ಶನಿವಾರವೇ ಇರಾನ್ ಮೇಲೆ ಅಟ್ಯಾಕ್ ಮಾಡಲು ಯೋಚಿಸಿದ್ದೇಕೆ ಅಮೆರಿಕ-ಇಸ್ರೇಲ್..? ಈ ರಹಸ್ಯ ಸ್ಕೆಚ್ ಹಿಂದಿದೆ ಅಚ್ಚರಿಯ ಕಾರಣ! | Khamenei Death

Khamenei Death | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Khamenei Death | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Published on
Khamenei Death: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವಾಯುಪಡೆಯ ಭೀಕರ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದು, ಈ ಘಟನೆಯು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಜ್ವಾಲೆಗೆ ತಳ್ಳಿದ್ದು, ಇರಾನ್ ಕೆರಳಿದ ನಾಗರಹಾವಿನಂತೆ ಪ್ರತೀಕಾರಕ್ಕೆ ತಯಾರಾಗಿದೆ.

ಶನಿವಾರವೇ ಏಕೆ..?

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಯೋಜಿಸಿದ್ದವು. ಖಮೇನಿ ಶನಿವಾರ ಸಂಜೆ ಟೆಹ್ರಾನ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಬೇಕಿತ್ತು. ಅದಕ್ಕೂ ಮುನ್ನವೇ ದಾಳಿ ನಡೆಸಲು ನಿರ್ಧರಿಸಿದ ಇಸ್ರೇಲಿ ಗುಪ್ತಚರ ಸಂಸ್ಥೆ (ಮಸ್ಸಾದ್), ಶನಿವಾರ ಬೆಳಿಗ್ಗೆಯೇ ಅವರ ಅಡಗುತಾಣವನ್ನು ಪತ್ತೆಹಚ್ಚಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಒಮಾನ್ ನೆರವಿನಿಂದ ಜಿನೀವಾದಲ್ಲಿ ನಡೆದ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗೆ ಹಸಿರು ನಿಶಾನೆ ತೋರಿಸಿದ್ದು, ಘಟನೆಯ ಬಳಿಕ ತಮ್ಮ ಟ್ರೂತ್ ಸೋಶಿಯಲ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಟ್ರಂಪ್, ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ ಎಂದು ಘೋಷಿಸಿದರು.
ಕಳೆದ ತಿಂಗಳಷ್ಟೇ ಇರಾನ್‌ನಲ್ಲಿ ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಸರ್ಕಾರವು ಸಾವಿರಾರು ಪ್ರತಿಭಟನಾಕಾರರನ್ನು ಕ್ರೂರವಾಗಿ ಹತ್ತಿಕ್ಕಿತ್ತು. ಈಗ ಖಮೇನಿಯನ್ನು ಇರಾನ್ ಸರ್ಕಾರಿ ಟಿವಿ ಹುತಾತ್ಮ ಎಂದು ಬಿಂಬಿಸುತ್ತಿದೆ. ಬ್ಲ್ಯಾಕ್​ ಬ್ಯಾನರ್‌ಗಳೊಂದಿಗೆ ಶೋಕ ವ್ಯಕ್ತಪಡಿಸುತ್ತಿರುವ ಸರ್ಕಾರ, ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ಕೆರಳಿಸಿ ಯುದ್ಧಕ್ಕೆ ಸಜ್ಜುಗೊಳಿಸುತ್ತಿದೆ.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉನ್ನತ ಸಲಹೆಗಾರರೊಂದಿಗೆ ಮಾತುಕತೆ ನಡೆದಿರುವುದು ದೃಢೀಕರಣವಾಗಿದ್ದು, ಟೆಹ್ರಾನ್ ವಿರುದ್ಧ ಇಸ್ರೇಲ್-ಅಮೆರಿಕ ವಾಯು ಮತ್ತು ನೌಕಾ ಕಾರ್ಯಾಚರಣೆಗೆ ಚಾಲನೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ದಾಳಿ ನಡೆದ ತಕ್ಷಣವೇ ಇರಾನ್ ಸುಮ್ಮನಿರದೆ, ಟೆಹ್ರಾನ್ ತನ್ನ ಪ್ರತೀಕಾರದ ಭಾಗವಾಗಿ ಇಸ್ರೇಲ್, ಕತಾರ್, ಬಹ್ರೇನ್, ಯುಎಇ, ಜೋರ್ಡಾನ್ ಮತ್ತು ಕುವೈತ್ ಮೇಲೆ ನೂರಾರು ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿ ಆರಂಭಿಸಿದೆ. ಇರಾನ್‌ನ ಈ ಉಗ್ರ ನಿಲುವಿನಿಂದಾಗಿ ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ದಂಗೆಗಳು ಶುರುವಾಗಿವೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತನ್ನ ಅಧಿಕೃತ ಟೆಲಿಗ್ರಾಮ್ ಪುಟದಲ್ಲಿ ಈ ಕುರಿತಾದ ಪೋಸ್ಟ್ ಹಂಚಿಕೊಂಡಿದ್ದು, ಖಮೇನಿ ಕೊಲೆಗಾರರಿಗೆ ಶಿಕ್ಷೆ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಇತಿಹಾಸದಲ್ಲೇ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆಯಾಗಲಿದೆ ಎಂದು ಐಆರ್‌ಜಿಸಿ ಘೋಷಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net