ನಮ್ಮದು 7000 ವರ್ಷಗಳ ಇತಿಹಾಸ, ಅಮೆರಿಕದ್ದು ಕೇವಲ ಹಾಲಿವುಡ್ ಭ್ರಮೆ: ಟ್ರಂಪ್ ಶಿಲಾಯುಗದ ಎಚ್ಚರಿಕೆಗೆ ಇರಾನ್ ತಿರುಗೇಟು! Stone Age Threat

ನಮ್ಮದು 7000 ವರ್ಷಗಳ ಇತಿಹಾಸ, ಅಮೆರಿಕದ್ದು ಕೇವಲ ಹಾಲಿವುಡ್ ಭ್ರಮೆ: ಟ್ರಂಪ್ ಶಿಲಾಯುಗದ ಎಚ್ಚರಿಕೆಗೆ ಇರಾನ್ ತಿರುಗೇಟು!
ನಮ್ಮದು 7000 ವರ್ಷಗಳ ಇತಿಹಾಸ, ಅಮೆರಿಕದ್ದು ಕೇವಲ ಹಾಲಿವುಡ್ ಭ್ರಮೆ: ಟ್ರಂಪ್ ಶಿಲಾಯುಗದ ಎಚ್ಚರಿಕೆಗೆ ಇರಾನ್ ತಿರುಗೇಟು!
Published on
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ಅನ್ನು ಬಾಂಬ್ ಹಾಕಿ ಶಿಲಾಯುಗಕ್ಕೆ ತಳ್ಳುತ್ತೇವೆ ಎಂಬ ಉದ್ಧಟತನದ ಹೇಳಿಕೆಗೆ ಇರಾನ್(Stone Age Threat) ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇತಿಹಾಸಕ್ಕೆ ನಮ್ಮ ಬಗ್ಗೆ ಚೆನ್ನಾಗಿ ತಿಳಿದಿದೆ. ಶಿಲಾಯುಗದ ಕ್ರೌರ್ಯ ಮತ್ತು ಶಿಶುಹತ್ಯೆಯನ್ನು ಆಧುನಿಕ ಜಗತ್ತಿಗೆ ತಂದಿರುವುದು ನೀವೇ ಹೊರತು ನಾವಲ್ಲ ಎಂದು ಕಿಡಿಕಾರಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಪ್ರತಿಯಾಗಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ರಾಯಭಾರ ಕಚೇರಿಗಳು ಅಮೆರಿಕದ 250 ವರ್ಷಗಳ ಇತಿಹಾಸವನ್ನು ಲೇವಡಿ ಮಾಡಿವೆ.

ಟ್ರಂಪ್ ನೀಡಿದ 'ಶಿಲಾಯುಗದ' ಭೀಕರ ಎಚ್ಚರಿಕೆ

ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ಅಂತಿಮ ಹಂತಕ್ಕೆ ತಲುಪಿದೆ ಎಂದು ಘೋಷಿಸಿದರು. ಮುಂದಿನ ಎರಡು ಮೂರು ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಮೆರಿಕದ ಮಿಲಿಟರಿ ಗುರಿಗಳನ್ನು ನಾವು ಶೀಘ್ರದಲ್ಲೇ ತಲುಪಲಿದ್ದೇವೆ. ಮುಂದಿನ 21 ದಿನಗಳಲ್ಲಿ ಇರಾನ್ ಅನ್ನು ಅಕ್ಷರಶಃ ಶಿಲಾಯುಗಕ್ಕೆ ತಳ್ಳುತ್ತೇವೆ. ಅವರು ಇರಬೇಕಾದ ಜಾಗ ಅದೇ ಎಂದು ಟ್ರಂಪ್ ಗುಡುಗಿದ್ದರು.
ಆದರೆ, ಅಮೆರಿಕದ ಈ ಮಿಲಿಟರಿ ಗುರಿಗಳು ಯಾವುವು ಎಂಬ ಬಗ್ಗೆ ಟ್ರಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಇರಾನ್‌ನ ಸಂಪೂರ್ಣ ನಾಶವೋ ಅಥವಾ ಕೇವಲ ಶಸ್ತ್ರಾಸ್ತ್ರ ಕೇಂದ್ರಗಳ ಧ್ವಂಸವೋ ಎಂಬ ಗೊಂದಲ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿದೆ.

7000 ವರ್ಷಗಳ ನಾಗರಿಕತೆ ನಮ್ಮದು: ಇರಾನ್ ಪ್ರತ್ಯುತ್ತರ

ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕೃತ 'X' ಖಾತೆಯ ಮೂಲಕ ಟೆಹ್ರಾನ್ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸಿದೆ. ನಾವು 7,000 ವರ್ಷಗಳ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಇತಿಹಾಸಕ್ಕೆ ನಮ್ಮ ಸಾಮರ್ಥ್ಯ ತಿಳಿದಿದೆ. ಅಮೆರಿಕ ಮತ್ತು ಇಸ್ರೇಲ್‌ನ ಬಾಂಬ್‌ಗಳು ನಮ್ಮನ್ನು ಶಿಲಾಯುಗಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
IRGC ಕಮಾಂಡರ್ ಬ್ರಿಗೇಡಿಯರ್ ಜನರಲ್ ಸೈಯದ್ ಮಜಿದ್ ಮೂಸವಿ ಅವರು ಟ್ರಂಪ್ ಮತ್ತು ಹೆಗ್ಸೆತ್ ಅವರಿಗೆ ಟಾಂಗ್ ನೀಡುತ್ತಾ, ಅಮೆರಿಕ ತನ್ನ ಸೈನಿಕರನ್ನು ಸಮಾಧಿಗೆ ಕಳುಹಿಸುತ್ತಿದೆ. ಹಾಲಿವುಡ್ ಭ್ರಮೆಗಳು ನಿಮ್ಮ ಮೆದುಳನ್ನು ಎಷ್ಟು ವಿಷಪೂರಿತಗೊಳಿಸಿವೆ ಎಂದರೆ, ಕೇವಲ 250 ವರ್ಷಗಳ ಇತಿಹಾಸವಿರುವ ನೀವು 6000 ವರ್ಷಗಳ ಹಳೆಯ ನಾಗರಿಕತೆಯನ್ನು ಬೆದರಿಸುತ್ತಿದ್ದೀರಿ ಎಂದು ಕುಟುಕಿದ್ದಾರೆ.

ಅಮೆರಿಕಕ್ಕೆ 'ಜೌಗು ಪ್ರದೇಶ'ದ ಭೀತಿ?

ಇರಾನ್ ಮಿಲಿಟರಿ ವಕ್ತಾರರು ಟ್ರಂಪ್ ಅವರ ಹೇಳಿಕೆಯನ್ನು ಅತ್ಯಂತ ಬಾಲಿಶ ಎಂದು ಕರೆದಿದ್ದಾರೆ. ಇರಾನ್‌ನ ಸೈನ್ಯ ಮತ್ತು ನೌಕಾಪಡೆ ಸಂಪೂರ್ಣ ನಾಶವಾಗಿದೆ ಎಂಬ ನಿಮ್ಮ ಭ್ರಮೆಯು ನಿಮ್ಮನ್ನು ಮತ್ತಷ್ಟು ಸಂಕಷ್ಟದ ಜೌಗು ಪ್ರದೇಶಕ್ಕೆ ತಳ್ಳಲಿದೆ. ನಮ್ಮ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ವಾಷಿಂಗ್ಟನ್‌ಗೆ ಶೂನ್ಯ ಜ್ಞಾನವಿದೆ ಎಂದು ಹೇಳಿದ್ದಾರೆ.
ದಾಳಿ ನಡೆದಿದೆ ಎಂದು ಅಮೆರಿಕ ಭಾವಿಸುತ್ತಿರುವ ಸ್ಥಳಗಳು ಕೇವಲ ಮೇಲ್ಮಟ್ಟದ ತಾಣಗಳಾಗಿದ್ದು, ಇರಾನ್‌ನ ಅಸಲಿ ಕ್ಷಿಪಣಿ ಮತ್ತು ಡ್ರೋನ್ ಉತ್ಪಾದನಾ ಕೇಂದ್ರಗಳು ಸುರಕ್ಷಿತವಾಗಿವೆ ಎಂದು ಇರಾನ್ ಪ್ರತಿಪಾದಿಸಿದೆ.

ಯುದ್ಧದ ತೀವ್ರತೆ ಮತ್ತು ಜಾಗತಿಕ ಕಳವಳ

ಟ್ರಂಪ್ ಅವರ 21 ದಿನಗಳ ಗಡುವು ಇಡೀ ಮಧ್ಯಪ್ರಾಚ್ಯವನ್ನು ಸ್ಫೋಟಕ ಸ್ಥಿತಿಗೆ ತಂದಿದೆ. ಅಮೆರಿಕದ ಈ ದಾಳಿಗಳು ಇರಾನ್‌ನ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆಯೇ ಅಥವಾ ಜಾಗತಿಕ ತೈಲ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡುತ್ತದೆಯೇ ಎಂಬ ಭೀತಿ ಆವರಿಸಿದೆ. ಇರಾನ್ ಸಹ ಸಾವಿಗೆ ಸಿದ್ಧ, ಆದರೆ ಶರಣಾಗತಿಗಲ್ಲ ಎಂಬ ನಿಲುವು ತಳೆದಿರುವುದು ಯುದ್ಧ ಮತ್ತಷ್ಟು ದೀರ್ಘವಾಗುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net