ನೀನೇ ಸಾಕಿದ ಗಿಣಿ... ಶೇಖ್​ ಹಸೀನಾ ಮುಂದಿರುವ ಆಯ್ಕೆಗಳೇನು?

Sheikh Hasina
Sheikh Hasina
Published on

ಪ್ರಮುಖ ಮುಖ್ಯಾಂಶಗಳು

  • ಹಸೀನಾ ರಚಿಸಿದ ಐಸಿಟಿಯೇ ಈಗ ಅವರಿಗೆ ಮರಣದಂಡನೆ ಶಿಕ್ಷೆ ಘೋಷಣೆ
  • ಭಾರತ ಹಸೀನಾರನ್ನು ಹಸ್ತಾಂತರಿಸುವುದೇ?
  • ಬಾಂಗ್ಲಾದೇಶಕ್ಕೆ ಮರಳುತ್ತಾರಾ...?
  • ಹಸೀನಾ ಮುಂದಿರುವ ಆಯ್ಕೆಗಳು ಏನು?
"ನೀನೇ ಸಾಕಿದ ಗಿಣಿ, ನಿನ್ನಾ ಮುದ್ದಿನ ಗಿಣಿ... ಹದ್ದಾಗಿ ಕುಕ್ಕಿತಲ್ಲೋ, ನಿನ್ನ ಹದ್ದಾಗಿ ಕುಕ್ಕಿತಲ್ಲೋ...' ಇದು  "ಮಾನಸ ಸರೋವರ' ಚಿತ್ರದ ಪ್ರಸಿದ್ಧ ಹಾಡು. ಆದರೆ, ಈ ಸ್ಥಿತಿ ಈಗ ಬಂದೊದಗಿರುವುದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​ ಹಸೀನಾ ಅವರಿಗೆ. 1971ರ ಯುದ್ಧ ಅಪರಾಧಗಳ ತನಿಖೆ ಮತ್ತು ವಿಚಾರಣೆ ನಡೆಸಲು ಶೇಖ್​ ಹಸೀನಾ 2009ರಲ್ಲಿ ಅಪರಾಧ ನ್ಯಾಯ ಮಂಡಳಿ(ಐಸಿಟಿ)ಯನ್ನು ಮರು ರಚಿಸಿದರು. ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನಿನ ಅನ್ವಯ ಯಾವುದೇ ರಾಜಕೀಯ ನಾಯಕ, ಸಚಿವ ಅಥವಾ ಮಾಜಿ ಪ್ರಧಾನಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ, ಶಿಕ್ಷೆ ನೀಡಬಹುದು. ಹಸೀನಾ ರಚಿಸಿದ ಐಸಿಟಿಯೇ ಈಗ ಅವರಿಗೆ ಮರಣದಂಡನೆ ಶಿಕ್ಷೆ  ಘೋಷಿಸಿದೆ. 2024ರ ಜುಲೈನಿಂದ ಆಗಸ್ಟ್​ವರೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂಬಂಧ ಹಸೀನಾ ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ತೀರ್ಪು ವಂಚನೆಯಿಂದ ಕೂಡಿದೆ ಎಂದು ಹಸೀನಾ ಆರೋಪಿಸಿದ್ದಾರೆ.

ಚುನಾವಣೆ ಬಗ್ಗೆ ಸ್ಪಷ್ಟತೆ ಇಲ್ಲ

ಮೊಹಮ್ಮದ್​ ಯೂನೂಸ್​ ನೇತೃತ್ವದ ಮಧ್ಯಂತರ ಸರ್ಕಾರ 2024ರ ಆಗಸ್ಟ್​ನಲ್ಲಿ ಅಧಿಕಾರ ವಹಿಸಿಕೊಂಡಾಗ, ಶ್ರೀದಲ್ಲೇ ಚುನಾವಣೆ ನಡೆಸಿ, ಹೊಸ ಸರ್ಕಾರ ರಚಿಸಲಾಗುವುದು ಎಂಬ ಭರವಸೆ ನೀಡಿತ್ತು. ಆದರೆ, ಮಧ್ಯಂತರ ಸಕಾರ ರಚನೆಯಾಗಿ 15 ತಿಂಗಳುಗಳು ಕಳೆದರೂ, ಚುನಾವಣೆ ನಡೆಸುವ ಕುರಿತಂತೆ ಯಾವುದೇ ಸ್ಪಷ್ಟತೆ ಇಲ್ಲ. 2026ರ ಫೆಬ್ರವರಿ ಹೊತ್ತಿಗೆ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿದ್ದರೂ, ಚುನಾವಣೆ ನಡೆಸುವ ನಿಟ್ಟಿನಲ್ಲಿ ಯಾವುದೇ ಸಿದ್ಧತೆಗಳು ನಡೆದಿಲ್ಲ. ತೆರೆಯ ಹಿಂದೆ ಹೊಸ ರಾಜಕೀಯ ಶಕ್ತಿಯೊಂದರ ಉಗಮವಾಗುತ್ತಿದೆ ಎಂಬ ಗುಮಾನಿ ಇದ್ದು, ಬಾಂಗ್ಲಾದಲ್ಲಿ ರಾಜಕೀಯ ಅಸ್ಥಿರತೆ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ, ಅಚ್ಚರಿಯ ಬೆಳವಣಿಗೆಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಮೈತ್ರಿ ಏರ್ಪಟ್ಟಿದೆ. ಬಾಂಗ್ಲಾದೇಶ ಚೀನಾಗೆ ಇನ್ನಷ್ಟು ಹತ್ತಿರವಾಗಿದ್ದು, ಭಾರತದಿಂದ ದೂರವಾಗುತ್ತಿದೆ. ಕಳೆದೊಂದು ವರ್ಷದಲ್ಲಿ ಹಿಂದೂಗಳ ಮೇಲೆ ಮತ್ತು ಮಂದಿರಗಳ ಮೇಲೆ ನಿರಂತರ ದಾಳಿ ನಡೆದಿವೆ. ಅಲ್ಪಸಂಖ್ಯಾತರು ಆತಂಕದ ವಾತಾವರಣದಲ್ಲಿ ದಿನದೂಡುತ್ತಿದ್ದಾರೆ.


ಭಾರತ ಹಸೀನಾರನ್ನು ಹಸ್ತಾಂತರಿಸುವುದೇ?

ಶೇಖ್​ ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಅಲ್ಲಿನ ಸರ್ಕಾರ ಭಾರತದ ಮೇಲೆ ಒತ್ತಡ ಹೇರುತ್ತಿದೆ ಹಾಗೂ ಇದಕ್ಕಾಗಿ 2013ರಲ್ಲಿ ಉಭಯ ದೇಶಗಳು "ಅಪರಾಧಿಗಳ ಹಸ್ತಾಂತರ'ಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ನೆನಪಿಸುತ್ತಿದೆ. 2013ರಲ್ಲಿ ಎರಡೂ ದೇಶಗಳ ನಡುವೆ ಈ ಒಪ್ಪಂದ ಏರ್ಪಟ್ಟಿರುವುದು ಹೌದಾದರೂ, ಹಸ್ತಾಂತರ ಪ್ರಕ್ರಿಯೆ ರಾಜಕೀಯ ಆಶ್ರಯ/ಶರಣಾಗತಿಗೆ ಅನ್ವಯಿಸುವುದಿಲ್ಲ. ಅಲ್ಲದೆ, "ಅಪರಾಧ' ಎರಡೂ ದೇಶಗಳಲ್ಲಿ ಸಾಬೀತಾಗಬೇಕು. ಹಸೀನಾ ಪ್ರಕರಣದಲ್ಲಿ ಭಾರತದಲ್ಲಿ ಅವರ ವಿರುದ್ಧ ಯಾವುದೇ ಅಪರಾದ ಸಾಬೀತಾಗಿಲ್ಲ. 
ತಮ್ಮ ಪ್ರಾಣಕ್ಕೆ ಬೆದರಿಕೆ ಇದ್ದರೆ ಹಸೀನಾ ರಾಜಕೀಯ ಆಶ್ರಯ ಭಾರತದಲ್ಲೇ ಮುಂದುವರಿಯಬಹುದು ಮತ್ತು ಇದನ್ನು ಮುಂದುವರಿಸುವ ಅಥವಾ ನಿರಾಕರಿಸುವ ಅಧಿಕಾರ ಭಾರತ ಸರ್ಕಾರಕ್ಕಿದೆ. ಹೀಗಾಗಿ, ಅಪರಾಧ ನ್ಯಾಯ ಮಂಡಳಿಯ ತೀರ್ಪಿನಂತೆ ಹಸೀನಾರನ್ನು ಬಾಂಗ್ಲಾಕ್ಕೆ ಒಪ್ಪಿಸುವುದು ಭಾರತದ ಪಾಲಿಗೆ ಅನಿವಾರ್ಯವೇನೂ ಅಲ್ಲ.  ಹಸೀನಾ ಬಾಂಗ್ಲಾಗೆ ಮರಳಿದರೆ ಅಲ್ಲಿ ಅವರಿಗೆ ನಿಷ್ಪಕ್ಷ ನ್ಯಾಯ ನಿಗುವುದಿಲ್ಲ, ಹಸ್ತಾಂತರ ವಿಷಯದಲ್ಲಿ ಭಾರತದ ರ್ನಿಣಯವನ್ನು ಬಾಂಗ್ಲಾದೇಶ ಒಪ್ಪಲೇ ಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಅವಾಮಿ ಲೀಗ್​ ಶಕ್ತಿ ಪ್ರದರ್ಶನ: ಐಟಿಸಿ ತೀರ್ಪನ್ನು ವಿರೋಧಿಸಿ ಹಸೀನಾರ ಅವಾಮಿ ಲೀಗ್​ ಪಕ್ಷ ಮಂಗಳವಾರ ಬಾಂಗ್ಲಾ ಬಂದ್​ ಆಚರಿಸಿತು. ಹಲವೆಡೆ ಮೆರವಣಿಗೆ ನಡೆಸಿ, ಕಾರ್ಯಕರ್ತರು ಶಕ್ತಿ ಪ್ರದರ್ಶನ ನಡೆಸಿದರು.

ಬಾಂಗ್ಲಾದೇಶಕ್ಕೆ ಮರಳುತ್ತಾರಾ...?

ಸದ್ಯದ ಸ್ಥಿತಿಯಲ್ಲಿ ಹಸೀನಾ ಬಾಂಗ್ಲಾದೇಶಕ್ಕೆ ಮರಳುವುದಿಲ್ಲ. ತಕ್ಷಣಕ್ಕೆ ಭಾರತ ತೊರೆದು ಬಾಂಗ್ಲಾ ಸೇರಿದರೆ ಪ್ರಾಣಕ್ಕೆ ಅಪಾಯವಿದೆ ಎಂಬುದನ್ನು ಅವರು ಮನಗಂಡಿದ್ದಾರೆ. ಹಾಗಾಗಿಯೇ, ಸ್ವದೇಶಕ್ಕೆ ಮರಳಲು ಹಲವು ಷರತ್ತುಗಳನ್ನು ಇರಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಸತ್​ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಅವಾಮಿ ಲೀಗ್​ ಪಕ್ಷದ ಮೇಲಿನ ನಿಷೇಧವನ್ನು ವಾಪಸ್​ ಪಡೆಯಬೇಕು, ರಾಜಕೀಯ ಪ್ರತಿಕಾರದ ಕ್ರಮಗಳನ್ನು, ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಅವಾಮಿ ಲೀಗ್​ ಪಕ್ಷಕ್ಕೆ ಅವಕಾಶ ಮಾಡಿಕೊಡದಿದ್ದರೆ ಬಾಂಗ್ಲಾದೇಶಕ್ಕೆ ಯಾವುದೇ ಕಾರಣಕ್ಕೂ ಮರಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಅವಾಮಿ ಲೀಗ್​ ಮುಗಿಸುವ ಸಂಚು

ಮೊಹಮ್ಮದ್​ ಯೂನುಸ್​ ಸರ್ಕಾರದ ತಂತ್ರಗಾರಿಕೆಯಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದ ಹೆಸರು "ಇಂಟರ್​ನ್ಯಾಷನಲ್​ ಕೆಮ್ಸ್​ ಟ್ರಿಬ್ಯುನಲ್​ (ಐಟಿಸಿ)' ಆಗಿದ್ದರೂ, ಇದು ಯಾವುದೇ ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ಟ್ರಿಬ್ಯುನಲ್​ ಜತೆಗೆ ಸಂಬಂಧ ಹೊಂದಿಲ್ಲ. 1971ರ ಯುದ್ಧ ಅಪರಾಧಿಗಳಿಗೆ ಶಿೆ ಒದಗಿಸಲು ಮತ್ತು ಪಾಕಿಸ್ತಾನದ ಆಗಿನ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು 1973ರಲ್ಲಿ ಐಟಿಸಿ ಸ್ಥಾಪಿಸಲಾಯಿತಾದರೂ, ಅದು ನಿಷ್ಕ್ರಿಯವಾಗಿತ್ತು. 1971ರ ಯುದ್ಧಾಪರಾಧಿಗಳಿಗೆ ಶಿೆ ಕೊಡಿಸುವ ಸಂಬಂಧ 2009ರಲ್ಲಿ ಶೇಖ್​ ಹಸೀನಾ ಮತ್ತೆ ಐಟಿಸಿಗೆ ಜೀವ ತುಂಬಿದರು. ಬಾಂಗ್ಲಾದೇಶದಲ್ಲಿ ಯಾವುದೇ ಚುನಾಯಿತ ಸರ್ಕಾರ ಇಲ್ಲದಿರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿರುವಾಗ ಐಟಿಸಿ ಈ ತೀರ್ಪು ನೀಡಿರುವುದು ದೋಷಪೂರ್ಣವೇ ಆಗಿದೆ ಮತ್ತು ಇದನ್ನು ಯೂನುಸ್​ ಸರ್ಕಾರ ಮಾಡಿಸಿದೆ ಎಂಬುದರಲ್ಲಿ ಸಂಶಯಕ್ಕೆ ಆಸ್ಪದ ಇಲ್ಲ ಎಂದು ಬಾಂಗ್ಲಾದ ಹಲವು ಮಾಧ್ಯಮಗಳು ವರದಿ ಮಾಡಿವೆ. ಮುಖ್ಯವಾಗಿ, ವಿಚಾರಣೆಯ ವೇಳೆ ಹಸೀನಾರ ಅಭಿಪ್ರಾಯ ಆಲಿಸದೆ ಏಕಪಯವಾಗಿ ವಿಚಾರಣೆ ನಡೆಸಿ, ತೀರ್ಪು ನೀಡಲಾಗಿದೆ. ಶೇಖ್​ ಹಸೀನಾರ ಅವಾಮಿ ಲೀಗ್​ ಪಕ್ಷದ ಮೇಲೆ 6 ತಿಂಗಳ ಹಿಂದಷ್ಟೇ ನಿಷೇಧ ಹೇರಲಾಗಿದೆ. ಈ ನಿಷೇಧವನ್ನು ಕಾಯಂಗೊಳಿಸುವ ಉದ್ದೇಶ ಯೂನುಸ್​ ಸರ್ಕಾರದ್ದಾಗಿದೆ. ಅಂದರೆ ರಾಜಕೀಯ ಪ್ರತಿರೋಧವೇ ಇರದಿದ್ದರೆ ಅಧಿಕಾರ ತಮ್ಮಲ್ಲೇ ಉಳಿಯುತ್ತದೆ, ಈ ತಂತ್ರಗಾರಿಕೆಗೆ ಚೀನಾ, ಪಾಕಿಸ್ತಾನ ಸೇರಿ ಹಲವು ದೇಶಗಳ ಬೆಂಬಲ ಸಿಗುತ್ತದೆ ಎಂಬ ಲೆಕ್ಕಾಚಾರ ಯೂನುಸ್​ ಸರ್ಕಾರದ್ದು. ಅವಾಮಿ ಲೀಗ್​ ಬಾಂಗ್ಲಾದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. 18 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಒಂದೂವರೆ ಕೋಟಿ ಜನರು ಅವಾಮಿ ಲೀಗ್​ನ ಸಕ್ರಿಯ ಸದಸ್ಯರಾಗಿದ್ದಾರೆ. 

ರಾಜತಾಂತ್ರಿಕ ಆಯ್ಕೆಗಳು

ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿಸಿ ಶೇಖ್​ ಹಸೀನಾ ಭಾರತ ಅಥವಾ ಇನ್ನಿತರ ಯಾವುದೇ ರಾಷ್ಟ್ರದಲ್ಲಿ ರಾಜಕೀಯ ಆಶ್ರಯ ಪಡೆಯಬಹುದು ಮತ್ತು ಭದ್ರತೆಗಾಗಿ ಆಗ್ರಹಿಸಬಹುದು. ಹಸೀನಾರ ಅವಾಮಿ ಲೀಗ್​ ಪಕ್ಷ ಮತ್ತು ಅವರ ಅಂತಾರಾಷ್ಟ್ರೀಯ ಬೆಂಬಲಿಗರು ಅಪರಾಧ ನ್ಯಾಯ ಮಂಡಳಿಯ (ಐಸಿಟಿ) ತೀರ್ಪನ್ನು ಪ್ರಶ್ನಿಸಬಹುದು ಮತ್ತು ಶಿಕ್ಷೆ ಸ್ಥಗಿತಗೊಳಿಸುವ ಬೇಡಿಕೆ ಮಂಡಿಸುವ ಆಯ್ಕೆ ಇದೆ.  ಅವಾಮಿ ಲೀಗ್​ ಪಕ್ಷ ಬಾಂಗ್ಲಾದೇಶದಲ್ಲಿ ಜನಬೆಂಬಲ ಗಿಟ್ಟಿಸಿ, ಹಸೀನಾರ ಶಿೆಯನ್ನು ಕಡಿಮೆಗೊಳಿಸುವಂತೆ ಇಲ್ಲವೆ ರದ್ದುಗೊಳಿಸುವಂತೆ ಮೊಹಮ್ಮದ್​ ಯೂನುಸ್​ ನೇತೃತ್ವದ ಮಧ್ಯಂತರ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಬಹುದು.

ಹಸೀನಾ ಮುಂದಿರುವ ಆಯ್ಕೆಗಳು

ಮರಣದಂಡನೆ ಶಿಕ್ಷೆ ಘೋಷಿಸಲಾಗಿದ್ದರೂ ಶೇಖ್​ ಹಸೀನಾ ಅವರ ಮುಂದೆ ಹಲವು ಕಾನೂನು ಹಾಗೂ ರಾಜತಾಂತ್ರಿಕ ಆಯ್ಕೆಗಳಿವೆ. 
ಕಾನೂನು ಆಯ್ಕೆಗಳು:  ಟ್ರಿಬ್ಯುನಲ್​ ನೀಡಿದ ಆದೇಶವನ್ನು ಹಸೀನಾ ಬಾಂಗ್ಲಾದೇಶದ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 
ಸಾಗಳ ಮರುವಿಚಾರಣೆಗೆ ಆಗ್ರಹಿಸಿ ಮತ್ತು ದೋಷಪೂರ್ಣ ತೀರ್ಪು ನೀಡಲಾಗಿದೆ ಎಂಬ ಕಾರಣ ನೀಡಿ ಮರುತನಿಖೆಗೆ ಅರ್ಜಿ ಸಲ್ಲಿಸಬಹುದು. 
ನ್ಯಾಯ ಮಂಡಳಿಯ ತೀರ್ಪನ್ನು ಪ್ರಶ್ನಿಸಿ 30 ದಿನಗಳ ಒಳಗೆ ಹಸೀನಾ ಸುಪ್ರಿಂ ಕೋರ್ಟ್​ಗೆ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿ ಸಲ್ಲಿಸಲು ಹಸೀನಾ ಖುದ್ದು ಹಾಜರಿರಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ಪ್ರಾಣಕ್ಕೆ ಅಪಾಯವಿದ್ದು, ಬಾಂಗ್ಲಾಕ್ಕೆ ಮರಳುವಂಥ ಪ್ರಮಾದ ಮಾಡುವುದಿಲ್ಲ. 
ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಹಸೀನಾ ಅಂತಾರಾಷ್ಟ್ರೀಯ ಮಾನವಾಧಿಕಾರ ಸಂಟನೆಗಳಿಗೆ ಅಥವಾ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಗಳಿಗೆ ದೂರು ಸಲ್ಲಿಸಬಹುದು. ಈ ಸಂಸ್ಥೆಗಳು ಯಾವುದೇ ದೇಶದ ನ್ಯಾಯಾಲಯಗಳ ತೀರ್ಪನ್ನು ರದ್ದುಗೊಳಿಸಲು ಸಾಧ್ಯವಿಲ್ಲವಾದರೂ, ಪಾರದರ್ಶಕ ತನಿಖೆಗಾಗಿ ಒತ್ತಡ ಸೃಷ್ಟಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net