ಲೈವ್ ಕ್ಯಾಮರಾದಲ್ಲೇ ಸೆರೆಯಾಯ್ತು ಭೀಕರ ದೃಶ್ಯ: ಜ್ವಾಲಾಮುಖಿ ಕುಳಿಗೆ ಬಿದ್ದು ಯಮೆನ್ 'ಸ್ಪೈಡರ್-ಮ್ಯಾನ್' ದುರಂತ ಸಾವು! Yemen SpiderMan

ಲೈವ್ ಕ್ಯಾಮರಾದಲ್ಲೇ ಸೆರೆಯಾಯ್ತು ಭೀಕರ ದೃಶ್ಯ: ಜ್ವಾಲಾಮುಖಿ ಕುಳಿಗೆ ಬಿದ್ದು ಯಮೆನ್ 'ಸ್ಪೈಡರ್-ಮ್ಯಾನ್' ದುರಂತ ಸಾವು! Yemen SpiderMan
ಲೈವ್ ಕ್ಯಾಮರಾದಲ್ಲೇ ಸೆರೆಯಾಯ್ತು ಭೀಕರ ದೃಶ್ಯ: ಜ್ವಾಲಾಮುಖಿ ಕುಳಿಗೆ ಬಿದ್ದು ಯಮೆನ್ 'ಸ್ಪೈಡರ್-ಮ್ಯಾನ್' ದುರಂತ ಸಾವು! Yemen SpiderMan
Published on

ಪ್ರಮುಖ ಮುಖ್ಯಾಂಶಗಳು

  • ಯಮೆನ್‌ನ "ಸ್ಪೈಡರ್-ಮ್ಯಾನ್" ಎಂದೇ ಜಾಗತಿಕವಾಗಿ ತುಂಬಾ ಪ್ರಸಿದ್ಧಿ ಪಡೆದಿದ್ದ ಸಾಹಸಿ ದುರಂತ ಸಾವು
  • ಕಡಿದಾದ ಬಂಡೆಯನ್ನು ಏರಲು ಹೋಗಿ ಆಳವಾದ ಜ್ವಾಲಾಮುಖಿಯ ಕುಳಿಗೆ ಬಿದ್ದು ದುರಂತ ಅಂತ್ಯ
  • 30 ವರ್ಷದ ಸಾಹಸಿ ಅಲ್ ಖಾಕಾ ಬಿನ್ ಅಂತರ್ ಸಾವಿಗೆ ಕಂಬನಿ ಮಿಡಿದ ಅರಬ್​ ದೇಶಗಳ ಜನರು
  • ಬಂಡೆಯನ್ನು ಏರುವಾಗ ಕೈ ಜಾರಿ ಕೆಳಗೆ ಬಿದ್ದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಸನಾ : ಯಮೆನ್‌ನ "ಸ್ಪೈಡರ್-ಮ್ಯಾನ್" ( Yemen SpiderMan ) ಎಂದೇ ಜಾಗತಿಕವಾಗಿ ತುಂಬಾ ಪ್ರಸಿದ್ಧಿ ಪಡೆದಿದ್ದ ಸಾಹಸಿ ಹಾಗೂ ಪ್ರಮುಖ ಸೋಶಿಯಲ್​ ಮೀಡಿಯಾ ಸ್ಟಾರ್​, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಡಿದಾದ ಬಂಡೆಯನ್ನು ಏರಲು ಹೋಗಿ ಆಳವಾದ ಜ್ವಾಲಾಮುಖಿಯ ಕುಳಿಗೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ಇಂಟರ್ನೆಟ್ ಲೋಕದಲ್ಲಿ 'ಅಂತರ್ ಅಲ್ ಅಬ್ಸಿ' ಎಂದೇ ಜನಪ್ರಿಯರಾಗಿದ್ದ 30 ವರ್ಷದ ಸಾಹಸಿ ಅಲ್ ಖಾಕಾ ಬಿನ್ ಅಂತರ್, ಕಳೆದ ಶುಕ್ರವಾರ ಯಮೆನ್‌ನ ದಕ್ಷಿಣ ಅಲ್ ಧಾಲೆ ಪ್ರಾಂತ್ಯದಲ್ಲಿರುವ ಹರಧತ್ ದಮತ್ ಜ್ವಾಲಾಮುಖಿ ಕುಳಿಯ ಕಡಿದಾದ ಗೋಡೆಗಳನ್ನು ಏರುತ್ತಿದ್ದಾಗ ಆಕಸ್ಮಿಕವಾಗಿ ಹಿಡಿತ ತಪ್ಪಿ ಆಳವಾದ ಕುಳಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ. ಬಂಡೆಯನ್ನು ಏರುವಾಗ ಕೈ ಜಾರಿ ಕೆಳಗೆ ಬಿದ್ದ ಭೀಕರ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಯಮೆನ್‌ನ ಸಿವಿಲ್ ಡಿಫೆನ್ಸ್ ಅಥಾರಿಟಿಯು ಈ ದುರಂತ ಘಟನೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಇಡೀ ಅರಬ್ ಜಗತ್ತಿನಾದ್ಯಂತ ತಮಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟಿದ್ದ ಅತ್ಯಂತ ಅಪಾಯಕಾರಿ ಸಾಹಸವೊಂದನ್ನು ಪ್ರಯತ್ನಿಸುವಾಗ ಅಂತರ್ ಅವರು ಆಕಸ್ಮಿಕವಾಗಿ ಕುಳಿಗೆ ಬಿದ್ದಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ಅವರು ಬಿದ್ದ ಆ ಜ್ವಾಲಾಮುಖಿಯ ಕುಳಿಯು ಸುಮಾರು 120 ಮೀಟರ್‌ಗಳಷ್ಟು ಆಳವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಮೆನ್‌ನ ಸಿವಿಲ್ ಡಿಫೆನ್ಸ್ ಅಥಾರಿಟಿ ಬಿಡುಗಡೆ ಮಾಡಿರುವ ಸಣ್ಣ ವಿಡಿಯೋದಲ್ಲಿ ಅಂತರ್ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಡಿದಾದ ಬಂಡೆಯನ್ನು ಏರುತ್ತಿರುವುದು ಮತ್ತು ಇದ್ದಕ್ಕಿದ್ದಂತೆ ಹಿಡಿತ ತಪ್ಪಿ ಜ್ವಾಲಾಮುಖಿಯ ಕುಳಿಯೊಳಗೆ ಬೀಳುವ ಭಯಾನಕ ದೃಶ್ಯಗಳು ಕಂಡುಬಂದಿವೆ.
ಈ ದುರಂತದ ಬೆನ್ನಲ್ಲೇ ಡೈವರ್‌ಗಳು (ಮುಳುಗುತಜ್ಞರು) ಸೇರಿದಂತೆ ವಿಶೇಷ ರಕ್ಷಣಾ ಪಡೆಗಳನ್ನು ಆ ಪ್ರದೇಶಕ್ಕೆ ರವಾನಿಸಲಾಗಿತ್ತು, ಆದರೆ ಅಲ್ಲಿನ ಕಡಿದಾದ ಮತ್ತು ಕಲ್ಲು ಬಂಡೆಗಳಿಂದ ಕೂಡಿದ ಭೂಪ್ರದೇಶದಿಂದಾಗಿ ರಕ್ಷಣಾ ತಂಡವು ತೀವ್ರ ಸವಾಲುಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸುದೀರ್ಘ ಶೋಧ ಕಾರ್ಯಾಚರಣೆಯ ನಂತರ, ನೀರಿನ ಮೇಲ್ಮೈಯಿಂದ ಅಂದಾಜು 30 ಮೀಟರ್ ಆಳದಲ್ಲಿ ಸಿಲುಕಿದ್ದ ಅಂತರ್ ಅವರ ಮೃತದೇಹವನ್ನು ಡೈವರ್‌ಗಳು ಹೊರತೆಗೆದಿದ್ದಾರೆ.
ಅಂದಹಾಗೆ, ಯಮೆನ್​ನ ದಮತ್ ನಗರದ ಬಳಿ ಇರುವ 'ಹರಧತ್ ದಮತ್' ಅಥವಾ 'ಹರ್ದಾ ದಮ್' ಒಂದು ಪ್ರಸಿದ್ಧ ಜ್ವಾಲಾಮುಖಿ ರಚನೆಯಾಗಿದೆ. ಎತ್ತರವಾದ ಕಲ್ಲಿನ ಗೋಡೆಗಳು ಮತ್ತು ತಳಭಾಗದಲ್ಲಿ ಗಂಧಕಯುಕ್ತ ಬಿಸಿನೀರಿನ ಸರೋವರವನ್ನು ಹೊಂದಿರುವ ಈ ಪ್ರದೇಶವು, ಸವಾಲಿನ ಭೂಪ್ರದೇಶವಾಗಿದ್ದರೂ ಸಹ ಪ್ರವಾಸಿಗರನ್ನು ಮತ್ತು ಸಾಹಸಿಗಳನ್ನು ಕೈಬೀಸಿ ಕರೆಯುತ್ತಿತ್ತು. ಇಂತಹ ಕಡಿದಾದ ಬೆಟ್ಟಗಳು, ಬಂಡೆಗಳ ಅಂಚುಗಳು ಹಾಗೂ ಜ್ವಾಲಾಮುಖಿ ಪ್ರದೇಶಗಳನ್ನು ಯಾವುದೇ ಹಗ್ಗ ಅಥವಾ ಸುರಕ್ಷತಾ ಸಾಧನಗಳಿಲ್ಲದೆ ಬರಿಗೈಯಲ್ಲೇ ಏರುವ ಮೂಲಕ ಅಂತರ್ ಯಮೆನ್‌ನ ಅತ್ಯಂತ ಜನಪ್ರಿಯ ಸಾಹಸಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರ ಹಲವು ವಿಡಿಯೋಗಳು ಭಾರಿ ವೈರಲ್ ಆಗಿದ್ದರಿಂದ, ಅಭಿಮಾನಿಗಳು ಅವರನ್ನು ಪ್ರೀತಿಯಿಂದ "ಯಮನ್‌ನ ಸ್ಪೈಡರ್-ಮ್ಯಾನ್" ಎಂದು ಕರೆಯುತ್ತಿದ್ದರು.
ಅದ್ಭುತವಾದ ದೃಶ್ಯಾವಳಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ತಮ್ಮ ದೈಹಿಕ ಸಾಮರ್ಥ್ಯದ ಗಡಿಗಳನ್ನು ಮೀರಿ ಸಾಹಸ ಮಾಡುತ್ತಿದ್ದ ಈ ಅಪ್ರತಿಮ ಸಾಹಸಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿಯ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳು ಆಘಾತ ಮತ್ತು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಾ, ಅವರ ಹಳೆಯ ಸಾಹಸದ ವಿಡಿಯೋಗಳನ್ನು ಹಂಚಿಕೊಂಡು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅನೇಕರು ಅವರನ್ನು ಧೈರ್ಯ ಮತ್ತು ದೃಢಸಂಕಲ್ಪದ ಸಂಕೇತ ಎಂದು ನೆನಪಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳಿಲ್ಲದೆ ಮಾಡುವ ಇಂತಹ ಅತ್ಯಂತ ಅಪಾಯಕಾರಿ ಸಾಹಸಗಳ ಭೀಕರ ಪರಿಣಾಮದ ಕಡೆಗೆ ಬೆರಳು ಮಾಡಿದ್ದಾರೆ.
ಈ ಭೀಕರ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಲ್ಲಿನ ಸ್ಥಳೀಯ ಅಧಿಕಾರಿಗಳು, ಪರ್ವತಾರೋಹಿಗಳು ಮತ್ತು ಸಾಹಸ ಪ್ರವೃತ್ತಿಯ ಯುವಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂತಹ ಸಾಹಸಗಳಿಗೆ ಕೈ ಹಾಕುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸೂಕ್ತ ರಕ್ಷಣಾ ಸಾಧನಗಳನ್ನು ಧರಿಸಬೇಕು ಎಂದು ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ. ಕನಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ಇಂತಹ ಘೋರ ದುರಂತಗಳು ಮರುಕಳಿಸುತ್ತವೆ ಎಂದು ಅಧಿಕಾರಿಗಳು ತೀವ್ರವಾಗಿ ಎಚ್ಚರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net