ಅಬುಧಾಬಿ ರಾಜಮನೆತನದ ತಾಯಿ ಡ್ರಗ್ಸ್ ನಶೆಯಲ್ಲಿ, ಮಗು ಲಂಡನ್ ರಸ್ತೆಯಲ್ಲಿ; ಮಹಿಳೆಯ ನಿರ್ಲಕ್ಷ್ಯಕ್ಕೆ ಶಿಕ್ಷೆ ಕೊಟ್ಟ ಕೋರ್ಟ್..Emirati Royal

ಅಬುಧಾಬಿ ರಾಜಮನೆತನದ ತಾಯಿ ಡ್ರಗ್ಸ್ ನಶೆಯಲ್ಲಿ, ಮಗು ಲಂಡನ್ ರಸ್ತೆಯಲ್ಲಿ; ಮಹಿಳೆಯ ನಿರ್ಲಕ್ಷ್ಯಕ್ಕೆ ಶಿಕ್ಷೆ ಕೊಟ್ಟ ಕೋರ್ಟ್..Emirati Royal
Published on: 
  • ಲಂಡನ್ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಅಬುಧಾಬಿ ರಾಜಮನೆತನದ ಮಹಿಳೆ ಮಹ್ರಾ ಅಲ್ ನಹ್ಯಾನ್.

  • ಟ್ರಾಫಿಕ್​ನಲ್ಲಿ ಆಟವಾಡುತ್ತಿದ್ದ ಮಗುವನ್ನು ರಕ್ಷಿಸಿ, ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು.

  • ಸೌತ್‌ವರ್ಕ್ ಕ್ರೌನ್ ಕೋರ್ಟ್‌ನಲ್ಲಿ ಮಗುವಿನ ನಿರ್ಲಕ್ಷ್ಯ ಆರೋಪ ಒಪ್ಪಿಕೊಂಡ ಮಹಿಳೆ.

UAE Royal Passes Out On London Street After Cocaine Binge: ಯುಎಇ ರಾಜಮನೆತನಕ್ಕೆ ವಿವಾಹವಾಗಿರುವ 32 ವರ್ಷದ ಮಹ್ರಾ ಅಲ್ ನಹ್ಯಾನ್ ಕೋಕೆನ್ ಸೇವಿಸಿ ನಶೆಯಲ್ಲಿ ಪಶ್ಚಿಮ ಲಂಡನ್‌ನ ರಸ್ತೆಯೊಂದರಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಘಟನೆ ಬೆಳಕಿಗೆ ಬಂದಿದೆ. ಆಕೆ ಮಗುವಿನ ಬಗ್ಗೆ ನಿರ್ಲಕ್ಷ್ಯವಹಿಸಿರುವ ಬಗ್ಗೆ ಸೌತ್‌ವರ್ಕ್ ಕ್ರೌನ್ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಸೌತ್‌ವರ್ಕ್ ಕ್ರೌನ್ ಕೋರ್ಟ್ ಶಿಕ್ಷೆ ವಿಧಿಸಿದೆ.

ಮಹ್ರಾ ಅಲ್ ನಹ್ಯಾನ್ ಯುಎಇಯ (ಅಬುಧಾಬಿ) ರಾಜಮನೆತನಕ್ಕೆ ವಿವಾಹದ ಮೂಲಕ ಸೇರಿರುವ 32 ವರ್ಷದ ಎಮಿರಾಟಿ ರಾಯಲ್ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮಗು ನಿರ್ಲಕ್ಷ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದರು.

ಅಮ್ಮ ನಶೆಯಲ್ಲಿ ಮಗು ರಸ್ತೆಯಲ್ಲಿ

ಜೂನ್ 13ರಂದು ಮಹ್ರಾ ಅಲ್ ನಹ್ಯಾನ್ (32) ಕೊಕೇನ್​ ಸೇವಿಸಿ, ಆಕೆಗೆ ಸೇರಿದ ಆಸ್ತಿಯೊಂದರ ಹೊರಗಿನ ರೇಲಿಂಗ್‌ಗಳಿಗೆ ತಲೆ ಒರಗಿಸಿ ಪಾದಚಾರಿ ಮಾರ್ಗದಲ್ಲಿ ಕುಳಿತಿರುವುದು ಕಂಡುಬಂದಿದೆ. ಅವರ ಬಳಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯೂ ಪ್ರಜ್ಞೆತಪ್ಪಿ ಬಿದ್ದಿದ್ದನು. ಅವರ ಮೂರು ವರ್ಷದ ಮಗು ಬಿಜಿ ರಸ್ತೆಯಲ್ಲಿ ಒಂಟಿಯಾಗಿ ಕಾಲಿಗೆ ಚಪ್ಪಲಿ ಇಲ್ಲದೆ ತಿರುಗಾಡುತ್ತಿತ್ತು. ಇದನ್ನು ಕಂಡ ಸಾರ್ವಜನಿಕರು ಮಗುವನ್ನು ಪೊಲೀಸರಿಗೆ ಒಪ್ಪಿಸಿದರು.

ಕೋರ್ಟ್​ನಲ್ಲಿ ವಿಚಾರಣೆ

ಸುಮಾರು ಅರ್ಧ ಗಂಟೆಗಳ ಕಾಲ ಅಲ್ ನಹ್ಯಾನ್ ಪ್ರಜ್ಞೆಹೀನರಾಗಿದ್ದರು. ಎಚ್ಚೆತ್ತ ಬಳಿಕ ಅವರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು. ಆಕೆಯ ಬ್ಯಾಗ್​ನಲ್ಲಿ ಡ್ರಗ್ಸ್​ ಸೇವಿಸುವ ಪರಿಕರಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ವಿಚಾರಣೆ ವೇಳೆ ಮಾತನಾಡಿದ ಪ್ರಾಸಿಕ್ಯೂಟರ್ ರಿಯೊ ಪಹ್ಲಾವನ್‌ಪೋರ್, ಮಗು ವಾಹನ ದಟ್ಟಣೆಯ ಹತ್ತಿರ ಬರಿಗಾಲಿನಲ್ಲಿ ಅಸುರಕ್ಷಿತವಾಗಿ ಇದ್ದುದರಿಂದ ಸಾರ್ವಜನಿಕರು ಮಧ್ಯಪ್ರವೇಶಿಸಬೇಕಾಯಿತು. ಆಕೆ ಆದಿನ ಡ್ರಗ್ಸ್ ಸೇವಿಸಿರಲಿಲ್ಲ; ಬದಲಿಗೆ ಹಿಂದಿನ ದಿನಗಳಲ್ಲಿ ಸೇವಿಸಿದ್ದರಿಂದ ಉಂಟಾದ ಅತಿಯಾದ ಸುಸ್ತಿನಿಂದ ಆ ಸ್ಥಿತಿ ತಲುಪಿದ್ದರು ಎಂದು ಸಮರ್ಥಿಸಿಕೊಂಡರು. ಆಕೆಗೆ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪವಿದ್ದು, ಚಟದಿಂದ ಹೊರಬರಲು ದೃಢಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ನ್ಯಾಯಾಧೀಶರಿಂದ ಛೀಮಾರಿ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜೇರೆಮಿ ಜಾನ್ಸನ್ ಕೆ.ಸಿ., "ಮಗುವನ್ನು ಡ್ರಗ್ಸ್ ನಶೆಯಲ್ಲಿ ರಸ್ತೆಯಲ್ಲಿ ಬರಿಗಾಲಿನಲ್ಲಿ ಆಡಲು ಬಿಡುವ ಮೂಲಕ ನೀವು ಮಗುವಿನ ಸುರಕ್ಷತೆಯ ಬಗ್ಗೆ ಅತ್ಯಂತ ಬೇಜವಾಬ್ದಾರಿ ತೋರಿದ್ದೀರಿ. ಮಗು ಗಂಭೀರವಾಗಿ ಗಾಯಗೊಳ್ಳಬಹುದಿತ್ತು, ಕಳೆದುಹೋಗಬಹುದಿತ್ತು ಅಥವಾ ಅಪರಿಚಿತರಿಂದ ಹಾನಿಗೊಳಗಾಗಬಹುದಿತ್ತು ಅಸಮಾಧಾನ ವ್ಯಕ್ತಪಡಿಸಿದರು,.

ಕೋರ್ಟ್​ನಲ್ಲಿ ತಪ್ಪೊಪ್ಪಿಕೊಂಡ ಮಹಿಳೆ

ಈ ಘಟನೆ ಕುರಿತು ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿತು. ರಾಜಮನೆತನಕ್ಕೆ ಸೇರಿದ ಮಹ್ರಾ ಅಲ್ ನಹ್ಯಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯವು ಇವರಿಗೆ ಎರಡು ವರ್ಷಗಳ ಕಾಲ ರಿಹೆಬಿಲೇಟಶನ್​​ ಸೆಂಟರ್​​ನಲ್ಲಿ ಇರುವಂತೆ ಮತ್ತು ಒಟ್ಟು 6,114 ಪೌಂಡ್ಸ್ ಭಾರತೀಯ ರೂಪಾಯಿಗಳಲ್ಲಿ 7 ಲಕ್ಷಕ್ಕೂ ಅಧಿಕ ರೂಪಾಯಿ ದಂಡ ವಿಧಿಸಿದೆ.

ಮಹ್ರಾ ಅಲ್ ನಹ್ಯಾನ್ ಯಾರು?

32 ವರ್ಷದ ಮಹ್ರಾ ಅಲ್ ನಹ್ಯಾನ್ ಅವರು ವಿವಾಹದ ಮೂಲಕ ಅಬುಧಾಬಿಯ ಆಡಳಿತಾರೂಢ ಅಲ್ ನಹ್ಯಾನ್ ಕುಟುಂಬಕ್ಕೆ ಸಂಬಂಧಿಸಿದವರಾಗಿದ್ದಾರೆ. ಯುನೈಟೆಡ್ ಅಬ್ ಇಮಿರೇಟ್ಸ್ ದೇಶದ ರಾಜಧಾನಿಯಾಗಿರುವ ಅಬುಧಾಬಿಯನ್ನು ಈ ಕುಟುಂಬವು ಆಳುತ್ತಿದ್ದು, ಇದರ ಆಡಳಿತಗಾರರಾದ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಯುಎಇ ಅಧ್ಯಕ್ಷರಾಗಿದ್ದಾರೆ. ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ರಾಜಮನೆತನಕ್ಕೆ ಸೇರಿರುವ ಈಕೆಗೆ ನ್ಯಾಯಾಲಯದ ವಿಚಾರಣೆಯ ಪ್ರಕಾರ ತಿಂಗಳಿಗೆ ಸುಮಾರು 8,000 ಪೌಂಡ್‌ಗಳ ಭತ್ಯೆ ಸಿಗುತ್ತದೆ. ಆದರೆ ನ್ಯಾಯಾಲಯದ ವಿಚಾರಣೆಯು ಆಕೆಯ ರಾಜಮನೆತನದ ಹಿನ್ನೆಲೆಗಿಂತ ಹೆಚ್ಚಾಗಿ ಮಗುವಿನ ಸುರಕ್ಷತೆಯ ನಿರ್ಲಕ್ಷ್ಯದ ಮೇಲೆಯೇ ಕೇಂದ್ರೀಕೃತವಾಗಿತ್ತು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net