ಮಡುರೊ ಹುಡುಕಿಕೊಟ್ರೆ 437 ಕೋಟಿ ರೂ.! ಅಂದು ಟ್ರಂಪ್​ ಹೀಗೆ ಘೋಷಿಸಿದ್ದೇಕೆ? ಅಷ್ಟಕ್ಕೂ ಈತ ಮಾಡಿರುವ ತಪ್ಪೇನು?

ಡೊನಾಲ್ಡ್ ಟ್ರಂಪ್​, ನಿಕೋಲಸ್ ಮಡುರೊ
ಡೊನಾಲ್ಡ್ ಟ್ರಂಪ್​, ನಿಕೋಲಸ್ ಮಡುರೊ
Published on

ಪ್ರಮುಖ ಮುಖ್ಯಾಂಶಗಳು

  • ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊನನ್ನು ಕಡೆಗೂ ಬಂಧಿಸಿದ ಅಮೆರಿಕ
  • ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ರನ್ನು ಬಂಧಿಸಿ, ಯುಎಸ್​ಗೆ ಕರೆತಂದಿದ್ದಾಗಿ ಮಾಹಿತಿ
  • ಅಷ್ಟಕ್ಕೂ, ಯಾರು ಈತ? ಮಾಡಿದ್ದಾದರೂ ಏನು?
  • ಇಲ್ಲಿದೆ ನೋಡಿ ಮಡುರೋ ಕುರಿತಾದ ಸಂಪೂರ್ಣ ಮಾಹಿತಿ
Nicolas Maduro: ಇಂದು (ಜ.03) ಕ್ಯಾರಕಾಸ್‌ನಲ್ಲಿ ತಮ್ಮ ಮಿಲಿಟರಿ ಪಡೆಯಿಂದ ದಾಳಿ ನಡೆಸಿದ ಅಮೆರಿಕ, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ರನ್ನು ಬಂಧಿಸಿ, ಯುಎಸ್​ಗೆ​ ಕರೆತಂದಿದ್ದಾಗಿ ಹೇಳಿಕೊಂಡಿದೆ. ಇತರೆ ದೇಶಗಳು ಮಡುರೊನನ್ನು ಒಬ್ಬ ಅಧ್ಯಕ್ಷನಾಗಿ ಕಂಡರೆ, ಅಮೆರಿಕ ಮಾತ್ರ ಆತನನ್ನು ಓರ್ವ ಕ್ರಿಮಿನಲ್​ ಆಗಿ ಪರಿಗಣಿಸಿದೆ. ಅಷ್ಟಕ್ಕೂ, ಆತ ಮಾಡಿದ್ದಾದರೂ ಏನು? ಯಾಕಾಗಿ ಅಂದು ಟ್ರಂಪ್​ 437 ಕೋಟಿ ರೂ. ಕೊಡುವುದಾಗಿ ಘೋಷಿಸಿದರು ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಶ್ವೇತಭವನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 2025ರ ಆಗಸ್ಟ್​ 09ರಂದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸುಳಿವು ನೀಡಿದವರಿಗೆ 437 ಕೋಟಿ ರೂ. ನೀಡುವುದಾಗಿ ಅಮೆರಿಕ ಸರ್ಕಾರ ಬಂಪರ್ ಆಫರ್ ಘೋಷಿಸಿತು. ಈ ನಿರ್ಧಾರ ಸಂಪೂರ್ಣವಾಗಿ ಟ್ರಂಪ್​ದೇ ಆಗಿತ್ತು. ಕಾರಣ, ಹಿಂದೆ ತನ್ನ ಸರ್ಕಾರವಿದ್ದ ಸಮಯದಲ್ಲಿಯೂ ಟ್ರಂಪ್​ ಇದೇ ರೀತಿ ಆಫರ್​ ಘೋಷಿಸಿದ್ದರು.

50 ಮಿಲಿಯನ್ ಡಾಲರ್

ಈತನ ಬಂಧನಕ್ಕೆ ಮಾಹಿತಿ ನೀಡುವ ಮತ್ತು ಸಹಾಯ ಮಾಡುವವರಿಗೆ 50 ಮಿಲಿಯನ್ ಡಾಲರ್ (437 ಕೋಟಿ ರೂ.) ಕೊಡಲಾಗುವುದು ಎಂದು ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದರು. ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್, ನಿಕೋಲಸ್ ಮಡುರೊ ಪತ್ತೆಗಾಗಿ 15 ಮಿಲಿಯನ್ ಡಾಲರ್​ ಬಹುಮಾನ ಘೋಷಿಸಿದ್ದರು. ಆ ನಂತರದಲ್ಲಿ ಜೋ ಬೈಡನ್ ಸರ್ಕಾರ ಅದನ್ನು 25 ಮಿಲಿಯನ್‌ ಡಾಲರ್​ಗೆ ಹೆಚ್ಚಿಸಿತು. ತದನಂತರ ಮತ್ತೆ ಟ್ರಂಪ್ ಆಡಳಿತವು ಆ ಬಹುಮಾನವನ್ನು ಡಬಲ್ ಮಾಡಿತು. ಬರೋಬ್ಬರಿ 50 ಮಿಲಿಯನ್​ ಡಾಲರ್​ಗೆ ಹೆಚ್ಚಿಸುವ ಮೂಲಕ ಹುಡುಕಿಕೊಡಿ ಎಂದು ತಿಳಿಸಿತು. ಆದರೆ, ಆ ಸಮಯಕ್ಕೂ ಮಡುರೊ ಸುಳಿವು ಸಿಗಲಿಲ್ಲ.

ಅತಿದೊಡ್ಡ ಮಾದಕವಸ್ತು...

ಅಮೆರಿಕ ಅಟಾರ್ನಿ ಜನರಲ್ ಪಂಬೊಂಡಿ ಹೇಳಿಕೆ ಪ್ರಕಾರ, "ನಿಕೋಲಸ್ ಮಡುರೊ ಎಂಬ ವ್ಯಕ್ತಿ ಟ್ರೆನ್ ಡಿ ಅರಾಗುವಾ, ಸಿನಾಲೋವಾ ಮತ್ತು ಕಾರ್ಟೆಲ್ ಆಫ್ ದಿ ಸನ್ಸ್ (ಕಾರ್ಟೆಲ್ ಡಿ ಸೊಲೈಲ್) ನಂತಹ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಘೋರ ಹಿಂಸಾಚಾರವನ್ನು ನಡೆಸುತ್ತಿದ್ದ. ಆತ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಒಬ್ಬ. ಅಮೆರಿಕಕ್ಕೆ ಫೆಂಟನಿಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ಬೆರೆಸಿದ ಕೊಕೇನ್ ಅನ್ನು ಪೂರೈಸುವ ಮೂಲಕ ಡ್ರಗ್​ ಜಾಲಗಳಲ್ಲಿ ತೊಡಗಿದ್ದಾನೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಮಡುರೊ ಯಾವುದೇ ಸಂದರ್ಭದಲ್ಲೂ ಟ್ರಂಪ್ ಆಡಳಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಡುರೊ ಅಪರಾಧಗಳಿಗೆ ಶಿಕ್ಷೆಯಾಗಬೇಕು" ಎಂದು ಪಂಬೊಂಡಿ ಒತ್ತಿ ಹೇಳಿದ್ದರು. ಅಂತೆಯೇ, ಕಡೆಗೂ ಯುಎಸ್​ ಹೇಳಿರುವಂತೆ ಮಡುರೊ ಸಿಕ್ಕಿಬಿದ್ದಿದ್ದಾರೆ.

ಸಂಘರ್ಷ ಹೊಸದೇನಲ್ಲ...

ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಘರ್ಷ ಹೊಸದೇನಲ್ಲ. 2020ರಿಂದ, ಮಡುರೊ ಮೇಲೆ ಮಾದಕ ದ್ರವ್ಯ, ಭಯೋತ್ಪಾದನೆ ಮತ್ತು ಕೊಕೇನ್ ಕಳ್ಳಸಾಗಣೆ ಆರೋಪಗಳ ಸರಮಾಲೆಯೇ ಇದೆ. ಅವರ ಮೇಲೆ ಯುನೈಟೆಡ್ ಸ್ಟೇಟ್ಸ್ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಇದು ರಾಜತಾಂತ್ರಿಕ ಒತ್ತಡವನ್ನೂ ತಂದಿತು. ಆದಾಗ್ಯೂ, 2024ರಲ್ಲಿ, ಮಡುರೊರನ್ನು ವೆನೆಜುವೆಲಾದ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇದನ್ನು ಖಂಡಿಸಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ಚುನಾವಣೆಯನ್ನು ಅಕ್ರಮ ಎಂದು ಬಣ್ಣಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net