ಮುಂದಿನ ಗುರಿ ಯಾರು? ಇರಾನ್​ನ ಪ್ರಮುಖ ನಾಯಕರನ್ನು ಹೊಡೆದುರುಳಿಸುತ್ತಿರುವ ಅಮೆರಿಕಾ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 21 ದಿನಗಳನ್ನು ಪೂರೈಸಿದೆ. ಕಳೆದ ಮೂರು ವಾರದಲ್ಲಿ ಅಮೆರಿಕ ಇರಾನ್​ನ ಪ್ರಮುಖ ರಾಜಕೀಯ ನಾಯಕರು ಮತ್ತು ಸೇನಾ ಅಧಿಕಾರಿಗಳನ್ನು ಹತ್ಯೆ ಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ಶುಕ್ರವಾರ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ವಕ್ತಾರ ಅಲಿ ಮೊಹಮ್ಮದ್ ನೈನಿ ಹತರಾಗಿದ್ದಾರೆ. ಆದರೆ, ಈ ಸರಣಿ ಇಲ್ಲಿಗೆ ನಿಲ್ಲುವುದಿಲ್ಲ ಎಂದಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಇನ್ನೂ ಹಲವು ನಾಯಕರಿದ್ದಾರೆ. ಸೈಯದ್ ಮೊಜ್ತಾಬಾ ಖಮೇನಿ, ಸೈಯದ್ ಅಲಿ ಅಸ್ಗರ್ ಹೆಜಾಜಿ, ಜನರಲ್ ಎಸ್ಕಾಂದರ್ ಮೊಮೇನಿ, ಮೇಜರ್ ಜನರಲ್ ಯಾಹ್ಯಾ ರಹೀಮ್ ಸಫಾವಿ ಅವರನ್ನು ಅಮೆರಿಕ ಹುಡುಕುತ್ತಿದ್ದು, ಇವರ ಬಗ್ಗೆ ಮಾಹಿತಿ ನೀಡಿದವರಿಗೆ 83 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಅಮೆರಿಕಕ್ಕೆ ಸವಾಲು ಒಡ್ಡಿರುವ ಈ ನಾಯಕರು ಯಾರು, ಯುದ್ಧದಲ್ಲಿ ಇವರ ಪಾತ್ರವೇನು? ಈ ಕುರಿತಾದ ವಿವರ ಇಲ್ಲಿದೆ.

ಇರಾನ್​ನ ಬಲಶಾಲಿ ನಾಯಕರು ಹಾಗೂ ಇರಾನ್​ನ ಮಿಲಿಟರಿ ಶಕ್ತಿಯನ್ನು ಕೊನೆಗೊಳಿಸದೆ ವಿರಮಿಸುವುದಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಿರ್ಧರಿಸಿವೆ. ಯುದ್ಧ ಆರಂಭವಾದ ಫೆಬ್ರವರಿ 28ರಿಂದಲೇ ಇರಾನ್​ನ ಪ್ರಮುಖ ನಾಯಕರನ್ನು ಈ ಎರಡೂ ರಾಷ್ಟ್ರಗಳು ಗುರಿ ಮಾಡಿವೆ. ಮತ್ತೊಂದೆಡೆ, ‘ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೃತಪಟ್ಟಿದ್ದಾರೆ’ ಎಂದು ಇರಾನ್ ಹೇಳಿಕೊಂಡಿದ್ದರೂ, ಸ್ವತಃ ನೆತನ್ಯಾಹು ವಿಡಿಯೋ ಬಿಡುಗಡೆ ಮಾಡಿ ‘ನಾನು ಜೀವಂತವಾಗಿ ಹಾಗೂ ಸುರಕ್ಷಿತವಾಗಿ ಇದ್ದೇನೆ’ ಎಂದು ತಿಳಿಸಿದ್ದಾರೆ. ಯುದ್ಧ ಮೂರು ವಾರ ಪೂರೈಸುತ್ತಿದ್ದಂತೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ತೀವ್ರಗೊಳಿಸಿದ್ದು, ಇರಾನ್​ನ ಇನ್ನು ಕೆಲವು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿವೆ.

ಸೈಯದ್ ಮೊಜ್ತಬಾ ಖಮೇನಿ

ಇರಾನ್​ನ ನೂತನ ಸವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರನ್ನು ಕೊಲ್ಲಲು ಅಮೆರಿಕ ಶತಾಯಗತಾಯ ಯತ್ನ ನಡೆಸುತ್ತಿದೆ. ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಇರಾನ್​ನ ಸವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಪುತ್ರರಾದ ಸೈಯದ್ ಮೊಜ್ತಬಾ ಖಮೇನಿ ಇರಾನ್ ರಣತಂತ್ರ ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ತಂದೆ ಇದ್ದಾಗ ಬಹಿರಂಗವಾಗಿ ಕಾಣಿಸಿಕೊಳ್ಳದೆ, ತೆರೆಯ ಹಿಂದೆ ಇದ್ದು ಕೆಲಸ ಮಾಡುತ್ತಿದ್ದ ಮೊಜ್ತಬಾ ಅವರ ಬದುಕಿನ ವಿವರಗಳು ಕೂಡ ನಿಗೂಢವೇ. ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್

ಕಾರ್ಪ್ಸ್(ಐಆರ್​ಜಿಸಿ)ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮೊಜ್ತಬಾ, ರಾಜಕೀಯ ಸಂಘಟಕ ಹಾಗೂ ಕಟ್ಟುನಿಟ್ಟಿನ ಆಡಳಿತಗಾರ ಎಂದು ಖ್ಯಾತಿ ಹೊಂದಿದ್ದಾರೆ. ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ, ಸವೋಚ್ಚ ನಾಯಕನ ಪರವಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮೆರಿಕ 2019ರಲ್ಲಿ ಮೊಜ್ತಬಾ ಖಮೇನಿ ಅವರ ಮೇಲೆ ನಿರ್ಬಂಧ ಹೇರಿತ್ತು.

ಸೈಯದ್ ಅಲಿ-ಅಸ್ಗರ್ ಹೆಜಾಜಿ

ಅಯತೊಲ್ಲಾ ಅಲಿ ಖಮೇನಿ ಅವರ ಅತ್ಯಂತ ಆಪ್ತ ಸಹಾಯಕರಲ್ಲಿ ಒಬ್ಬರಾಗಿದ್ದ ಸೈಯದ್ ಅಲಿ-ಅಸ್ಗರ್ ಹೆಜಾಜಿ ಇರಾನ್​ನ ಗುಪ್ತಚರ ದಳದೊಂದಿಗೆ ದೀರ್ಘಕಾಲ ನಿಕಟ ಸಂಪರ್ಕ ಹೊಂದಿದ್ದರು. ಖಮೇನಿ ಸೂಚನೆಗಳನ್ನು ಜಾರಿಗೊಳಿಸುವುದು, ಉನ್ನತ ಮಟ್ಟದ ನೀತಿಗಳನ್ನು ರೂಪಿಸುವುದು, ಗುಪ್ತಚರ ಹಾಗೂ ಭದ್ರತಾ ಜಾಲಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿ ಇವರದ್ದಾಗಿತ್ತು. ಗುಪ್ತಚರ ಸಚಿವಾಲಯದ ವಿದೇಶಾಂಗ ವ್ಯವಹಾರಗಳ ಉಪ ಮುಖ್ಯಸ್ಥರಾಗಿ 1980ರ ದಶಕದ ಆರಂಭದಲ್ಲಿ ಕಾರ್ಯ ನಿರ್ವಹಿಸಿದ್ದರು. ಇರಾನ್ ಸವೋಚ್ಚ ನಾಯಕರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. 2009ರಲ್ಲಿ ನಡೆದ ‘ಗ್ರೀನ್ ಮೂವ್​ವೆುಂಟ್’ ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಗಾಗಿ 2013ರಲ್ಲಿ ಅಮೆರಿಕದ ಹಣಕಾಸು ಇಲಾಖೆ ಹೆಜಾಜಿ ಮೇಲೆ ನಿರ್ಬಂಧ ಹೇರಿತ್ತು. ಐರೋಪ್ಯ ಒಕ್ಕೂಟ ಕೂಡ 2019ರಲ್ಲಿ ಹೆಜಾಜಿ ಮೇಲೆ ನಿರ್ಬಂಧ ಹೇರಿತು. ಇಸ್ರೇಲ್ ಮಾರ್ಚ್ 6ರಂದು ನಡೆಸಿದ ದಾಳಿಯಲ್ಲಿ ಸೈಯದ್ ಅಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆದರೆ, ಇರಾನ್​ನ ಬೇಹುಗಾರಿಕಾ ಶಕ್ತಿಯನ್ನು ದುರ್ಬಲಗೊಳಿಸಲು ಅಲಿ ಅವರನ್ನು ಕೊನೆಗಾಣಿಸಬೇಕು ಎಂದು ಅಮೆರಿಕ ಹವಣಿಸುತ್ತಿದೆ.

ಜನರಲ್ ಎಸ್ಕಾಂದರ್ ಮೊಮೇನಿ

ಇರಾನ್-ಇರಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನರಲ್ ಎಸ್ಕಾಂದರ್ ಮೊಮೇನಿ (64) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನಲ್ಲಿ ಭದ್ರತಾ ಅಧಿಕಾರಿಯಾಗಿದ್ದರು. ಉತ್ತರ ಇರಾನ್​ನಲ್ಲಿ ಎಡಪಂಥೀಯ ಗುಂಪುಗಳ ವಿರುದ್ಧ ನಡೆದ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದರು. ಕಾನೂನು ಜಾರಿ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದ ಮೊಮೇನಿ, 2004-2005ರವರೆಗೆ ‘ಪೊಲೀಸ್ ಎಮರ್ಜೆನ್ಸಿ ಸೆಂಟರ್’ ಮುಖ್ಯಸ್ಥರಾಗಿ, 2005-08ರವರೆಗೆ ರಾಷ್ಟ್ರೀಯ ಪೊಲೀಸ್ ಕಾರ್ಯಾಚರಣೆಯ ಉಪ ಮುಖ್ಯಸ್ಥರಾಗಿ, 2009-2014ರವರೆಗೆ ಸಂಚಾರ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 2026ರ ಆರಂಭದಲ್ಲಿ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ನಡೆದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಮೊಮೇನಿ ಪಾತ್ರ ಮಹತ್ವದ್ದಾಗಿದೆ. ಈ ಪ್ರತಿಭಟನೆಯಲ್ಲಿ 30 ಸಾವಿರಕ್ಕೂ ಅಧಿಕ ಇರಾನಿ ಯನ್ನರು ಹತರಾಗಿದ್ದಾರೆ. ಸೇನಾ ಕಾರ್ಯಾಚರಣೆಯ ಬಲ ಕುಗ್ಗಿಸಲು ಮತ್ತು ತಂತ್ರಗಾರಿಕೆಯನ್ನು ವಿಫಲಗೊಳಿಸಲು ಮೊಮೇನಿ ಹತ್ಯೆ ಅಗತ್ಯ ಎಂದು ನಂಬಿರುವ ಇಸ್ರೇಲ್, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ.

ಮೇಜರ್ ಜನರಲ್ ಯಾಹ್ಯಾ ರಹೀಮ್ ಸಫಾವಿ

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್​ನ ಹಿರಿಯ ಕಮಾಂಡರ್ ಆದ ಯಾಹ್ಯಾ ರಹೀಮ್ ಸಫಾವಿ, ಇರಾನ್-ಇರಾಕ್ ಯುದ್ಧದ ನಂತರ ಇರಾನ್​ನಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು. 1979ರ ಇರಾನ್ ಕ್ರಾಂತಿಗಿಂತ ಮೊದಲು ಸಿರಿಯಾದಲ್ಲಿ ಮಿಲಿಟರಿ ತರಬೇತಿ ಪೂರ್ಣಗೊಳಿಸಿದ ಸಫಾವಿ, ಇರಾನ್ ಸೇನೆಯ ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿದ ಅನುಭವಿ ಹಾಗೂ ದಕ್ಷ ಎಂಬ ಖ್ಯಾತಿ ಗಳಿಸಿದ್ದಾರೆ. 1985-89ರವರೆಗೆ ರೆವಲ್ಯೂಷನರಿ ಗಾರ್ಡ್​ನ ಭೂಸೇನೆಯ ಕಮಾಂಡರ್ ಆಗಿ, 1989ರಿಂದ 1997ರವರೆಗೆ ಉಪ ಮುಖ್ಯಸ್ಥರಾಗಿ ಮತ್ತು 1997ರಿಂದ 2007ರವರೆಗೆ ರೆವಲ್ಯೂಷನರಿ ಗಾರ್ಡ್​ನ ಸವೋಚ್ಚ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಇರಾನ್​ನ ಪರಮಾಣು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಫಾವಿ ಅವರನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಿತು. ಪ್ರಸ್ತುತ, ಇರಾನ್ ಸವೋಚ್ಚ ನಾಯಕರ ಹಿರಿಯ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾಹ್ಯಾ ರಹೀಮ್ ಸಫಾವಿ ಕೊನೆಗೊಳಿಸಲು ಅಮೆರಿಕ-ಇಸ್ರೇಲ್ ಜಂಟಿಯಾಗಿ ಪ್ರಯತ್ನ ನಡೆಸಿವೆ.

ಈವರೆಗೆ ಹತರಾದ ಇರಾನ್​ನ ಪ್ರಮುಖರು

  • ಅಯತೊಲ್ಲಾ ಅಲಿ ಖಮೇನಿ: ಇರಾನ್​ನ ಸವೋಚ್ಚ ನಾಯಕ. ಖಮೇನಿಯ ಪುತ್ರಿ, ಸೊಸೆ, ಅಳಿಯ, ಮೊಮ್ಮಗು.
  • ಸೈಯದ್ ಅಬ್ದುಲ್ ರಹೀಮ್ ಮೂಸವಿ: ಇರಾನ್ ಸೇನೆಯ ಚೀಫ್ ಆಫ್ ಸ್ಟಾಫ್.
  • ಅಲಿ ಶಾಮ್ಖಾನಿ: ಇರಾನ್​ನ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಮತ್ತು ಖಮೇನಿಯ ಆಪ್ತ ಸಲಹೆಗಾರ.
  • ಮೊಹಮ್ಮದ್ ಪಕ್ಪೋರ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್​ಜಿಸಿ) ಭೂಸೇನೆಯ ಕಮಾಂಡರ್.
  • ಅಜೀಜ್ ನಾಸಿರ್ಜಾದೆ (ಅಮೀರ್): ಇರಾನ್​ನ ರಕ್ಷಣಾ ಸಚಿವ.
  • ಸಲೇಹ್ ಅಸಾದಿ: ಇರಾನ್ ತುರ್ತು ಕಮಾಂಡ್​ನ ಗುಪ್ತಚರ ವಿಭಾಗದ ಮುಖ್ಯಸ್ಥ.
  • ಮೊಹಮ್ಮದ್ ಶಿರಜಿ: ಖಮೇನಿಯ ಮಿಲಿಟರಿ ಕಚೇರಿ ಮುಖ್ಯಸ್ಥ.
  • ಹೊಸೈನ್ ಜಬ್ಬಾರ್ ಅಮೇಲಿಯನ್: ರಕ್ಷಣಾ ಸಂಶೋಧನೆ ಮತ್ತು ನಾವೀನ್ಯತಾ ಸಂಸ್ಥೆ (ಎಸ್​ಪಿಎನ್​ಡಿ) ಮುಖ್ಯಸ್ಥ.
  • ರೆಜಾ ಮೊಜಾಫರ್​ನಿಯಾ: ಎಸ್​ಪಿಎನ್​ಡಿ ಮಾಜಿ ಮುಖ್ಯಸ್ಥ.
  • ಅಲಿ ಲಾರಿಜಾನಿ: ಇರಾನ್​ನ ಅನುಭವಿ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾಗಿದ್ದರು. 1980ರ ದಶಕದ ಅರಂಭದಲ್ಲಿ ರೆವಲ್ಯೂಷನರಿ ಗಾರ್ಡ್ಸ್​ನ ಪ್ರಮುಖ ಹುದ್ದೆ ಅಲಂಕರಿಸಿದ್ದರು.
  • ಸೈಯದ್ ಇದ್ಮಾಯಿಲ್ ಖತೀಬ್: 2021ರಿಂದ ಇರಾನ್ ಗುಪ್ತಚರ ಇಲಾಖೆಯ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಇರಾನ್​ನ ಗುಪ್ತಚರ ಹಾಗೂ ಭದ್ರತಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. ರೆವಲ್ಯೂಷನರಿ ಗಾರ್ಡ್ ಕೋರ್​ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ 2020ರಲ್ಲಿ ಅಮೆರಿಕ ಹಣಕಾಸು ಇಲಾಖೆಯಿಂದ ನಿರ್ಬಂಧಕ್ಕೆ ಒಳಗಾಗಿದ್ದರು.
  • ಅಲಿ ಮೊಹಮ್ಮದ್ ನೈನಿ: ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್​ಜಿಸಿ) ವಕ್ತಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net