದಿರುವುದು ತಿಳಿದು ಬರುತ್ತದೆ. ಇಲ್ಲಿ ಮಹಿಳೆಯೂ ಒಂದೇ ಅವಧಿಯಲ್ಲಿ ಇಬ್ಬರು ಪುರುಷರ ಜತೆ ಸಂಬಂಧ ಹೊಂದಿದ್ದು, ಒಂದೇ ಸಮಯದಲ್ಲಿ ಎರಡು ವ್ಯಕ್ತಿಗಳ ವಿರುದ್ಧ ಸಮಾನ ರೂಪದ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ. ದೂರುದಾರೆ ಒಂದೇ ಸಮಯದಲ್ಲಿ ಎರಡು ದೋಣಿಯಲ್ಲಿ ಪ್ರಯಾಣ ಬೆಳೆಸಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರು ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆ ಎನ್ನುವುದು ಹಾಗೂ ನಂಬಿಸಿ ವಂಚನೆ ಮಾಡಿದ್ದಾರೆ ಎನ್ನುವುದನ್ನು ಒಪ್ಪಲಾಗುವುದಿಲ್ಲ ಎಂದೇಳಿ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ. ಆದರೆ, ದೂರುದಾರೆಯ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು, ಅರ್ಜಿದಾರರು ಆಕೆಯ ಮೇಲೆ ಹಲ್ಲೆ ನಡೆಸಿರುವುದು ವೈದ್ಯಕೀಯ ಪ್ರಮಾಣ ಪತ್ರದಿಂದ ತಿಳಿದುಬರುತ್ತದೆ. ಹಲ್ಲೆ ನಡೆಸಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿರುವುದು ಸಾಕ್ಷಾೃಧಾರಗಳಿಂದ ಸಾಬೀತಾಗಿದೆ. ಆದ್ದರಿಂದ ಭಾರತೀಯ ದಂಡ ಸಂಹಿತೆ ಸೆಕ್ಷನ್ 323 ಹಾಗೂ 504ರ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಎತ್ತಿಹಿಡಿದಿದೆ.

ಹಲ್ಲೆ ಪ್ರಕರಣದ ಸಂಬಂಧ ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ ಬಳಿಕ ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಸಲಹೆ ಕೊಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅರ್ಜಿದಾರರ ವಾದವೇನು?

ಪರಸ್ಪರ ಒಮ್ಮತದಿಂದ ದೈಹಿಕ ಸಂಬಂಧ ಹೊಂದಿದ್ದರು. ಇದೇ ಅವಧಿಯಲ್ಲಿ ಆಕೆ ಇನ್ನೊಬ್ಬ ಪುರುಷನ ಜತೆಗೂ ಸಂಬಂಧ ಹೊಂದಿದ್ದು, ಆತನ ವಿರುದ್ಧವೂ ಇದೇ ಪ್ರಕಾರವಾಗಿ ಆರೋಪಿಸಿ ದೂರು ದಾಖಲಿಸಿದ್ದಾರೆ. ಯುವತಿಗೆ ಪುರುಷರ ವಿರುದ್ಧ ಈ ರೀತಿ ದೂರು ದಾಖಲಿಸುವುದು ಅಭ್ಯಾಸವಾಗಿದೆ. ಅಲ್ಲದೆ, ಅರ್ಜಿದಾರರು ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ಅವರ ಮೇಲಿನ ಆರೋಪಗಳೆಲ್ಲವೂ ಸತ್ಯಕ್ಕೆ ದೂರ. ಈ ಎಲ್ಲ ಅಂಶ ಪರಿಗಣಿಸಿ ಅರ್ಜಿದಾರರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕು.

ಸರ್ಕಾರದ ವಾದವೇನು?

ಅರ್ಜಿದಾರ ಮತ್ತು ದೂರುದಾರೆ ಪರಸ್ಪರ ಒಪ್ಪಗೆಯಿಂದಲೇ ದೈಹಿಕ ಸಂಬಂಧ ಹೊಂದಿದ್ದರು ಎನ್ನುವುದು ಸತ್ಯ ಸಂಗತಿ. ಆದರೆ, ಅರ್ಜಿದಾರರು ದೂರುದಾರೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದು ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಸಾಬೀತಾಗಿದೆ. ಹಾಗಾಗಿ ಐಪಿಸಿ ಸೆಕ್ಷನ್ 323, 417, 504ರ ಅಡಿಯಲ್ಲಿ ತನಿಖೆಗೆ ಸಹಕರಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಬೇಕು.

ಮದುವೆಯಾಗಿ ನೆಮ್ಮದಿಯಾಗಿದ್ದೇನೆ....

ನಾನು ಹಾಗೂ ದೂರುದಾರೆ ಒಟ್ಟಾಗಿ ನೆಲೆಸಿಲ್ಲ. ನಾನು ಆಕೆಯ ಬಳಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಲಿಲ್ಲ. ನನಗೆ ಮದುವೆಯಾಗಿದ್ದು, ಪತ್ನಿಯ ಜತೆಗೆ ಸುಖ ಸಂಸಾರ ನಡೆಸುತ್ತಿದ್ದೇನೆ. ಹಾಗಾಗಿ ತನ್ನ ವಿರುದ್ಧ ಮಾಡಲಾದ ಆರೋಪಗಳು ಸತ್ಯಕ್ಕೆ ದೂರ. ಉದ್ದೇಶಪೂವರ್ಕವಾಗಿ ದೂರು ದಾಖಲಿಸಿದ್ದಾಳೆ. ಹಾಗಾಗಿ ಪ್ರಕರಣ ರದ್ದುಗೊಳಿಸಬೇಕು.

ಪ್ರಕರಣವೇನು?

ದೂರುದಾರೆ ಹಾಗೂ ಅರ್ಜಿದಾರನಿಗೆ 2015ರಲ್ಲಿ ಪರಿಚಯ. 2015 ರಿಂದ 2022ರ ವರೆಗೆ ಇಬ್ಬರ ಮಧ್ಯೆ ಪರಸ್ಪರ ಸ್ನೇಹವಿತ್ತು. ಆದರೆ, ಮದುವೆಯಾಗುವುದಾಗಿ ನಂಬಿಸಿ, ತನ್ನ ಇಚ್ಛೆಗೆ ವಿರುದ್ಧವಾಗಿ ಮದ್ಯಪಾನ ಮಾಡಿಸಿ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಜತೆಗೆ ತೀವ್ರವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ 2022ರ ಜು. 11 ರಂದು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಮಹಿಳೆ ದೂರು ದಾಖಲಿಸಿದ್ದರು. ಇದನ್ನು ರದ್ದುಗೊಳಿಸುಂತೆ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net