ಸಮರದ ಅಂತ್ಯ ಯಾವಾಗ..?

ಸಮರದ ಅಂತ್ಯ ಯಾವಾಗ..?
ಸಮರದ ಅಂತ್ಯ ಯಾವಾಗ..?
Published on
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಜಗತ್ತನ್ನೇ ಬೆಚ್ಚಿಬೀಳಿಸಿದ್ದು, ಈ ಸಮರ ಈಗಾಗಲೇ 12 ದಿನಗಳನ್ನು ಪೂರೈಸಿದೆ. ಈ ಸಮರ ಯಾವಾಗ ಕೊನೆಗೊಳ್ಳಲಿದೆ ಎಂಬುದರ ಬಗ್ಗೆ ಜಾಗತಿಕ ತಜ್ಞರು ತಮ್ಮದೇ ಆದ ವಿಶ್ಲೇಷಣೆಗಳನ್ನು ನೀಡುತ್ತಿದ್ದಾರೆ. ಈ ನಡುವೆ, ಯುದ್ಧ ಶೀಘ್ರ ಕೊನೆಗೊಳಿಸುವ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಆದರೆ, ‘ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ’ ಎಂದು ಇರಾನ್ ಕಟುವಾಗಿ ಪ್ರತಿಕ್ರಿಯಿಸಿದೆ. ಸಮರದ ಪರಿಣಾಮವಾಗಿ ಈಗಾಗಲೇ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಸಮರ ಶೀಘ್ರದಲ್ಲೇ ಕೊನೆಗೊಳ್ಳದಿದ್ದರೆ ಯಾವೆಲ್ಲ ಸಮಸ್ಯೆಗಳು ತೀವ್ರಗೊಳ್ಳಬಹುದು? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.
ಇರಾನ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ ಎರಡನೇ ವಾರದಲ್ಲಿ ರೂಪಿಸಿದ್ದರು. ಆದರೆ, ಈ ಯೋಜನೆ ರೂಪಿಸುವಾಗ, ಯುದ್ಧ ಆರಂಭವಾದರೆ ಮಧ್ಯಪ್ರಾಚ್ಯದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಥವಾ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಏರುಪೇರು ಆಗಲಿದೆ ಎಂಬುದರ ಬಗ್ಗೆ ಯೋಚಿಸಿರಲಿಲ್ಲ. ಇದಕ್ಕೆ ಕಾರಣವೂ ಇತ್ತು. 2025ರ ಜೂನ್​ನಲ್ಲೂ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳು ಸೇರಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಆಗ ತೈಲ ಮಾರುಕಟ್ಟೆಯ ಮೇಲೆ ಯಾವುದೇ ದೊಡ್ಡ ಪರಿಣಾಮವಾಗಿರಲಿಲ್ಲ.
ಕಚ್ಚಾ ತೈಲದ ಬೆಲೆ ಕೊಂಚ ಏರಿಕೆ ಕಂಡು, ಬಹುಬೇಗ ಇಳಿಕೆ ಕಂಡಿತ್ತು. ಈ ಬಾರಿ ಇದೇ ಲೆಕ್ಕಾಚಾರದಲ್ಲಿ ಟ್ರಂಪ್ ಮುಂದುವರಿದರು ಮತ್ತು ತೈಲ ಮಾರುಕಟ್ಟೆಯ ಬಗ್ಗೆ ಹೆಚ್ಚೇನು ಯೋಚಿಸದೆ ಯುದ್ಧ ಆರಂಭಿಸಿಯೇ ಬಿಟ್ಟರು. ಈಗ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದು, ಯುದ್ಧ ನಿಲ್ಲಿಸುವ ಮಾರ್ಗಗಳನ್ನು ಖುದ್ದು ಟ್ರಂಪ್ ಆಡಳಿತ ಶೋಧಿಸುತ್ತಿದೆ. ಅಲ್ಲದೆ, ಇರಾನ್ ಸವೋಚ್ಚ ನಾಯಕ ಅಲಿ ಖಮೇನಿ ಅಮೆರಿಕ ದಾಳಿಯಲ್ಲಿ ಹತನಾಗಿರುವುದರಿಂದ ಯುದ್ಧ ನಿಲ್ಲಿಸಲು ಟ್ರಂಪ್ ಆಡಳಿತ ಗಂಭೀರ ಚಿಂತನೆ ನಡೆಸುತ್ತಿದೆ. ಟ್ರಂಪ್ ಸಾರಿದ ಸುಂಕ ಸಮರದಿಂದ ಈಗಾಗಲೇ ಅಮೆರಿಕದ ಆರ್ಥಿಕತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತುತ ಈ ಯುದ್ಧದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಅಮೆರಿಕದಲ್ಲಿ ಪೆಟ್ರೋಲ್ ದರ ಏರಿಕೆಯಾಗಿದೆ. ಯುದ್ಧದಿಂದ ಅಮೆರಿಕದ ಸಾಲ ಕೂಡ ಹೆಚ್ಚಲಿದೆ.
ಇರಾನ್​ನ ಮಿಲಿಟರಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕುಗ್ಗಿಸಲು ಈ ಸಂಘರ್ಷವನ್ನು ಇನ್ನು 4ರಿಂದ 6 ವಾರಗಳ ಕಾಲ ಮುಂದುವರಿಸುವ ಉದ್ದೇಶ ಅಮೆರಿಕದ್ದಾಗಿತ್ತು. ಆದರೆ, ತೈಲ ಬಿಕ್ಕಟ್ಟು ಮತ್ತು ಇತರ ಕಾರಣಗಳ ಹಿನ್ನೆಲೆಯಲ್ಲಿ ಯುದ್ಧ ಶೀಘ್ರ ಕೊನೆಗೊಳಿಸಲು ಸಿದ್ಧತೆ ನಡೆದಿದೆ ಎನ್ನುತ್ತವೆ ಶ್ವೇತಭವನದ ಮೂಲಗಳು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ಅಗತ್ಯವಿರುವಷ್ಟು ಕಾಲ’ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ತಕ್ಷಣವೇ ಯುದ್ಧ ನಿಲ್ಲಿಸಿ ಮಾತುಕತೆಗೆ ಮರಳುವಂತೆ ಚೀನಾ ಒತ್ತಾಯಿಸಿದೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳು ಯುದ್ಧದ ತೀವ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು ಮತ್ತು ಎಲ್ಲ ದೇಶಗಳು ಸಂಯಮ ವಹಿಸಬೇಕು ಎಂದು ಮನವಿ ಮಾಡಿವೆ. ಭಾರತವು ಈ ಭಾಗದಲ್ಲಿರುವ ತನ್ನ ಲಕ್ಷಾಂತರ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಂಘರ್ಷದಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದು ಜಾಗತಿಕ ಆರ್ಥಿಕತೆಗೆ ಹೊರೆಯಾಗಲಿದೆ ಎಂದು ಎಚ್ಚರಿಸಿದೆ.

ಯುದ್ಧ ಕೊನೆಗೊಳಿಸುವ ಪ್ರಯತ್ನ

ವಿಶ್ವಸಂಸ್ಥೆಯ ಮಧ್ಯಪ್ರವೇಶ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದೆ.
ಓಮನ್ ಸಂಧಾನ: ಇರಾನ್ ಮತ್ತು ಅಮೆರಿಕ ನಡುವೆ ಸದಾ ಸಂಧಾನಕಾರನಾಗಿ ಕೆಲಸ ಮಾಡುವ ಓಮನ್, ಈಗಲೂ ತೆರೆಮರೆಯಲ್ಲಿ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ.
ಇರಾನ್​ನ ಷರತ್ತುಗಳು: ಯುದ್ಧ ಕೊನೆಗೊಳಿಸಲು ಇರಾನ್ ಗುರುವಾರ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ.
ಇರಾನ್​ನ ಸಾರ್ವಭೌಮ ಹಕ್ಕುಗಳನ್ನು ಗೌರವಿಸಬೇಕು.
ಯುದ್ಧದಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು.
ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯುವುದಿಲ್ಲ ಎಂದು ಅಂತಾರಾಷ್ಟ್ರೀಯ ವಲಯ ಖಾತರಿ ನೀಡಬೇಕು.

ಹಠ ಬಿಡದ ಇರಾನ್

ಯುದ್ಧ ನಿಲ್ಲಿಸುವ ಆಯ್ಕೆಗಳ ಬಗ್ಗೆ ಟ್ರಂಪ್ ಆಡಳಿತ ಗಂಭೀರ ಪರಿಶೀಲನೆ ನಡೆಸುತ್ತಿರುವ ಮಧ್ಯೆಯೇ ಇರಾನ್ ಮಾತ್ರ ಸದ್ಯದಲ್ಲಿ ಯುದ್ಧ ನಿಲ್ಲಿಸುವ ಮನಸ್ಥಿತಿಯಲ್ಲಿ ಇಲ್ಲ. ಯುದ್ಧ ನಿಲ್ಲಬೇಕಾದರೆ ತನ್ನ ಷರತ್ತುಗಳನ್ನು ಒಪ್ಪಬೇಕು ಎಂದು ಸ್ಪಷ್ಟವಾಗಿ ಹೇಳಿದೆ. 2025ರ ಜೂನ್​ನಲ್ಲಿ ನಡೆದ 12 ದಿನಗಳ ಯುದ್ಧಕ್ಕೆ ಹೋಲಿಸಿದರೆ, ಈ ಬಾರಿ ಇರಾನ್ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿದೆ. ಅದು ಅಮೆರಿಕದ ಮಿಲಿಟರಿ ನೆಲೆಗಳು, ಮಧ್ಯಪ್ರಾಚ್ಯದ ಹಲವಾರು ಅರಬ್ ರಾಷ್ಟ್ರಗಳ ನಗರಗಳು ಮತ್ತು ಇಸ್ರೇಲ್​ನ ಜನವಸತಿ ಪ್ರದೇಶಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ.

ಹರಿದಿದೆ ದುಡ್ಡಿನ ಹೊಳೆ

ಜಾಗತಿಕ ರಕ್ಷಣಾ ತಜ್ಞರ ಪ್ರಕಾರ, ಇರಾನ್ ಜತೆಗಿನ ಯುದ್ಧದಲ್ಲಿ ಅಮೆರಿಕ ಮೊದಲ ಆರು ದಿನಗಳಲ್ಲೇ 1 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. 13ನೇ ದಿನದ ಬಳಿಕವೂ ಯುದ್ಧ ಮುಂದುವರಿದಿದೆ. ಪ್ರತಿನಿತ್ಯ ಸರಾಸರಿ 8ರಿಂದ 16 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ.
ಇರಾನ್ ಜತೆಗಿನ ಯುದ್ಧದಲ್ಲಿ ಅಮೆರಿಕ ಶಸ್ತ್ರಾಸ್ತ್ರ ಭಂಡಾರವೂ ವೇಗವಾಗಿ ಕರಗುತ್ತಿದೆ. ಇರಾನ್ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. 2 ಸಾವಿರಕ್ಕೂ ಅಧಿಕ ಡ್ರೋನ್​ಗಳನ್ನು ಮತ್ತು 500ಕ್ಕೂ ಅಧಿಕ ಬ್ಯಾಲಿಸ್ಟಿಕ್ ಮಿಸೈಲ್​ಗಳ ಮುಖಾಂತರ ದಾಳಿ ಮಾಡಿದೆ. ಇರಾನಿನ ಶಾಹೋದ್-136 ಡ್ರೋನ್​ನ ಬೆಲೆ 18ರಿಂದ 45 ಲಕ್ಷ ರೂ. ಇದೆ.

ರಷ್ಯಾ ಪ್ರಯತ್ನ

ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆ ಮತ್ತು ಯುದ್ಧದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಇರಾನ್ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ಇಸ್ರೇಲ್​ನ್ನು ಆಗ್ರಹಿಸಿದ್ದಾರೆ. ಆದರೆ, ಪುತಿನ್ ಹೇಳಿಕೆಯ ಕುರಿತಂತೆ ಅಮೆರಿಕ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕ ಮುಂದಿರುವ ಆಯ್ಕೆಗಳು

ಅಮೆರಿಕ ಸಾರಿರುವ ಯುದ್ಧದ ನಿಜವಾದ ಉದ್ದೇಶ ಇರಾನ್​ನ ಕ್ಷಿಪಣಿ ಶಕ್ತಿ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಕುಂದಿಸುವುದೇ ಆಗಿದೆ. ಒಂದು ವೇಳೆ ಇದು ಸಾಧ್ಯವಾದರೆ, ಯುದ್ಧವನ್ನು ಕೊನೆಗಾಣಿಸುವ ದಾರಿ ಸುಗಮವಾಗಬಹುದು.
ಇರಾನ್​ನ ಸವೋಚ್ಚ ನಾಯಕ ಅಲಿ ಖಮೇನಿಯನ್ನು ಮುಗಿಸಿಬಿಟ್ಟರೆ, ಮುಂದೆ ಬರುವ ನಾಯಕತ್ವ ವ್ಯಾವಹಾರಿಕ ದೃಷ್ಟಿಕೋನ ಹೊಂದಿರುತ್ತದೆ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತದೆ, ಆಗ ಯುದ್ಧವನ್ನು ಕೊನೆಗಾಣಿಸಬಹುದು ಎಂದು ಟ್ರಂಪ್ ಆಡಳಿತ ನಂಬಿತ್ತು. ಆದರೆ, ಅಲಿ ಖಮೇನಿ ಹತ್ಯೆಯ ಬಳಿಕವೂ ಇರಾನ್ ಹೊಸ ನಾಯಕತ್ವ ಅಮೆರಿಕಕ್ಕೆ ಬಲವಾದ ತಿರುಗೇಟು ನೀಡುತ್ತಿದೆ.

ಇರಾನ್ ನೀತಿ

ಅಮೆರಿಕ ಮತ್ತು ಇಸ್ರೇಲ್ ತನ್ನ ಅಸ್ತಿತ್ವಕ್ಕೆ ಮಾರಕ ಎಂದು ಇರಾನ್ ನಂಬಿದ್ದು, ಈ ಬಾರಿ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಿದೆ.
ಖಮೇನಿ ಹತ್ಯೆಯ ಬಳಿಕ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಇರಾನ್​ನ ನೂತನ ಸವೋಚ್ಚ ನಾಯಕರನ್ನಾಗಿ (ಮಾರ್ಚ್ 8) ಆಯ್ಕೆ ಮಾಡಲಾಗಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಸಲಾಗುವುದು ಎಂದು ಮೊಜ್ತಬಾ ಘೋಷಿಸಿದ್ದು, ಬಿಕ್ಕಟ್ಟು ಮುಂದುವರಿದೆ.
ಅಮೆರಿಕ ಊಹಿಸದ ರೀತಿಯಲ್ಲಿ ಇರಾನ್ ಈ ಬಾರಿ ಪ್ರತಿಕ್ರಿಯೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ 22 ಸೇನಾನೆಲೆಗಳನ್ನು ಧ್ವಂಸಗೊಳಿಸಿದೆ. ಆರು ದೇಶಗಳಲ್ಲಿ ಅಮೆರಿಕ ರಾಯಭಾರಿ ಕಚೇರಿಗಳನ್ನು ಧ್ವಂಸಗೊಳಿಸಿದೆ. ಅಮೆರಿಕದ ಮೂರು ಫೈಟರ್ ಜೆಟ್​ಗಳನ್ನು ಹೊಡೆದುರುಳಿಸಿದೆ.

ಜೂನ್​ವರೆಗೆ ಸಮರ?

ಇರಾನ್​ನಲ್ಲಿ ಆಡಳಿತ ಬದಲಾವಣೆ ಯಾಗುವವರೆಗೆ ಅಥವಾ ಇರಾನ್​ನ ಕ್ಷಿಪಣಿ ದಾಳಿಯ ಸಾಮರ್ಥ್ಯ 90% ಕ್ಕಿಂತ ಹೆಚ್ಚು ನಾಶವಾಗುವವರೆಗೆ ಯುದ್ಧ ನಿಲ್ಲುವ ಲಕ್ಷಣಗಳಿಲ್ಲ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಅಂದಾಜಿನ ಪ್ರಕಾರ 2026ರ ಮಧ್ಯಭಾಗದೊಳಗೆ ಒಂದು ಹಂತದ ಕದನ ವಿರಾಮ ಏರ್ಪಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net