ಯಾರ್ರೀ ನೀವು? ಮೊದಲು ಐಡಿ ಕಾರ್ಡ್ ತೋರಿಸಿ! ಮ್ಯೂನಿಚ್‌ನಲ್ಲಿ ಪಾಕ್ ಸೇನಾ ಮುಖ್ಯಸ್ಥನಿಗೆ ಭಾರಿ ಮುಖಭಂಗ | Asim Munir

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್
Published on

ಪ್ರಮುಖ ಮುಖ್ಯಾಂಶಗಳು

  • ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪಾಕ್​ ಸೇನಾ ಮುಖ್ಯಸ್ಥ
  • ಐಡಿ ಕಾರ್ಡ್​ ತೋರಿಸಿ ಒಳಹೋಗಿ ಎಂದ ಭದ್ರತಾ ಸಿಬ್ಬಂದಿ
  • ಜಾಗತಿಕ ವೇದಿಕೆಗಳಲ್ಲಿ ಆಸಿಮ್​ ಮುನೀರ್​ನನ್ನು ಯಾರು ಗುರುತಿಸುವುದಿಲ್ಲ ಎಂದ ನೆಟ್ಟಿಗರು
ಜರ್ಮನಿ: ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ​ಗೆ ಭಾರಿ ಮುಖಭಂಗವಾಗಿದೆ.
ಪಾಕಿಸ್ತಾನದೊಳಗೆ ಸರ್ವಾಧಿಕಾರಿಯಂತೆ ಮೆರೆಯುವ ಸೇನಾ ಮುಖ್ಯಸ್ಥರನ್ನು ಜರ್ಮನಿಯ ಭದ್ರತಾ ಸಿಬ್ಬಂದಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ತಡೆದು ನಿಲ್ಲಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ನಡೆದಿದ್ದೇನು?

ಜಾಗತಿಕ ಮಟ್ಟದ ಗಣ್ಯರು ಭಾಗವಹಿಸುವ ಮ್ಯೂನಿಚ್ ಭದ್ರತಾ ಸಮ್ಮೇಳನಕ್ಕೆ (MSC) ಅಸಿಮ್ ಮುನೀರ್ ಅವರಿಗೆ ಆಹ್ವಾನವಿತ್ತು. ಮುನೀರ್ ಅವರು ಮೈತುಂಬಾ ಪದಕಗಳನ್ನು ಧರಿಸಿದ ಮಿಲಿಟರಿ ಸಮವಸ್ತ್ರದಲ್ಲಿ ಗತ್ತಿನಿಂದ ಸಮ್ಮೇಳನದ ಆವರಣ ಪ್ರವೇಶಿಸಲು ಮುಂದಾದರು.
ಆದರೆ ಅಲ್ಲಿನ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ನಿಲ್ಲಿ, ನಿಮ್ಮ ಐಡಿ ಕಾರ್ಡ್ ಎಲ್ಲಿದೆ? ಮೊದಲು ಕಾರ್ಡ್ ತೋರಿಸಿ ಎಂದು ಖಡಕ್ ಆಗಿ ಸೂಚಿಸಿದ್ದಾರೆ. ಪಾಕಿಸ್ತಾನದಲ್ಲಿ ಯಾರೂ ಪ್ರಶ್ನಿಸಲಾಗದ ಶಕ್ತಿಯಾಗಿರುವ ಮುನೀರ್, ಜರ್ಮನಿಯಲ್ಲಿ ಮಾತ್ರ ಒಬ್ಬ ಸಾಮಾನ್ಯ ಬೆಂಗಾವಲುದಾರನಂತೆ ಪರಿಗಣಿಸಲ್ಪಟ್ಟಿರುವುದು ಪಾಕಿಸ್ತಾನಕ್ಕೆ ದೊಡ್ಡ ಮುಜುಗರ ತಂದಿದೆ.

ಜಾಗತಿಕ ವೇದಿಕೆಯಲ್ಲಿ ಗುರುತೇ ಇಲ್ಲ!

ಈ ಘಟನೆಯ ಬಗ್ಗೆ ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿ ಆದಿಲ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದು, ಜಾಗತಿಕ ವೇದಿಕೆಯಲ್ಲಿ ನಮ್ಮ ಸೇನಾ ಮುಖ್ಯಸ್ಥರನ್ನು ಯಾರೂ ಗುರುತಿಸುತ್ತಿಲ್ಲ. ಕೇಳಿದ ತಕ್ಷಣ ಗೇಟ್‌ಕೀಪರ್‌ಗಳಿಗೂ ಐಡಿ ತೋರಿಸುವ ಸ್ಥಿತಿ ಇವರಿಗೆ ಬಂದಿದೆ ಎಂದು ಲೇವಡಿ ಮಾಡಿದ್ದಾರೆ. ಅಸಿಮ್ ಮುನೀರ್ ಅವರ ಅಂತರರಾಷ್ಟ್ರೀಯ ಪ್ರಭಾವ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ವಿಮರ್ಶಕರು ವ್ಯಂಗ್ಯಭರಿತವಾಗಿ ಹೇಳುತ್ತಿದ್ದಾರೆ.

ಒಂದೆಡೆ ಅವಮಾನ, ಇನ್ನೊಂದೆಡೆ ಪ್ರತಿಭಟನೆ

ಅಸಿಮ್ ಮುನೀರ್ ಅವರಿಗೆ ಸಮ್ಮೇಳನದ ಒಳಗೆ ಶಿಷ್ಟಾಚಾರದ (Protocol) ಉಲ್ಲಂಘನೆಯಾಗಿದ್ದರೆ, ಹೊರಗೆ ಭಾರಿ ಪ್ರತಿಭಟನೆಗಳು ಎದುರಾಗಿವೆ. ಪಾಕಿಸ್ತಾನ ಸೇನೆಯು ಸಿಂಧ್, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಕಾನೂನುಬಾಹಿರ ಹತ್ಯೆಗಳು ಮತ್ತು ಬಲವಂತದ ಕಣ್ಮರೆಗಳನ್ನು ಖಂಡಿಸಿ ಜರ್ಮನಿಯ ರಾಜಕೀಯ ಗುಂಪುಗಳು ಮತ್ತು ಜೀ ಸಿಂಧ್ ಮುತ್ತಹಿದಾ ಮಹಾಜ್ (JSMM) ಸಂಘಟನೆ ಪ್ರತಿಭಟನೆ ನಡೆಸಿವೆ.
ವಿಶ್ವಸಂಸ್ಥೆ ಮತ್ತು ಜರ್ಮನ್ ಸರ್ಕಾರಕ್ಕೆ ಪತ್ರ ಬರೆದಿರುವ ಈ ಸಂಘಟನೆಗಳು, ಮಾನವ ಹಕ್ಕುಗಳನ್ನು ಗಾಳಿಗೆ ತೂರಿ, ದೇಶದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಇಂತಹ ವ್ಯಕ್ತಿಯನ್ನು ಜಾಗತಿಕ ಭದ್ರತಾ ಸಮ್ಮೇಳನಕ್ಕೆ ಕರೆಸಿರುವುದು ವಿಷಾದನೀಯ ಎಂದು ಕಿಡಿಕಾರಿವೆ. ಒಟ್ಟಿನಲ್ಲಿ, ದೇಶದೊಳಗೆ ತಾನೇ ರಾಜ ಎಂದು ಮೆರೆಯುವ ಅಸಿಮ್ ಮುನೀರ್​ಗೆ ಮ್ಯೂನಿಚ್ ಪ್ರವಾಸ ಮಾತ್ರ ಕಹಿ ನೆನಪಾಗಿ ಉಳಿಯುವುದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net