'ಮೆಲೋನಿ' ಮತ್ತು ಪ್ರಧಾನಿ ಮೋದಿಯವರ ಹೆಸರನ್ನು ಒಳಗೊಂಡ 'ಮೆಲೋಡಿ' ಎಂಬ ಪದವು 2023ರ ದ್ವಿಪಕ್ಷೀಯ ಸಭೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ಹಾಸ್ಯದ ರೂಪದಲ್ಲಿ ಆರಂಭವಾಗಿತ್ತು. ವಿವಿಧ ಜಾಗತಿಕ ಶೃಂಗಸಭೆಗಳಲ್ಲಿ ಉಭಯ ನಾಯಕರ ನಡುವಿನ ಆತ್ಮೀಯ ಮತ್ತು ಮುಕ್ತ ಸಂಭಾಷಣೆಗಳ ವೈರಲ್ ವಿಡಿಯೋ ಹಾಗೂ ಮೀಮ್ಸ್ಗಳಲ್ಲಿ ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಇದು ಇಂಟರ್ನೆಟ್ನಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಟಲಿ ಪ್ರಧಾನಿ ಮೆಲೋನಿಯವರು ಮೊದಲ ಬಾರಿಗೆ 2024 ರಲ್ಲಿ ಮೋದಿಯವರೊಂದಿಗಿನ ಸೆಲ್ಫಿ ಹಂಚಿಕೊಂಡು, "ಹಲೋ ಫ್ರೆಂಡ್ಸ್, ಫ್ರಮ್ #Melodi" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆ ಬಳಿಕ ಜೂನ್ 2025 ರ ಜಿ7 ಶೃಂಗಸಭೆಯ ಸಂದರ್ಭದಲ್ಲೂ ಸೆಲ್ಫಿ ವಿಡಿಯೋವೊಂದನ್ನು ಹಂಚಿಕೊಂಡು, "ಹಲೋ, ಫ್ರಮ್ ದಿ ಮೆಲೋಡಿ ಟೀಮ್" ಎಂದು ಕ್ಯಾಪ್ಷನ್ ನೀಡಿದ್ದರು. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ನಡೆಯುತ್ತಿರುವ ಇಂತಹ ಸರಣಿ ಸಂವಹನಗಳು ಇಬ್ಬರು ನಾಯಕರ ನಡುವಿನ ಆತ್ಮೀಯ ವೈಯಕ್ತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ.