ದಾಟಲು ಯತ್ನಿಸಿದ್ರೆ ದಾಳಿ ಖಚಿತ! ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್! ​ಪೆಟ್ರೋಲ್​-ಡಿಸೇಲ್ ಬೆಲೆ ಇನ್ನಷ್ಟು ದುಬಾರಿ?

ಹಾರ್ಮುಜ್ ಜಲಸಂಧಿ
ಹಾರ್ಮುಜ್ ಜಲಸಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಹಾರ್ಮುಜ್ ಜಲಸಂಧಿ ಬಂದ್​
  • ಈ ಜಲಸಂಧಿ ಯಾಕೆ ಅಷ್ಟೊಂದು ಮುಖ್ಯ?
  • ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಸಂಪರ್ಕಿಸುವ ಸುಲಭ ಮಾರ್ಗ
  • ಮುಂದಿನ ದಿನಗಳಲ್ಲಿ ಪೆಟ್ರೋಲ್​-ಡಿಸೇಲ್​ ಬೆಲೆ ಇನ್ನಷ್ಟು ಹೆಚ್ಚಳ?
Strait of Hormuz​: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಬಿಡಕೂಡದು ಎಂದು ರೇಡಿಯೋ ಎಚ್ಚರಿಕೆಗಳನ್ನು ನೀಡಿದ್ದೇ ತಡ ಇದೀಗ ಇದರ ಪರಿಣಾಮವಾಗಿ ಪ್ರಮುಖ ಜಲಮಾರ್ಗವು ಸಂಪೂರ್ಣವಾಗಿ ಬಂದ್​ ಆಗಿದೆ. ಭಾರತ ಸೇರಿದಂತೆ ತೈಲದ ಮೇಲೆ ಶೇ.50ರಿಂದ 60ರಷ್ಟು ಅವಲಂಬಿಸಿದ್ದ ಹಲವು ರಾಷ್ಟ್ರಗಳಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಇರಾನ್ ತೆಗೆದುಕೊಂಡಿರುವ ಈ ಕಟು ನಿರ್ಧಾರವು ಇತರೆ ರಾಷ್ಟ್ರಗಳಿಗೆ ತೈಲ ಬೇಡಿಕೆಯನ್ನು ಹೆಚ್ಚಿಸಲಿದೆ. 

ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್​ ಧಗಧಗ

ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಜಂಟಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನಿನ ಹಲವಾರು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತು. ಇಷ್ಟಕ್ಕೆ ನಿಲ್ಲದ ಈ ದಾಳಿ, ಇರಾನ್‌ನ ಸರ್ವೋಚ್ಚ ನಾಯಕ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಕಾರಣವಾಯಿತು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್, ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. 

ದಾಟಲು ಯತ್ನಿಸಿದ್ರೆ ಹಡಗು ಸ್ಫೋಟ

ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಹಲವು ರಾಷ್ಟ್ರಗಳು ವೀಕ್​ ಪಾಯಿಂಟ್​ ಅನ್ನು ಗಟ್ಟಿಯಾಗಿ ಹಿಡಿದಿರುವ ಇರಾನ್​, ತಮ್ಮ ಹಾರ್ಮುಜ್​ ಜಲಸಂಧಿಯನ್ನು ದಾಟಿಯೇ ಟನ್​ಗಟ್ಟಲೇ ತೈಲವನ್ನು ಹೊತ್ತೊಯ್ಯುವ ಹಡಗುಗಳು ಹೋಗಬೇಕು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಐಆರ್​ಜಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಈಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅದರಲ್ಲೂ, ಇಲ್ಲಿ ಯಾರಿಗೂ ಈ ಮಾರ್ಗದಲ್ಲಿ ಸಾಗಲು ಅನುಮತಿಸುವುದಿಲ್ಲ" ಎಂದು ಇರಾನ್​ ಎಚ್ಚರಿಕೆಗಳನ್ನು ನೀಡಿದೆ. ಅತಿ ಮುಖ್ಯವಾಗಿ, ಯಾರಾದರೂ ಎಚ್ಚರಿಕೆ ಮೀರಿಯೂ ಮುಂದುವರಿಯಲು ಹೋದರೆ, ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ ಎಂದು ಒತ್ತಿ ಹೇಳಿದೆ..
ಹಡಗು ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಜಲಸಂಧಿಯಲ್ಲಿ ಸಂಚಾರವು ಶೇ.70ರಷ್ಟು ಕಡಿಮೆಯಾಗಿದೆ. ಅನೇಕ ಟ್ಯಾಂಕರ್‌ಗಳು ಲಂಗರು ಹಾಕಲ್ಪಟ್ಟಿವೆ. ಕನಿಷ್ಠ 150 ಹಡಗುಗಳು ಮಾರ್ಗ ಮಧ್ಯೆಯೇ ಸಿಲುಕಿಕೊಂಡಿವೆ. ಕೆಲವು ಕಂಟೈನರ್​ಗಳು ಮತ್ತು ಇತರ ಹಡಗುಗಳ ಮೇಲೆ ದಾಳಿಯೂ ನಡೆದಿವೆ. 

ಅಷ್ಟಕ್ಕೂ ಈ ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?

ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಸುಲಭ ಮಾರ್ಗ (ಅಗಲ ಕೇವಲ 33 ಕಿ.ಮೀ). ವಿಶ್ವದ ತೈಲ ಪೂರೈಕೆಯ ಶೇ.20ರಿಂದ 25ರಷ್ಟು ಕೈಗೊಳ್ಳಲಾಗುತ್ತದೆ. ಶೇ.20ರಷ್ಟು LNG (ದ್ರವೀಕೃತ ನೈಸರ್ಗಿಕ ಅನಿಲ) ಸರಬರಾಜು ಮಾಡಲಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಇರಾನ್‌ನಂತಹ ದೇಶಗಳಿಂದ ರಫ್ತು ಮಾಡಲಾಗುವ ತೈಲವು ಈ ಜಲಸಂಧಿ ಮುಖಾಂತರವೇ ಹಾದುಹೋಗುತ್ತದೆ.

ಜಾಗತಿಕ ಆರ್ಥಿಕ ಪರಿಣಾಮಗಳೇನು?

ಮತ್ತೊಂದೆಡೆ, ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲವು ಶೇ.8ರಿಂದ 10ರಷ್ಟು ಏರಿಕೆಯಾಗಿ 82 ಡಾಲರ್​ಗೆ ತಲುಪಿದೆ. ದೀರ್ಘಕಾಲದ ಸ್ಥಗಿತಗೊಂಡರೆ, ಅದು 100 ಡಾಲರ್​ಗೂ ಅಧಿಕ ಹೆಚ್ಚಾಗಿ, 250 ಡಾಲರ್​ಗೂ ತಲುಪಬಹುದು. ಹಡಗು ಕಂಪನಿಗಳು (ಮೇರ್ಸ್ಕ್, ಎಂಎಸ್‌ಸಿ, ಹಪಾಗ್-ಲಾಯ್ಡ್, ಸಿಎಂಎ ಸಿಜಿಎಂ) ಸಾಗಣೆಯನ್ನು ಸ್ಥಗಿತಗೊಳಿಸಿವೆ. ವಿಮಾ ಕಂಪನಿಗಳು ಯುದ್ಧ ಅಪಾಯದ ವ್ಯಾಪ್ತಿಯನ್ನು ರದ್ದುಗೊಳಿಸಿವೆ. ಏಷ್ಯಾದ ರಾಷ್ಟ್ರಗಳಾದ (ಚೀನಾ, ಭಾರತ, ಜಪಾನ್) ತೈಲ ದಾಸ್ತಾನುಗಳನ್ನು ನಿರ್ಣಯಿಸುತ್ತಿವೆ. ಜಾಗತಿಕ ಹಣದುಬ್ಬರ ಮತ್ತು ಜೀವನ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇರಾನ್ ಸ್ವತಃ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರೂ ಪ್ರತೀಕಾರದ ನಿಟ್ಟಿನಲ್ಲಿ ಇಂಥ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದು ಸ್ಪಷ್ಟ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net