Underwater Volcano: ವಿದ್ಯುತ್ ಉತ್ಪಾದಿಸಲು ಸೂರ್ಯನ ಬೆಳಕು, ಗಾಳಿ ಅಥವಾ ಕಲ್ಲಿದ್ದಲೇ ಬೇಕೆಂದಿಲ್ಲ ಸಮುದ್ರದ ಸಾವಿರಾರು ಮೀಟರ್ ಆಳದಲ್ಲಿರುವ ಜ್ವಾಲಾಮುಖಿಯ ಶಾಖವನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸಬಹುದೇ ಎಂಬ ಪ್ರಯೋಗವೊಂದು ವಿಜ್ಞಾನ ಲೋಕದಲ್ಲಿ ಕುತೂಹಲ ಮೂಡಿಸಿದೆ. ಅಮೆರಿಕದ ಕರಾವಳಿಯ ಸಮೀಪ ಸಮುದ್ರದೊಳಗಿನ ಜ್ವಾಲಾಮುಖಿಯಿಂದ ಹೊರಬರುವ ಅತಿ ಬಿಸಿಯಾದ ನೀರನ್ನು ಬಳಸಿಕೊಂಡು ಎಂಜಿನಿಯರ್‌ಗಳ ತಂಡ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷವೆಂದರೆ, ಉಪಕರಣಗಳು ಬಳಸಿದ ವಿದ್ಯುತ್‌ಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದನೆ 8.7 ಸೆಕೆಂಡ್‌ಗಳ ಕಾಲ ದಾಖಲಾಗಿದೆ.
ಸಿಯಾಟಲ್ ಮೂಲದ ಎಂಡ್ಯೂರೆನ್ಸ್ ಎನರ್ಜಿ ಸಂಸ್ಥೆ ಅಕ್ಟೋಬರ್ 19ರಂದು ತನ್ನ ಅಡೆಲಿ ಪ್ರಯೋಗದ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪ್ರಯೋಗವನ್ನು ಅಮೆರಿಕದ ಒರೆಗಾನ್ ಕರಾವಳಿಯಿಂದ ಸುಮಾರು 480 ಕಿಲೋಮೀಟರ್ ದೂರದಲ್ಲಿರುವ ಆಕ್ಸಿಯಲ್ ಸೀಮೌಂಟ್ ಎಂಬ ಸಮುದ್ರದೊಳಗಿನ ಸಕ್ರಿಯ ಜ್ವಾಲಾಮುಖಿಯಲ್ಲಿ ನಡೆಸಲಾಗಿದೆ. ಇದು ಸಮುದ್ರದ ಮೇಲ್ಮೈಯಿಂದ ಸುಮಾರು 1,500 ಮೀಟರ್ ಆಳದಲ್ಲಿದೆ.
ಸಮುದ್ರದ ತಳದಲ್ಲಿರುವ ಜ್ವಾಲಾಮುಖಿಯ ಕೆಳಭಾಗದಲ್ಲಿ ಕರಗಿದ ಶಿಲೆಗಳ ಶಾಖದಿಂದ ನೀರು ಬಿಸಿಯಾಗುತ್ತದೆ. ಸಮುದ್ರದ ನೀರು ತಳದಲ್ಲಿನ ಬಿರುಕುಗಳ ಮೂಲಕ ಭೂಮಿಯ ಒಳಗೆ ಹರಿದು, ಅಲ್ಲಿ ಬಿಸಿಯಾಗಿ ಮತ್ತೆ ಬಿಸಿನೀರಿನ ಬುಗ್ಗೆಗಳ ರೂಪದಲ್ಲಿ ಹೊರಬರುತ್ತದೆ. ಇವುಗಳನ್ನು ಹೈಡ್ರೋಥರ್ಮಲ್ ವೆಂಟ್ಸ್ ಎಂದು ಕರೆಯಲಾಗುತ್ತದೆ. ಭೂಮಿಯ ಒಳಗಿನ ಶಾಖವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಇದರಲ್ಲಿ ಬಿಸಿನೀರು ಅಥವಾ ಹಬೆಯ ಒತ್ತಡದಿಂದ ಟರ್ಬೈನ್ ತಿರುಗಿಸಿ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದೇ ತಂತ್ರಜ್ಞಾನವನ್ನು ಸಮುದ್ರದ ತಳದಲ್ಲೂ ಬಳಸುವುದು ಎಂಜಿನಿಯರ್‌ಗಳ ಉದ್ದೇಶವಾಗಿತ್ತು.
ಈ ಪ್ರಯೋಗದಲ್ಲಿ ಪಂಪ್‌ಗಳು ಮತ್ತು ಇತರ ಉಪಕರಣಗಳು ಬಳಸಿದ ವಿದ್ಯುತ್ ಪ್ರಮಾಣವನ್ನು ಕಳೆದು ಲೆಕ್ಕ ಹಾಕಿದಾಗಲೂ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದೆ. 8.7 ಸೆಕೆಂಡ್‌ಗಳ ಅವಧಿಯಲ್ಲಿ ಸರಾಸರಿ 2 ಕಿಲೋವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದ್ದು, ಗರಿಷ್ಠ ಪ್ರಮಾಣ 16.5 ಕಿಲೋವ್ಯಾಟ್ ತಲುಪಿದೆ ಎಂದು ಕಂಪನಿ ತಿಳಿಸಿದೆ.ಸಮುದ್ರದಾಳದಲ್ಲಿರುವ ಉಪಕರಣಗಳನ್ನು ಸಿಯಾಟಲ್‌ನಿಂದಲೇ ತಂಡ ನಿಯಂತ್ರಿಸಿತ್ತು. ಇದಕ್ಕೆ ವಾಷಿಂಗ್ಟನ್ ವಿಶ್ವವಿದ್ಯಾಲಯ ನಿರ್ವಹಿಸುವ ಸಮುದ್ರದೊಳಗಿನ ಸಂಪರ್ಕ ಕೇಬಲ್ ಜಾಲ ನೆರವಾಗಿದೆ.
ಈ ಪ್ರಯೋಗ ಯಶಸ್ವಿಯಾಗಿದ್ದರೂ ನಿರಂತರವಾಗಿ ವಿದ್ಯುತ್ ಉತ್ಪಾದಿಸುವುದು ವಿಜ್ಞಾನಿಗಳ ಮುಂದಿರುವ ದೊಡ್ಡ ಸವಾಲಾಗಿದೆ. ತಿಂಗಳುಗಳು ಅಥವಾ ವರ್ಷಗಳ ಕಾಲ ಉಪಕರಣಗಳು ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ಅಲ್ಲದೆ, ಹಡಗು ಸಾಗಣೆ, ಬಾವಿ ಕೊರೆಯುವುದು ಮತ್ತು ಉಪಕರಣಗಳ ಅಳವಡಿಕೆಗೆ ತಗುಲುವ ಶಕ್ತಿಯ ವೆಚ್ಚವನ್ನೂ ಲೆಕ್ಕಹಾಕಬೇಕಿದೆ.
ಈ ಫಲಿತಾಂಶಗಳು ಕಂಪನಿಯ ಪ್ರಕಟಣೆಯನ್ನು ಆಧರಿಸಿದ್ದು, ಸ್ವತಂತ್ರ ವೈಜ್ಞಾನಿಕ ಪರಿಶೀಲನೆಯ ಅಧ್ಯಯನ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಸಮುದ್ರದಾಳದ ಜ್ವಾಲಾಮುಖಿಯಿಂದ ನಿರಂತರ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ವಾಣಿಜ್ಯ ಬಳಕೆಗೆ ಬರಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ, ( ಏಜೆನ್ಸೀಸ್).