ಯುದ್ಧ ನಮಗೆ ಇಷ್ಟವಿರಲಿಲ್ಲ, ಆದರೆ ನಮ್ಮನ್ನು ಬಲವಂತವಾಗಿ ಎಳೆಯಲಾಯಿತು: ಭಾರತದಲ್ಲಿನ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ ಆಕ್ರೋಶ! Abdul Majid Hakeem Elahi

ಯುದ್ಧ ನಮಗೆ ಇಷ್ಟವಿರಲಿಲ್ಲ, ಆದರೆ ನಮ್ಮನ್ನು ಬಲವಂತವಾಗಿ ಎಳೆಯಲಾಯಿತು: ಭಾರತದಲ್ಲಿನ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ ಆಕ್ರೋಶ!
ಯುದ್ಧ ನಮಗೆ ಇಷ್ಟವಿರಲಿಲ್ಲ, ಆದರೆ ನಮ್ಮನ್ನು ಬಲವಂತವಾಗಿ ಎಳೆಯಲಾಯಿತು: ಭಾರತದಲ್ಲಿನ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ ಆಕ್ರೋಶ!
Published on
ನವದೆಹಲಿ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವಿನ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ(Abdul Majid Hakeem Elahi) ಶನಿವಾರ (ಮೇ. 2) ದೆಹಲಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ಎಂದಿಗೂ ಯುದ್ಧವನ್ನು ಬಯಸಿರಲಿಲ್ಲ, ಆದರೆ ನಿರಂತರ ದಾಳಿಗಳು ನಮ್ಮನ್ನು ತಿರುಗೇಟು ನೀಡುವಂತೆ ಅನಿವಾರ್ಯ ಪರಿಸ್ಥಿತಿಗೆ ತಳ್ಳಿದವು ಎಂದು ಹೇಳಿದ್ದಾರೆ.

ಯಾರು ಕೊಟ್ಟರು ಇವರಿಗೆ ಅಧಿಕಾರ? - ಅಮೆರಿಕ ವಿರುದ್ಧ ವಾಗ್ದಾಳಿ

ಸಂಘರ್ಷದ ಕುರಿತು ಮಾತನಾಡಿದ ಇಲಾಹಿ, ಇರಾನ್ ಯುದ್ಧವನ್ನು ತಪ್ಪಿಸಲು ಹಲವು ಬಾರಿ ಪ್ರಯತ್ನಿಸಿತು. ಆದರೆ ಅಮೆರಿಕ ಮತ್ತು ಇಸ್ರೇಲ್ ಇತರ ದೇಶಗಳ ಮೇಲೆ ತಮ್ಮ ಇಚ್ಛೆಯನ್ನು ಹೇರಲು ಪ್ರಯತ್ನಿಸುತ್ತಿವೆ. ಬೇರೆ ದೇಶಗಳ ಮೇಲೆ ದಬ್ಬಾಳಿಕೆ ನಡೆಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ನೇರ ಪ್ರಶ್ನೆ ಎಸೆದಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಅವರು ಯುದ್ಧವೂ ಅಲ್ಲದ, ಶಾಂತಿಯೂ ಇಲ್ಲದ ಸ್ಥಿತಿ ಎಂದು ಬಣ್ಣಿಸಿದ್ದಾರೆ.
ಹತ್ಯಾಕಾಂಡದ ಭೀಕರತೆ ಬಿಚ್ಚಿಟ್ಟ ಇಲಾಹಿ: 175 ಶಾಲಾ ವಿದ್ಯಾರ್ಥಿನಿಯರ ಸಾವು!
ಇರಾನ್ ಮೇಲೆ ನಡೆದ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳ ಭೀಕರತೆಯನ್ನು ವಿವರಿಸಿದ ಇಲಾಹಿ, ಈ ಸಂಘರ್ಷದಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ, ಸಚಿವರು ಮತ್ತು ಕಮಾಂಡರ್‌ಗಳು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಾವು-ನೋವು: ದಾಳಿಯಲ್ಲಿ ಸುಮಾರು 4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 40,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘೋರ ಘಟನೆ: ಅವರು ಪ್ರಾಥಮಿಕ ಶಾಲೆಯ ಮೇಲೆ ದಾಳಿ ನಡೆಸಿ 175 ಮುಗ್ಧ ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ. ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಇಲಾಯಿ ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕವು ಇರಾನ್‌ನಿಂದ ಬೇಷರತ್ ಶರಣಾಗತಿಯನ್ನು ನಿರೀಕ್ಷಿಸಿತ್ತು. ಆದರೆ ಇರಾನ್ ಬಲಿಯಾಗಲು ಸಿದ್ಧವಿದೆಯೇ ಹೊರತು, ತನ್ನನ್ನು ತಾನು ಅರ್ಪಿಸಿಕೊಳ್ಳಲು ಅಥವಾ ಶರಣಾಗಲು ಎಂದಿಗೂ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ಮೌನಕ್ಕೆ ಪ್ರಶ್ನೆ: ಇಂಧನ ಬಿಕ್ಕಟ್ಟು ಇದ್ದರೂ ಸುಮ್ಮನಿರುವುದೇಕೆ..?

ಯುದ್ಧದಿಂದ ಬಾಧಿತವಾಗಿರುವ ಮತ್ತು ಇಂಧನ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ದೇಶಗಳು ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ ಎಂದು ಇಲಾಹಿ ಪ್ರಶ್ನಿಸಿದ್ದಾರೆ. ಓಮನ್ ಮತ್ತು ಜಿನೀವಾದಲ್ಲಿ ನಡೆದ ಮಾತುಕತೆಗಳು ಪ್ರಗತಿಯಲ್ಲಿದ್ದಾಗ ಹಠಾತ್ ದಾಳಿಗಳನ್ನು ನಡೆಸುವ ಮೂಲಕ ಸಂಧಾನ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ.

ಹೊರ್ಮೋಜ್ ಜಲಸಂಧಿ ಮತ್ತು ಇರಾನ್‌ನ ಪ್ರಸ್ತುತ ಸ್ಥಿತಿ

ಇರಾನ್‌ನಲ್ಲಿ ಜನರು ಭಯಭೀತರಾಗಿಲ್ಲ ಮತ್ತು ದೈನಂದಿನ ಜೀವನವು ಸ್ಥಿರವಾಗಿದೆ ಎಂದು ಇಲಾಹಿ ತಿಳಿಸಿದ್ದಾರೆ.
ಹೊರ್ಮೋಜ್ ಜಲಸಂಧಿ: ಕಳೆದ 10,000 ವರ್ಷಗಳಿಂದ ಹೊರ್ಮೋಜ್ ಜಲಸಂಧಿ ಮುಕ್ತವಾಗಿದೆ. ಇರಾನ್ ಅದರ ಭದ್ರತೆಗಾಗಿ ಪ್ರತಿ ವರ್ಷ ಅಪಾರ ಹಣವನ್ನು ವ್ಯಯಿಸುತ್ತದೆ. ಶತ್ರು ದೇಶಗಳ ಯುದ್ಧನೌಕೆಗಳೂ ಅಲ್ಲಿಂದ ಮುಕ್ತವಾಗಿ ಹಾದು ಹೋಗುತ್ತಿದ್ದವು. ಆದರೆ ಈಗಿನ ಬಿಕ್ಕಟ್ಟಿಗೆ ಅಮೆರಿಕದ ಹಸ್ತಕ್ಷೇಪವೇ ಕಾರಣ ಎಂದು ಪ್ರತಿಪಾದಿಸಿದ್ದಾರೆ.
40 ದಿನಗಳ ಸಂಘರ್ಷದ ನಂತರ ತನ್ನ ಯಾವುದೇ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅರಿವಾದ ನಂತರವೇ ಅಮೆರಿಕ ಕದನ ವಿರಾಮದ ಪ್ರಸ್ತಾಪ ಮಾಡಿದೆ. ಆದರೆ ಇದು ನಿಜವಾದ ಕದನ ವಿರಾಮವಲ್ಲ, ಕೇವಲ ತಾತ್ಕಾಲಿಕ ತಂತ್ರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net