ರಹಸ್ಯ ಕಾರ್ಯಾಚರಣೆಯ ಅಸಲಿ ಕಥೆ ಬಿಚ್ಚಿಟ್ಟ ಝೆಲೆನ್ಸ್ಕಿ: ಅರಬ್ ರಾಷ್ಟ್ರಗಳ ಆಕಾಶದಲ್ಲಿ ಇರಾನ್ ಡ್ರೋನ್‌ಗಳನ್ನು ಬೇಟೆಯಾಡಿದ್ದು ಹೇಗೆ..? Volodymyr Zelensky

ರಹಸ್ಯ ಕಾರ್ಯಾಚರಣೆಯ ಅಸಲಿ ಕಥೆ ಬಿಚ್ಚಿಟ್ಟ ಝೆಲೆನ್ಸ್ಕಿ: ಅರಬ್ ರಾಷ್ಟ್ರಗಳ ಆಕಾಶದಲ್ಲಿ ಇರಾನ್ ಡ್ರೋನ್‌ಗಳನ್ನು ಬೇಟೆಯಾಡಿದ್ದು ಹೇಗೆ..?
ರಹಸ್ಯ ಕಾರ್ಯಾಚರಣೆಯ ಅಸಲಿ ಕಥೆ ಬಿಚ್ಚಿಟ್ಟ ಝೆಲೆನ್ಸ್ಕಿ: ಅರಬ್ ರಾಷ್ಟ್ರಗಳ ಆಕಾಶದಲ್ಲಿ ಇರಾನ್ ಡ್ರೋನ್‌ಗಳನ್ನು ಬೇಟೆಯಾಡಿದ್ದು ಹೇಗೆ..?
Published on
ಕೈವ್: ರಷ್ಯಾ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿರುವ ಯುಕ್ರೇನ್, ಈಗ ಪಶ್ಚಿಮ ಏಷ್ಯಾದ ರಣಾಂಗಣದಲ್ಲೂ ತನ್ನ ಪರಾಕ್ರಮ ಮೆರೆದಿದೆ. ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ಇರಾನ್ ನಿರ್ಮಿತ ಶಾಹೆದ್ ಡ್ರೋನ್‌ಗಳನ್ನು ಯುಕ್ರೇನ್ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದಲ್ಲಿ ಯುಕ್ರೇನ್ ನೇರವಾಗಿ ಪಾಲ್ಗೊಂಡಿರುವುದು ಈಗ ಜಗತ್ತಿಗೆ ದೃಢಪಟ್ಟಿದೆ.

ಸ್ವದೇಶಿ ತಂತ್ರಜ್ಞಾನದ ಕಮಾಲ್: ಇಂಟರ್ಸೆಪ್ಟರ್ ಡ್ರೋನ್ ಅಟ್ಟಹಾಸ

ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಝೆಲೆನ್ಸ್ಕಿ, ಇದು ಕೇವಲ ತರಬೇತಿ ಅಥವಾ ತಾಲೀಮು ಆಗಿರಲಿಲ್ಲ. ನಮ್ಮ ಸೈನಿಕರು ರಣರಂಗದಲ್ಲಿ ಪರೀಕ್ಷಿಸಲ್ಪಟ್ಟ, ಯುಕ್ರೇನ್‌ನಲ್ಲಿಯೇ ತಯಾರಾದ ಅತ್ಯಾಧುನಿಕ ಇಂಟರ್ಸೆಪ್ಟರ್ ಡ್ರೋನ್​ಗಳನ್ನು ಬಳಸಿ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾವು ಯುಕ್ರೇನ್ ಮೇಲೆ ದಾಳಿ ಮಾಡಲು ಇದೇ ಇರಾನ್ ನಿರ್ಮಿತ ಶಾಹೆದ್ ಡ್ರೋನ್‌ಗಳನ್ನು ಬಳಸುತ್ತಿದೆ. ಹೀಗಾಗಿ, ಈ ಡ್ರೋನ್‌ಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಯುಕ್ರೇನ್ ಸೈನಿಕರಿಗೆ ಅಪಾರ ಅನುಭವವಿದೆ. ಇದೇ ಅನುಭವವನ್ನು ಬಳಸಿ ಮಧ್ಯಪ್ರಾಚ್ಯದ ಮಿತ್ರ ರಾಷ್ಟ್ರಗಳಿಗೆ ಯುಕ್ರೇನ್ ನೆರವು ನೀಡಿದೆ.

ತೈಲ ಮತ್ತು ಶಸ್ತ್ರಾಸ್ತ್ರಕ್ಕಾಗಿ 'ಡೀಲ್'?

ಈ ಕಾರ್ಯಾಚರಣೆಯ ಹಿಂದೆ ದೊಡ್ಡ ರಾಜತಾಂತ್ರಿಕ ಒಪ್ಪಂದವಡಗಿದೆ. ಈ ನೆರವಿನ ಬದಲಾಗಿ ಯುಕ್ರೇನ್‌ಗೆ ಹಲವು ಲಾಭಗಳು ಸಿಗುತ್ತಿವೆ.
ತೈಲ ಪೂರೈಕೆ: ಇಂಧನ ಕೊರತೆ ಎದುರಿಸುತ್ತಿರುವ ಯುಕ್ರೇನ್‌ಗೆ ಮಧ್ಯಪ್ರಾಚ್ಯ ದೇಶಗಳು ತೈಲ ಮತ್ತು ಡೀಸೆಲ್ ಪೂರೈಸಲು ಒಪ್ಪಿಕೊಂಡಿವೆ.
ವಾಯು ರಕ್ಷಣಾ ವ್ಯವಸ್ಥೆ: ಯುಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ರಕ್ಷಿಸಲು ಪ್ರತಿಯಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಮಿತ್ರ ರಾಷ್ಟ್ರಗಳು ಒದಗಿಸುತ್ತಿವೆ.
ಹಣಕಾಸಿನ ನೆರವು: ಕೆಲವು ಪ್ರಕರಣಗಳಲ್ಲಿ ಯುಕ್ರೇನ್‌ಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ಕೂಡ ಸಿಗುತ್ತಿದೆ ಎಂದು ಝೆಲೆನ್ಸ್ಕಿ ಬಹಿರಂಗಪಡಿಸಿದ್ದಾರೆ.

ಸಸ್ಪೆನ್ಸ್ ಮೂಡಿಸಿದ 'ಆ ನಾಲ್ಕು ದೇಶಗಳು'

ಝೆಲೆನ್ಸ್ಕಿ ಅವರು ಈ ಕಾರ್ಯಾಚರಣೆ ನಡೆದ ದೇಶಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಕನಿಷ್ಠ ನಾಲ್ಕು ಮಧ್ಯಪ್ರಾಚ್ಯ ದೇಶಗಳಲ್ಲಿ ಯುಕ್ರೇನ್‌ನ ಸುಮಾರು 228 ತಜ್ಞರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದಾಗ, ಪ್ರತಿಯಾಗಿ ಇರಾನ್ ಉಡಾಯಿಸಿದ ಡ್ರೋನ್‌ಗಳನ್ನು ತಡೆಯಲು ಯುಕ್ರೇನ್ ಸೈನಿಕರು ನೆರವಾಗಿದ್ದಾರೆ.

ಪಶ್ಚಿಮ ಏಷ್ಯಾ ಶಾಂತಿ ಮಾತುಕತೆಗೆ ಹೊಸ ಟ್ವಿಸ್ಟ್

ಈಗಾಗಲೇ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಮಾತುಕತೆಗಳು ಶುರುವಾಗುತ್ತಿರುವಾಗಲೇ ಈ ವಿಷಯ ಹೊರಬಿದ್ದಿದೆ. ಇರಾನ್ ವಿರುದ್ಧ ಯುಕ್ರೇನ್ ಸೈನಿಕರು ನೇರವಾಗಿ ಕಣಕ್ಕಿಳಿದಿರುವುದು ಇರಾನ್ ಅನ್ನು ಕೆರಳಿಸುವ ಸಾಧ್ಯತೆಯಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಯುದ್ಧ ಈಗ ಒಂದಕ್ಕೊಂದು ಬೆಸೆದುಕೊಂಡಿರುವುದು ಜಾಗತಿಕ ಮಟ್ಟದಲ್ಲಿ ಭದ್ರತಾ ಆತಂಕವನ್ನು ಹೆಚ್ಚಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net