ಹಿಂದು ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಐಸಿಸ್​ ಶಂಕಿತ ಉಗ್ರರು: ದೆಹಲಿ ಪೊಲೀಸರಿಂದ ತನಿಖೆ

delhi-police
Published on

ನವದೆಹಲಿ: ಹಿಂದು ನಾಯಕರ ಹತ್ಯೆಗೆ ಬಂಧಿತ ಮೂವರು ಐಸಿಸ್​ ಶಂಕಿತ ಉಗ್ರರು ಸಂಚು ರೂಪಿಸಿದ್ದರು ಎಂದು ಡಿಸಿಪಿ (ವಿಶೇಷ ದಳ) ಪಿ.ಸಿ. ಖುಸ್ವಾಹ ತಿಳಿಸಿದರು.

ದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಜೀರಾಬಾದ್​ನಲ್ಲಿ ಗುರುವಾರ ಮೂವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಖ್ವಾಜಾ ಮೊಯಿನುದ್ದೀನ್​, ಅಬ್ದುಲ್ ಸಮದ್, ಸೈಯದ್ ನವಾಜ್ ಎಂದು ಗುರುತಿಸಲಾಗಿದೆ.

ಇವರ ಜತೆ ಹಿಂದೂ ಮುನಾನೀ ನಾಯಕ ಸುರೇಶ್​ ಕುಮಾರ್​ ಹತ್ಯೆ ಪ್ರಕರಣದ ಆರು ಆರೋಪಿಗಳಿದ್ದಾರೆ ಎಂದು ಶಂಕಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಹಾಗೂ ಹಿಂದು ರಾಜಕೀಯ ನಾಯಕರ ಹತ್ಯೆಗೆ ಈ ತಂಡ ಸಂಚು ರೂಪಿಸಿತ್ತು. ಚುನಾವಣಾ ಬಿತ್ತಿಪತ್ರ, ಸಾಮಾಜಿಕ ಜಾಲತಾಣಗಳ ಮೂಲಕ ನಾಯಕರನ್ನು ಗುರುತಿಸುತ್ತಿದ್ದರೆಂದು ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದರು.

ಬಂಧಿತರಿಂದ 9 ಎಂಎಂನ ಮೂರು ಪಿಸ್ತೂಲ್​ ವಶಕ್ಕೆ ಪಡೆಯಲಾಗಿದೆ. ಯುಪಿ / ಎನ್‌ಸಿಆರ್‌ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಿದ್ಧತೆ ನಡೆಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ವಿದೇಶದ ಸಂಪರ್ಕ ಸಾಧಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವಿವರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net