ಸೌಮ್ಯ ಸ್ವಭಾವದ ಸುಂದರ್ ಕೆರಳಿದ್ದೇಕೆ? ಡೇವಿಡ್ ಮಿಲ್ಲರ್ ಕ್ರೀಸ್ ದಾಟಿದ್ದೇ ದೊಡ್ಡ ತಪ್ಪಾಯ್ತಾ? ಮೈದಾನದಲ್ಲೇ ಹೈ-ಡ್ರಾಮಾ! Washington-Miller Controversy

ಸೌಮ್ಯ ಸ್ವಭಾವದ ಸುಂದರ್ ಕೆರಳಿದ್ದೇಕೆ? ಡೇವಿಡ್ ಮಿಲ್ಲರ್ ಕ್ರೀಸ್ ದಾಟಿದ್ದೇ ದೊಡ್ಡ ತಪ್ಪಾಯ್ತಾ? ಮೈದಾನದಲ್ಲೇ ಹೈ-ಡ್ರಾಮಾ!
ಸೌಮ್ಯ ಸ್ವಭಾವದ ಸುಂದರ್ ಕೆರಳಿದ್ದೇಕೆ? ಡೇವಿಡ್ ಮಿಲ್ಲರ್ ಕ್ರೀಸ್ ದಾಟಿದ್ದೇ ದೊಡ್ಡ ತಪ್ಪಾಯ್ತಾ? ಮೈದಾನದಲ್ಲೇ ಹೈ-ಡ್ರಾಮಾ!
Published on
ಅಹ್ಮದಾಬಾದ್: ಕ್ರಿಕೆಟ್ ಎನ್ನುವುದು ಕೇವಲ ಬ್ಯಾಟ್ ಮತ್ತು ಚೆಂಡಿನ ಹೋರಾಟವಲ್ಲ, ಅದು ಕೆಲವೊಮ್ಮೆ ಮನೋಭಾವಗಳ ಘರ್ಷಣೆಯೂ ಹೌದು. ಭಾನುವಾರ ನಡೆದ ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಭಾರತದ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್(Washington-Miller Controversy) ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಇದಕ್ಕೆ ಸಾಕ್ಷಿಯಾಗಿದೆ. ಪಂದ್ಯದ 14ನೇ ಓವರ್ ಮುಗಿದ ನಂತರ ಡ್ರಿಂಕ್ಸ್ ಬ್ರೇಕ್ ವೇಳೆ ಈ ಘಟನೆ ಸಂಭವಿಸಿದೆ.

ಜಗಳಕ್ಕೆ ಕಾರಣವಾದ ಆ ಒಂದು ಘಟನೆ..!

ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ, ಬೌಲರ್ ವಾಷಿಂಗ್ಟನ್ ಸುಂದರ್ ಚೆಂಡನ್ನು ಎಸೆಯುವ ಮುನ್ನವೇ ಡೇವಿಡ್ ಮಿಲ್ಲರ್ ಪದೇಪದೆ ಕ್ರೀಸ್‌ನಿಂದ ಬಹಳ ದೂರ ಮುಂದೆ ಹೋಗುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಸುಂದರ್, ಈ ಬಗ್ಗೆ ಅಂಪೈರ್ ಕ್ರಿಸ್ ಗ್ಯಾಫೆನಿ ಅವರಿಗೆ ದೂರು ನೀಡಿದರು. ಇದು ಮಿಲ್ಲರ್ ಅವರ ಕೆರಳುವಿಕೆಗೆ ಕಾರಣವಾಯಿತು. ಸಾಮಾನ್ಯವಾಗಿ ಮೈದಾನದಲ್ಲಿ ಅತಿ ಶಾಂತವಾಗಿರುವ ಮಿಲ್ಲರ್, ಸುಂದರ್ ಅವರ ಬಳಿ ಬಂದು ಆಕ್ರೋಶದಿಂದ ಏನನ್ನೋ ಹೇಳಿದಾಗ ಪರಿಸ್ಥಿತಿ ಕೈಮೀರಿತು.

ಸೂರ್ಯ ಮತ್ತು ಅಂಪೈರ್ ಮಧ್ಯಸ್ಥಿಕೆ

ಇಬ್ಬರ ನಡುವಿನ ಶಬ್ದ ಯುದ್ಧ ಹೆಚ್ಚಾಗುತ್ತಿದ್ದಂತೆ, ಮೈದಾನದಲ್ಲಿದ್ದ ಅಂಪೈರ್ ಮತ್ತು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ತಕ್ಷಣವೇ ಮಧ್ಯ ಪ್ರವೇಶಿಸಿದರು. ಮಿಲ್ಲರ್ ಸಾಕಷ್ಟು ಕೋಪಗೊಂಡಿದ್ದು ಕಂಡುಬಂತು, ಆದರೆ ಸುಂದರ್ ಕೂಡ ಕಮ್ಮಿಯಿಲ್ಲ ಎಂಬಂತೆ ತಿರುಗೇಟು ನೀಡುತ್ತಿದ್ದರು. ಕೊನೆಗೆ ನಾಯಕ ಸೂರ್ಯಕುಮಾರ್ ಅವರು ಸುಂದರ್ ಅವರನ್ನು ದೂರ ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಭಾರತಕ್ಕೆ ಭಾರೀ ಸೋಲು

ಮೈದಾನದ ಈ ಸಂಘರ್ಷದ ಹೊರತಾಗಿ, ಪಂದ್ಯದ ಫಲಿತಾಂಶ ಭಾರತದ ಪಾಲಿಗೆ ನಿರಾಸೆ ತಂದಿದೆ. ಡೇವಿಡ್ ಮಿಲ್ಲರ್ ಅವರ ಸ್ಫೋಟಕ 63 ರನ್ ಮತ್ತು ಮಾರ್ಕೊ ಜಾನ್ಸೆನ್ ಅವರ ಮಾರಕ ಬೌಲಿಂಗ್ (4/22) ನೆರವಿನಿಂದ ದಕ್ಷಿಣ ಆಫ್ರಿಕಾ 76 ರನ್‌ಗಳ ಬೃಹತ್ ಜಯ ಸಾಧಿಸಿದೆ. 188 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಿಕೊಂಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net