ಯುಕ್ರೇನ್‌ಗೆ ಹೋಗಬೇಕಿದ್ದ ಆಯುಧಗಳು ಈಗ ಇರಾನ್ ವಿರುದ್ಧ! ಅಮೆರಿಕದ ಬೊಕ್ಕಸ ಖಾಲಿ: ದಿನಕ್ಕೆ 16,000 ಕೋಟಿ ರೂಪಾಯಿ ಖರ್ಚು! Pentagon Crisis

ಯುಕ್ರೇನ್‌ಗೆ ಹೋಗಬೇಕಿದ್ದ ಆಯುಧಗಳು ಈಗ ಇರಾನ್ ವಿರುದ್ಧ! ಅಮೆರಿಕದ ಬೊಕ್ಕಸ ಖಾಲಿ: ದಿನಕ್ಕೆ 16,000 ಕೋಟಿ ರೂಪಾಯಿ ಖರ್ಚು!
ಯುಕ್ರೇನ್‌ಗೆ ಹೋಗಬೇಕಿದ್ದ ಆಯುಧಗಳು ಈಗ ಇರಾನ್ ವಿರುದ್ಧ! ಅಮೆರಿಕದ ಬೊಕ್ಕಸ ಖಾಲಿ: ದಿನಕ್ಕೆ 16,000 ಕೋಟಿ ರೂಪಾಯಿ ಖರ್ಚು!
Published on
ವಾಷಿಂಗ್ಟನ್: ರಷ್ಯಾ ವಿರುದ್ಧ ಹೋರಾಡಲು ಯುಕ್ರೇನ್‌ಗೆ ಮೀಸಲಿಟ್ಟಿದ್ದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈಗ ಇರಾನ್ ವಿರುದ್ಧದ ಯುದ್ಧಕ್ಕೆ ತಿರುಗಿಸಲು ಅಮೆರಿಕದ ರಕ್ಷಣಾ ಇಲಾಖೆ (Pentagon Crisis) ಪೆಂಟಗನ್ ಗಂಭೀರ ಚಿಂತನೆ ನಡೆಸಿದೆ. 
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಇರಾನ್ ನಡೆಸುತ್ತಿರುವ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ತಡೆಯಲು ಅಮೆರಿಕದ ಬಳಿ ಇದ್ದ ಮದ್ದುಗುಂಡುಗಳ ದಾಸ್ತಾನು ಖಾಲಿಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

3 ದಿನದಲ್ಲಿ 800 ಪೇಟ್ರಿಯಾಟ್ ಕ್ಷಿಪಣಿ ಫೈರ್!

ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿರುವ ಮಾಹಿತಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯುಕ್ರೇನ್ ಸಂಗ್ರಹಿಸಿದ್ದ ಒಟ್ಟು ಕ್ಷಿಪಣಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯ, ಅಂದರೆ 800 ಪೇಟ್ರಿಯಾಟ್ ಇಂಟರ್ಸೆಪ್ಟರ್ ಕ್ಷಿಪಣಿಗಳನ್ನು ಮಧ್ಯಪ್ರಾಚ್ಯದಲ್ಲಿ ಕೇವಲ ಮೂರೇ ದಿನಗಳಲ್ಲಿ ಹಾರಿಸಲಾಗಿದೆ. ಇರಾನ್‌ನ ನಿರಂತರ ದಾಳಿಯನ್ನು ಎದುರಿಸಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಅನಿವಾರ್ಯವಾಗಿ ಈ ದುಬಾರಿ ಕ್ಷಿಪಣಿಗಳನ್ನು ಬಳಸುತ್ತಿವೆ.

ದಿನಕ್ಕೆ 2 ಬಿಲಿಯನ್ ಡಾಲರ್ ವೆಚ್ಚ: ಅಮೆರಿಕದ ಆರ್ಥಿಕತೆಗೆ ಪೆಟ್ಟು

ಈ ಯುದ್ಧವು ಅಮೆರಿಕದ ಪಾಲಿಗೆ ಅತ್ಯಂತ ದುಬಾರಿ ವ್ಯವಹಾರವಾಗಿ ಪರಿಣಮಿಸಿದೆ.
ಭೀಕರ ವೆಚ್ಚ: ಕೇವಲ ಮೊದಲ ಎರಡು ವಾರಗಳಲ್ಲಿ ಅಮೆರಿಕ ಕನಿಷ್ಠ 12 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ.) ಖರ್ಚು ಮಾಡಿದೆ.
ದಿನದ ಲೆಕ್ಕ: ಸರಾಸರಿ ದಿನಕ್ಕೆ 2 ಬಿಲಿಯನ್ ಡಾಲರ್ (ಅಂದಾಜು 16,000 ಕೋಟಿ ರೂ.) ಹಣ ಯುದ್ಧದ ಜ್ವಾಲೆಗೆ ಆಹುತಿಯಾಗುತ್ತಿದೆ.
ಹೆಚ್ಚುವರಿ ಬಜೆಟ್: ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಕ್ಷಿಪಣಿಗಳ ದಾಸ್ತಾನು ಮರುಪೂರಣ ಮಾಡಲು ಪೆಂಟಗನ್ ಈಗ ಅಮೆರಿಕ ಕಾಂಗ್ರೆಸ್‌ನಿಂದ 200 ಬಿಲಿಯನ್ ಡಾಲರ್ ಹೆಚ್ಚುವರಿ ಅನುದಾನವನ್ನು ಕೋರಿದೆ.

ಯುಕ್ರೇನ್ ಹಿತಾಸಕ್ತಿಗೆ ಧಕ್ಕೆ..?

ಯುರೋಪಿಯನ್ ರಾಷ್ಟ್ರಗಳು ಯುಕ್ರೇನ್‌ಗಾಗಿ ಹಣ ನೀಡಿದ್ದ PURL ಮೆಕ್ಯಾನಿಸಂ ಅಡಿಯಲ್ಲಿ ತಯಾರಾದ ಆಯುಧಗಳನ್ನು ಈಗ ಅಮೆರಿಕ ತನ್ನ ಸ್ವಂತ ರಕ್ಷಣೆಗಾಗಿ ಮತ್ತು ಮಧ್ಯಪ್ರಾಚ್ಯಕ್ಕಾಗಿ ಬಳಸಿಕೊಳ್ಳಲು ಮುಂದಾಗಿದೆ. ಸುಮಾರು 750 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಯುಕ್ರೇನ್‌ಗೆ ಕಳುಹಿಸುವ ಬದಲು ತನ್ನದೇ ಆದ ದಾಸ್ತಾನು ತುಂಬಿಸಿಕೊಳ್ಳಲು ಅಮೆರಿಕ ನಿರ್ಧರಿಸಿದೆ. ಇದು ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಅನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.

ರಡಾರ್ ವ್ಯವಸ್ಥೆ ಧ್ವಂಸ: ಅಮೆರಿಕಕ್ಕೆ ದೊಡ್ಡ ಹಿನ್ನಡೆ

ಯುದ್ಧದ ಆರಂಭಿಕ ಹಂತದಲ್ಲೇ ಮುವಾಫಕ್ ಸಾಲ್ಟಿ ಏರ್ ಬೇಸ್‌ನಲ್ಲಿದ್ದ ಅತ್ಯಂತ ಪ್ರಮುಖ AN TPY 2 ರಡಾರ್ ವ್ಯವಸ್ಥೆಯನ್ನು ಇರಾನ್ ಧ್ವಂಸಗೊಳಿಸಿದೆ. ಇದು ಅಮೆರಿಕದ THAAD ಕ್ಷಿಪಣಿ ವ್ಯವಸ್ಥೆಯ ಕಣ್ಣು ಇದ್ದಂತೆ. ಈ ರಡಾರ್ ನಾಶವಾಗಿರುವುದರಿಂದ ಅಮೆರಿಕ ಈಗ ಪೇಟ್ರಿಯಾಟ್ ಬ್ಯಾಟರಿಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಇಡೀ ಜಗತ್ತಿನಲ್ಲಿ ಅಮೆರಿಕದ ಬಳಿ ಕೇವಲ ಎಂಟು THAAD ಬ್ಯಾಟರಿಗಳಿದ್ದು, ಹೊಸ ರಡಾರ್‌ಗಳನ್ನು ತಕ್ಷಣವೇ ತಯಾರಿಸುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನಾ ಸಾಮರ್ಥ್ಯದ ಕೊರತೆ

ಲಾಕ್ಹೀಡ್ ಮಾರ್ಟಿನ್ ಕಂಪನಿಯು ವರ್ಷಕ್ಕೆ ಕೇವಲ 600 PAC 3 ಇಂಟರ್ಸೆಪ್ಟರ್‌ಗಳನ್ನು ತಯಾರಿಸುತ್ತದೆ. ಆದರೆ ಈಗಿನ ಯುದ್ಧದ ತೀವ್ರತೆ ನೋಡಿದರೆ ಈ ಸಂಖ್ಯೆ ಸಾಲದಾಗಿದೆ. ಉತ್ಪಾದನೆಯನ್ನು 2,000ಕ್ಕೆ ಹೆಚ್ಚಿಸಲು ಒಪ್ಪಂದವಾಗಿದ್ದರೂ, ಅದು ಕಾರ್ಯಗತವಾಗಲು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ಅಮೆರಿಕದ ಆಕಾಶ ರಕ್ಷಣಾ ಕವಚ ತೀವ್ರ ಒತ್ತಡದಲ್ಲಿರಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net