ರೆಜಾ ಪಹ್ಲವಿ ತಂದೆ ಮೊಹಮ್ಮದ್ ರೆಜಾ ಪಹ್ಲವಿ ತನ್ನ ತಂದೆಯ ಆಡಳಿತದಂತೆಯೇ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಆಧುನೀಕರಣಕ್ಕಾಗಿ ಕೆಲವು ಸುಧಾರಣೆಗಳನ್ನು ಪ್ರಾರಂಭಿಸಿದರು. ಆದರೆ, ಸರ್ವಾಧಿಕಾರಿ ಪ್ರವೃತ್ತಿಯನ್ನು ಸಹ ಹೊಂದಿದ್ದರು. ಈ ಅವಧಿಯಲ್ಲಿ ಎಲ್ಲರನ್ನು ಕಾಡುತ್ತಿದ್ದ ಪ್ರಮುಖ ಭಯವೆಂದರೆ, ರಾಜ್ಯದ ರಹಸ್ಯ ಪೊಲೀಸ್ SAVAK ಪಡೆ, ಭಿನ್ನಮತೀಯರನ್ನು ಬಂಧಿಸಿ ಚಿತ್ರಹಿಂಸೆ ನೀಡುವುದಕ್ಕೆ ಹೆಸರುವಾಸಿಯಾಗಿತ್ತು. ಶಾಹ್ ರಾಜವಂಶದ ಕಾಲು ಶತಮಾನದ ಅಧಿಕಾರದಲ್ಲಿ ಯಾವುದೇ ಸ್ವತಂತ್ರ ಸಂಸ್ಥೆಗಳನ್ನು ಉದಾಹರಣೆಗೆ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಗುಂಪುಗಳು, ಕಾರ್ಮಿಕ ಸಂಘಗಳು ಅಥವಾ ನಾಗರಿಕ ಸಂಘಟನೆಗಳು ಬೆಳೆಯಲು ಬಿಡಲಿಲ್ಲ. ಈ ಅವಧಿಯಲ್ಲಿ ಭಿನ್ನಮತೀಯರು ಆಶ್ರಯ ಪಡೆಯಲು ಇದ್ದ ಏಕೈಕ ಸ್ಥಳವೆಂದರೆ ಮಸೀದಿಗಳು. ಶಾಹ್ ಆಡಳಿತದ ವಿರುದ್ಧ ಅಭಿವೃದ್ಧಿ ಹೊಂದುತ್ತಿದ್ದ ಚಳುವಳಿಗೆ ಧಾರ್ಮಿಕ ಛಾಯೆ ಕೂಡ ಆವರಿಸಿತು. ಈ ಬೆಳವಣಿಗೆ ಇರಾನ್ ಅನ್ನು ಮೂಲಭೂತವಾದಿ ಆಡಳಿತದತ್ತ ತಳ್ಳಿತು. ಆದಾಗ್ಯೂ, 1970ರ ದಶಕದ ಹೊತ್ತಿಗೆ, ಶಾಹ್ ಅವರ ಮೇಲಿನ ಅಸಮಾಧಾನವು ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಯಿತು, ಇದರಲ್ಲಿ ಕಮ್ಯುನಿಸ್ಟರಿಂದ ಹಿಡಿದು ಇಸ್ಲಾಮಿಸ್ಟ್‌ಗಳವರೆಗೆ ಭಾಗವಹಿಸಿದ್ದರು. ಆಡಳಿತದ ದಮನಗಳ ಹೊರತಾಗಿಯೂ, ಮುಂದುವರಿದ ಆಂದೋಲನವು 1979 ರಲ್ಲಿ ಶಾಹ್ ಮತ್ತು ಅವರ ಕುಟುಂಬವನ್ನು ಇರಾನ್‌ನಿಂದ ಪಲಾಯನ ಮಾಡಲು ಕಾರಣವಾಯಿತು. ಏಪ್ರಿಲ್‌ನಲ್ಲಿ, ಶೇ. 98% ಮತಗಳೊಂದಿಗೆ ನಡೆದ ಜನಾಭಿಪ್ರಾಯ ಸಂಗ್ರಹಣೆಯು ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ನೇತೃತ್ವದ ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು.