'ನಾವು ಪಾಕಿಸ್ತಾನದ ಭಾಗವಲ್ಲ': ತಾರಕಕ್ಕೇರಿದ PoK ದಂಗೆ; ಇಸ್ಲಾಮಾಬಾದ್‌ಗೆ ಪ್ರತಿಭಟನಾಕಾರರ ಖಡಕ್ ಎಚ್ಚರಿಕೆ! PoK Protests

'ನಾವು ಪಾಕಿಸ್ತಾನದ ಭಾಗವಲ್ಲ': ತಾರಕಕ್ಕೇರಿದ PoK ದಂಗೆ; ಇಸ್ಲಾಮಾಬಾದ್‌ಗೆ ಪ್ರತಿಭಟನಾಕಾರರ ಖಡಕ್ ಎಚ್ಚರಿಕೆ!
'ನಾವು ಪಾಕಿಸ್ತಾನದ ಭಾಗವಲ್ಲ': ತಾರಕಕ್ಕೇರಿದ PoK ದಂಗೆ; ಇಸ್ಲಾಮಾಬಾದ್‌ಗೆ ಪ್ರತಿಭಟನಾಕಾರರ ಖಡಕ್ ಎಚ್ಚರಿಕೆ!
Published on
ರಾವಲಕೋಟ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK Protests) ಸರ್ಕಾರದ ವಿರುದ್ಧ ನಡೆಯುತ್ತಿರುವ ಸಾರ್ವಜನಿಕರ ದಂಗೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾವು ಯಾವುದೇ ಕಾರಣಕ್ಕೂ ಪಾಕಿಸ್ತಾನದ ಭಾಗವಲ್ಲ ಎಂದು ಬಹಿರಂಗವಾಗಿ ಘೋಷಿಸಿರುವ ಪ್ರತಿಭಟನಾಕಾರರು, ಇಸ್ಲಾಮಾಬಾದ್ ಸರ್ಕಾರವು ತಮಗೆ ಅಗತ್ಯ ಆಹಾರ ಪದಾರ್ಥಗಳ ಪೂರೈಕೆಯನ್ನು ಸ್ಥಗಿತಗೊಳಿಸಿದರೆ, ಬದುಕಲು ನಾವು ಬೇರೆ ದಾರಿಗಳನ್ನು ಹುಡುಕಬೇಕಾಗುತ್ತದೆ ಎಂದು ಪಾಕ್​ಗೆ ಎಚ್ಚರಿಸಿದ್ದಾರೆ.
ಪಿಒಕೆಯ ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ವ್ಯಕ್ತವಾಗಿರುವ ಈ ಆಕ್ರೋಶದ ನುಡಿಗಳು, ಪಾಕಿಸ್ತಾನ ಸರ್ಕಾರದ ವಿರುದ್ಧ ಸ್ಥಳೀಯ ಜನರಲ್ಲಿ ಎಷ್ಟು ಮಟ್ಟಿಗೆ ಹತಾಶೆ ಮತ್ತು ಆಕ್ರೋಶ ಮನೆಮಾಡಿದೆ ಎಂಬುದನ್ನು ಸಾಬೀತುಪಡಿಸಿವೆ.

ಅಗತ್ಯ ವಸ್ತುಗಳಿಲ್ಲದೆ ಕಂಗಾಲಾದ ಜನತೆ

ಕಳೆದ ಕೆಲವು ದಿನಗಳಿಂದ ರಾವಲಕೋಟ್ ಸೇರಿದಂತೆ ಪಿಒಕೆಯ ಹಲವು ಭಾಗಗಳಲ್ಲಿ ಪಡಿತರ ಮತ್ತು ದಿನಸಿ ಸಾಮಗ್ರಿಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಪಾಕಿಸ್ತಾನ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಆಹಾರ ಧಾನ್ಯಗಳ ಸಾಗಣೆಯನ್ನು ತಡೆದು, ಜನಸಾಮಾನ್ಯರಿಗೆ ಸಾಮೂಹಿಕ ಶಿಕ್ಷೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದ್ದಾರೆ.
ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಪಿಒಕೆ ಪ್ರಮುಖ ನಾಯಕ ಸರ್ದಾರ್ ಅಮನ್ ಖಾನ್, ಪಾಕ್​ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಮಗೆ ನಿಮ್ಮ ಪಡಿತರ ಬೇಡ. ನಿಜ ಹೇಳಬೇಕೆಂದರೆ ನಿಮಗೆ ನಮ್ಮ ಅಗತ್ಯವಿದೆ. ಒಂದು ವೇಳೆ ನೀವು ಆಹಾರ ಧಾನ್ಯಗಳ ಸರಬರಾಜನ್ನು ಹೀಗೆಯೇ ಬಂದ್ ಮಾಡಿದರೆ, ನಮ್ಮ ಉಳಿವಿಗಾಗಿ ನಾವು ಬೇರೆ ದೇಶಗಳ ನೆರವು ಹುಡುಕಬೇಕಾಗುತ್ತದೆ ಎಂದು ನೇರವಾಗಿಯೇ ಎಚ್ಚರಿಸಿದ್ದಾರೆ.

ನಿಷೇಧದ ನಡುವೆಯೂ ಮುಂದುವರಿದ ಹೋರಾಟ

ಜಮ್ಮು ಕಾಶ್ಮೀರ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ಈ ಬೃಹತ್ ಆಂದೋಲನ ನಡೆಯುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ಸರ್ಕಾರವು ಈ ಸಂಘಟನೆಯನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ನಿಷೇಧಿಸಿದೆ. ಅದರೆ, ಸರ್ಕಾರದ ನಿಷೇಧ ಮತ್ತು ಬೆದರಿಕೆಗಳಿಗೆ ಕ್ಯಾರೇ ಎನ್ನದ ಜನಸಾಮಾನ್ಯರು ಹಾಗೂ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮುಂದುವರಿಸಿದ್ದಾರೆ.

ಪಾಕ್ ರಕ್ಷಣಾ ಸಚಿವನ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯು ಈ ದಂಗೆಯ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ. ರಾವಲಕೋಟ್ ಮತ್ತು ಮಿರ್ಪುರ್ ನಿವಾಸಿಗಳು ಅಸಲಿ ಕಾಶ್ಮೀರಿಗಳೇ ಅಲ್ಲ ಎಂದು ಆಸಿಫ್ ಹೇಳಿದ್ದರು. ಈ ಹೇಳಿಕೆ ಇಡೀ ಪಿಒಕೆ ಭಾಗದಲ್ಲಿ ಕಿಚ್ಚು ಹಚ್ಚಿದ್ದು, ಇಸ್ಲಾಮಾಬಾದ್ ಆಡಳಿತಗಾರರು ಮತ್ತು ಕಾಶ್ಮೀರಿ ನಾಯಕರ ನಡುವಿನ ಬಿರುಕನ್ನು ಮತ್ತಷ್ಟು ದೊಡ್ಡದಾಗಿಸಿದೆ.

ಉಗ್ರ ನಿಗ್ರಹ ಕಾಯ್ದೆಯ ದುರ್ಬಳಕೆ?

ಸ್ಥಳೀಯ ಮೂಲಗಳ ಪ್ರಕಾರ, ಪಿಒಕೆಯಲ್ಲಿ ಆರಂಭವಾಗಿರುವುದು ಕೇವಲ ಆರ್ಥಿಕ ಬಿಕ್ಕಟ್ಟು ಮತ್ತು ಆಡಳಿತ ವೈಫಲ್ಯದ ವಿರುದ್ಧದ ಹೋರಾಟ. ಆದರೆ, ಇಸ್ಲಾಮಾಬಾದ್ ಸರ್ಕಾರವು ಇದನ್ನು ರಾಷ್ಟ್ರೀಯ ಭದ್ರತೆಗೆ ಇರುವ ಭೀತಿ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ. ಆಹಾರ ಧಾನ್ಯಗಳ ಕೊರತೆಯನ್ನು ಸೃಷ್ಟಿಸಿ, ಜನರ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ಕುತಂತ್ರ ನಡೆಸುತ್ತಿದೆ ಎಂದು ಹೋರಾಟಗಾರರು ದೂರಿದ್ದಾರೆ.
ಪ್ರತಿಭಟನೆಯ ಮುಂಚೂಣಿಯಲ್ಲಿರುವ ಸರ್ದಾರ್ ಅಮನ್ ಖಾನ್ ಸೇರಿದಂತೆ ಅವಾಮಿ ಆಕ್ಷನ್ ಕಮಿಟಿಯ ಪ್ರಮುಖ ನಾಯಕರ ವಿರುದ್ಧ ಪಾಕ್ ಸರ್ಕಾರ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಿದೆ. ಬೆಲೆ ಏರಿಕೆ ಇಳಿಕೆ, ಉತ್ತಮ ಆಡಳಿತ ಮತ್ತು ಅಗತ್ಯ ವಸ್ತುಗಳ ನಿರಂತರ ಪೂರೈಕೆಗೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವವರನ್ನು ಜೈಲಿಗಟ್ಟಲು ಸರ್ಕಾರ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇಂಟರ್ನೆಟ್ ಕಡಿತ, ಜಗತ್ತಿಗೆ ಮಾಹಿತಿ ಸಿಗದಂತೆ ಸಂಚು!

ಪ್ರತಿಭಟನೆಯ ತೀವ್ರತೆ ಹೊರಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಜೂನ್ ಆರಂಭದಿಂದಲೇ ಪಿಒಕೆಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಪ್ರತಿಭಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದನ್ನು ತಡೆಯಲು ಪಾಕಿಸ್ತಾನ ಸರ್ಕಾರ ಸಂವಹನ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

22ಕ್ಕೂ ಹೆಚ್ಚು ಜನರ ಸಾವು, ಸ್ಮಶಾನ ಸದೃಶವಾದ ಕಣಿವೆ

ಕಳೆದ ಎರಡು ವಾರಗಳಿಂದ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಇಡೀ ಕಾಶ್ಮೀರ ಕಣಿವೆ ತತ್ತರಿಸಿಹೋಗಿದೆ. ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ಆಹಾರವಿಲ್ಲದೆ ಪರದಾಡುವಂತಾಗಿದೆ. ಅಧಿಕಾರಿಗಳ ಅಧಿಕೃತ ಮಾಹಿತಿಯ ಪ್ರಕಾರ, ಭದ್ರತಾ ಪಡೆಗಳ ಹಿಂಸಾತ್ಮಕ ದಮನ ನೀತಿಗೆ ಹಾಗೂ ನಡೆದ ಘರ್ಷಣೆಗಳಲ್ಲಿ ಇದುವರೆಗೆ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ. ಪರಿಸ್ಥಿತಿ ದಿನದಿಂದ ದಿನಕ್ಕೆ ನಿಯಂತ್ರಣ ತಪ್ಪುತ್ತಿದ್ದು, ಪಾಕಿಸ್ತಾನದ ವಿರುದ್ಧದ ಈ ಆಕ್ರೋಶ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net