ನಿಮ್ಮ ಬಜೆಟ್​ ಎಷ್ಟು? ಪಾಕಿಸ್ತಾನದಲ್ಲಿ ಡಿಸೈನರ್​ ಸಮಾಧಿ ಮಾರಾಟ; ವಿಡಿಯೋ ವೈರಲ್​! Designer Grave

ಪಾಕಿಸ್ತಾನದಲ್ಲಿ ಮಾರಾಟಕ್ಕೆ ಇಡಲಾಗಿರುವ ವಿನ್ಯಾಸಾತ್ಮಕ (ಡಿಸೈನರ್) ಸಮಾಧಿಯ ವೈರಲ್ ವಿಡಿಯೋದ ದೃಶ್ಯ.
ಪಾಕಿಸ್ತಾನದಲ್ಲಿ ಮಾರಾಟಕ್ಕೆ ಇಡಲಾಗಿರುವ ವಿನ್ಯಾಸಾತ್ಮಕ (ಡಿಸೈನರ್) ಸಮಾಧಿಯ ವೈರಲ್ ವಿಡಿಯೋದ ದೃಶ್ಯ.
Published on
ಪಾಕಿಸ್ತಾನ: ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಸದ್ಯ ವೈರಲ್ ಆಗಿರುವ ಒಂದು ವಿಡಿಯೋ ಮಾತ್ರ ನೆಟ್ಟಿಗರನ್ನು ಸಂಪೂರ್ಣ ದಿಗ್ಭ್ರಮೆಗೊಳಿಸಿದೆ. ಸಾಮಾನ್ಯವಾಗಿ ಬಟ್ಟೆ, ಬೂಟು, ಮೊಬೈಲ್ ಅಥವಾ ಕಾರುಗಳನ್ನು ಖರೀದಿಸುವಾಗ ಡಿಸೈನ್​ ಮತ್ತು ಬಜೆಟ್‌ ನೋಡುತ್ತೇವೆ.
ಆದರೆ, ಪಾಕಿಸ್ತಾನದ ವ್ಯಕ್ತಿಯೊಬ್ಬ ಬಂಡೆ ಕಲ್ಲುಗಳು ಮತ್ತು ಅಮೃತಶಿಲೆಗಳಿಂದ ತಯಾರಿಸಿದ ವಿಭಿನ್ನ ವಿನ್ಯಾಸದ ಸಮಾಧಿ (Designer Grave) ಗಳನ್ನು ರೇಟ್ ಕಾರ್ಡ್‌ನೊಂದಿಗೆ ಮಾರಾಟಕ್ಕಿಟ್ಟಿರುವುದನ್ನು ತೋರಿಸಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಿಂದ ವೈರಲ್ ಆದ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾಗಿದೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿಯು ವಿವಿಧ ಶೈಲಿಯ ಸಮಾಧಿಗಳನ್ನು ತೋರಿಸುತ್ತಾ, ಪ್ರತಿಯೊಂದರ ಬೆಲೆಯನ್ನು ವಿವರಿಸುತ್ತಾನೆ.
ಇವುಗಳಲ್ಲಿ ಸಾಮಾನ್ಯ ಕಲ್ಲುಗಳಿಂದ ಹಿಡಿದು ದುಬಾರಿ ಮಾರ್ಬಲ್ ಹಾಗೂ ಗ್ರಾನೈಟ್ ವರೆಗೆ ಬಳಸಿ ಮಾಡಲಾದ ಅತ್ಯಾಕರ್ಷಕ ವಿನ್ಯಾಸಗಳಿವೆ. ವಿಡಿಯೋನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಈ ಸಮಾಧಿಗಳ ಬೆಲೆಯು ಸೌಂದರ್ಯ ಮತ್ತು ವಸ್ತುವಿಗೆ ತಕ್ಕಂತೆ ಸುಮಾರು 55,000 ರೂಪಾಯಿಗಳಿಂದ ಪ್ರಾರಂಭವಾಗಿ ಬರೋಬ್ಬರಿ 4 ಲಕ್ಷ ರೂಪಾಯಿಗಳವರೆಗೆ ಇದೆ ಎಂದು ಹೇಳಲಾಗಿದೆ.
ನಮ್ಮ ಆಯ್ಕೆಯ ಸಮಾಧಿ ನಮಗೆ ಸಿಗುತ್ತಾ?
ಈ ವಿಡಿಯೋ ಆನ್‌ಲೈನ್‌ಗೆ ಬರುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬದುಕಿರಬೇಕಾದರೆ ಮನೆ, ಕಾರು, ಬಟ್ಟೆಗಳಿಗೆ ರೇಂಜ್ ನೋಡುತ್ತಿದ್ದೆವು, ಈಗ ಸಮಾಧಿಯಲ್ಲೂ ಬಜೆಟ್‌ ಹಾಗೂ ಪ್ರೀಮಿಯಂ ಮಾಡೆಲ್‌ಗಳು ಬಂದಿವೆ! ಎಂದು ಕೆಲವರು ಲೇವಡಿ ಮಾಡುತ್ತಿದ್ದಾರೆ. ಇನ್ನು ಕೆಲವರು ಮನುಷ್ಯನ ಮರಣದ ನಂತರ ಆತನ ಒಳ್ಳೆಯ ಗುಣಗಳು ಮತ್ತು ನೆನಪುಗಳೇ ಮುಖ್ಯವೇ ಹೊರತು, ಸಮಾಧಿಯ ಮೇಲಿನ ದುಬಾರಿ ಅಲಂಕಾರವಲ್ಲ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.

ಪಾಕಿಸ್ತಾನದಲ್ಲಿ ಇದು ಹೊಸದಲ್ಲ!

ವಿಡಿಯೋದಲ್ಲಿ ತೋರಿಸಿರುವ ಬೆಲೆಗಳ ಕುರಿತು ಯಾವುದೇ ಅಧಿಕೃತ ಖಚಿತತೆ ಇಲ್ಲದಿದ್ದರೂ, ಪಾಕಿಸ್ತಾನದಲ್ಲಿ ಇಂತಹದ್ದೊಂದು ವ್ಯವಹಾರ ನಡೆಯುತ್ತಿರುವುದು ಹೊಸದೇನಲ್ಲ. ಅಲ್ಲಿನ ಕೆಲವು ಮಾರ್ಬಲ್ ಮಾರಾಟಗಾರರ ವೆಬ್‌ಸೈಟ್‌ಗಳಲ್ಲೇ ಸಮಾಧಿ ವಿನ್ಯಾಸಗಳು ಸುಮಾರು 30,000 ದಿಂದ 98,000 ಪಾಕಿಸ್ತಾನಿ ರೂಪಾಯಿಗಳವರೆಗೆ ಮಾರಾಟದಲ್ಲಿರುವುದಾಗಿ ಪಟ್ಟಿ ಮಾಡಲಾಗಿದೆ. ಅದರಲ್ಲೂ ಕರಾಚಿಯಂತಹ ದೊಡ್ಡ ನಗರಗಳಲ್ಲಿ ಸ್ಮಶಾನಗಳಲ್ಲಿ ಜಾಗದ ಅಭಾವವಿರುವುದರಿಂದ, ಸಮಾಧಿ ನಿರ್ಮಿಸಲು ಭಾರಿ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ವರದಿಗಳು ಈಗಾಗಲೇ ಹೊರಬಂದಿವೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net