ಬಂಕರ್ ಬಿಟ್ಟು ಹೊರಬಂದಿದ್ದೇ ಖಮೇನಿ ಮಾಡಿದ ಮಹಾ ಪ್ರಮಾದವೇ? ಅಮೆರಿಕ ಹೆಣೆದಿದ್ದ 'ಡೆತ್ ಟ್ರ್ಯಾಪ್​ನ ಭಯಾನಕ ಸ್ಟೋರಿ..! Khamenei Death

ಬಂಕರ್ ಬಿಟ್ಟು ಹೊರಬಂದಿದ್ದೇ ಖಮೇನಿ ಮಾಡಿದ ಮಹಾ ಪ್ರಮಾದವೇ? ಅಮೆರಿಕ ಹೆಣೆದಿದ್ದ 'ಡೆತ್ ಟ್ರ್ಯಾಪ್​ನ ಭಯಾನಕ ಸ್ಟೋರಿ..!
ಬಂಕರ್ ಬಿಟ್ಟು ಹೊರಬಂದಿದ್ದೇ ಖಮೇನಿ ಮಾಡಿದ ಮಹಾ ಪ್ರಮಾದವೇ? ಅಮೆರಿಕ ಹೆಣೆದಿದ್ದ 'ಡೆತ್ ಟ್ರ್ಯಾಪ್​ನ ಭಯಾನಕ ಸ್ಟೋರಿ..!
Published on
ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ(Khamenei Death) ಖಮೇನಿಯ ಹತ್ಯೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಆದರೆ, ಈ ಜಂಟಿ ವೈಮಾನಿಕ ದಾಳಿಯು ಆಕಸ್ಮಿಕವಾಗಿತ್ತೇ ಅಥವಾ ಇರಾನ್ ತನ್ನ ಶತ್ರುಗಳ ಸಂಕೇತಗಳನ್ನು ಓದುವಲ್ಲಿ ಸೋತಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಾಚರಣೆಗೂ ಮುನ್ನ ಮೂರು ಪ್ರಮುಖ ಎಚ್ಚರಿಕೆಗಳನ್ನು ನೀಡಿದ್ದರು. ಆದರೂ ಇರಾನ್ ಅವುಗಳನ್ನು ನಿರ್ಲಕ್ಷಿಸಿತ್ತು ಎಂಬ ಆಘಾತಕಾರಿ ಸತ್ಯ ಈಗ ಬಯಲಾಗಿದೆ.

ಸಿಗ್ನಲ್ 1: ಆಡಳಿತ ಬದಲಾವಣೆಯೇ ಉತ್ತಮ - ಟ್ರಂಪ್ ನೇರ ಎಚ್ಚರಿಕೆ

ಫೆಬ್ರವರಿ 13ರಂದು ನಡೆದ ಮಿಲಿಟರಿ ಕಾರ್ಯಕ್ರಮವೊಂದರಲ್ಲಿ, ಇರಾನ್‌ನಲ್ಲಿ ಆಡಳಿತ ಬದಲಾವಣೆಯನ್ನು ನೀವು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಟ್ರಂಪ್, ಅದೇ ಎಲ್ಲಕ್ಕಿಂತ ಉತ್ತಮವಾದ ಕೆಲಸ ಎಂದು ತೋರುತ್ತದೆ ಎಂದು ಉತ್ತರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಮೆರಿಕ ತನ್ನ ಇತಿಹಾಸದಲ್ಲೇ ಅತಿದೊಡ್ಡ ಮಿಲಿಟರಿ ನಿಯೋಜನೆಯನ್ನು ಮಧ್ಯಪ್ರಾಚ್ಯದಲ್ಲಿ ಮಾಡಿತು. 2003ರ ನಂತರ ಮೊದಲ ಬಾರಿಗೆ USS ಜೆರಾಲ್ಡ್ ಫೋರ್ಡ್ ಮತ್ತು USS ಅಬ್ರಹಾಂ ಲಿಂಕನ್ ಯುದ್ಧನೌಕೆಗಳು ಸಮುದ್ರಕ್ಕಿಳಿದವು. ಜಿನೀವಾದಲ್ಲಿ ಶಾಂತಿ ಮಾತುಕತೆ ನಡೆಯುತ್ತಿದ್ದರೂ, ತೆರೆಮರೆಯಲ್ಲಿ ಅಮೆರಿಕ 150 ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತ್ತು.

ಸಿಗ್ನಲ್ 2: ನಾಯಕತ್ವವನ್ನೇ ಗುರಿಯಾಗಿಸುವ ಬಹಿರಂಗ ಚರ್ಚೆ

ಫೆಬ್ರವರಿ 19ರಂದು ವಾಲ್ ಸ್ಟ್ರೀಟ್ ಜರ್ನಲ್ ವರದಿಯೊಂದು ಬಾಂಬ್ ಸಿಡಿಸಿತ್ತು. ಅಮೆರಿಕವು ಇರಾನ್‌ನ ಕೇವಲ ಪರಮಾಣು ಕೇಂದ್ರಗಳನ್ನಲ್ಲ, ಬದಲಾಗಿ ಅಲ್ಲಿನ ಉನ್ನತ ನಾಯಕರನ್ನೇ ಗುರಿಯಾಗಿಸಲು ಯೋಜಿಸುತ್ತಿದೆ ಎಂದು ವರದಿ ಮಾಡಿತ್ತು. ಇರಾನ್‌ನ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಅವರಿಗೆ ಈ ಅಪಾಯದ ಅರಿವಿತ್ತು. ಆದರೆ, ಇರಾನ್‌ನ ವಿದೇಶಾಂಗ ಸಚಿವರು ಮಾತುಕತೆ ಯಶಸ್ವಿಯಾಗುತ್ತಿದೆ ಎಂಬ ಭ್ರಮೆಯಲ್ಲಿದ್ದರು. ಅಮೆರಿಕ ಒಂದೆಡೆ ರಾಜತಾಂತ್ರಿಕತೆಯ ನಾಟಕವಾಡುತ್ತಾ, ಇನ್ನೊಂದೆಡೆ ಖಮೇನಿಯ ಪ್ರತಿ ಚಲನವಲನವನ್ನು ಟ್ರ್ಯಾಕ್ ಮಾಡುತ್ತಿತ್ತು.

ಸಿಗ್ನಲ್ 3: ಖಮೇನಿ ಅವರಿಗಿದ್ದ ಆ ಮರಣದ ಮುನ್ಸೂಚನೆ

ಖುದ್ದು ಖಮೇನಿ ಅವರಿಗೂ ತಮ್ಮ ಅಂತ್ಯ ಹತ್ತಿರವಿದೆ ಎಂಬ ಸುಳಿವು ಸಿಕ್ಕಿತ್ತು ಎನ್ನಲಾಗಿದೆ. ಮೂಲಗಳ ಪ್ರಕಾರ, ಅವರು ತಮ್ಮ ಉತ್ತರಾಧಿಕಾರಿಯನ್ನು ನೇಮಿಸಲು ಮತ್ತು ಸಂಭವನೀಯ ಹತ್ಯೆಯ ಪ್ರಯತ್ನಗಳಿಗೆ ಸಿದ್ಧರಾಗಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯು ಅವರ ವಾಸಸ್ಥಳವನ್ನು ಬದಲಿಸುವಂತೆ ಮತ್ತು ಸುರಕ್ಷಿತ ಬಂಕರ್‌ಗೆ ತೆರಳುವಂತೆ ಸಲಹೆ ನೀಡಿತ್ತು. ಆದರೆ, ಖಮೇನಿಯು ಎಲ್ಲವೂ ಸಹಜವಾಗಿರಲಿ ಎಂಬ ಹಠಕ್ಕೆ ಬಿದ್ದು ಸುರಕ್ಷಿತ ಲವಿಜನ್ ಬಂಕರ್‌ಗೆ ತೆರಳಲು ನಿರಾಕರಿಸಿದ್ದರು. ಅವರ ಈ ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಯಿತು.

ಅಮೆರಿಕ-ಇಸ್ರೇಲ್ ನಡೆಸಿದ ಆ ಮಹಾ ವಂಚನೆ

ಈ ಕಾರ್ಯಾಚರಣೆಯು ಕೇವಲ ದಾಳಿಯಾಗಿರಲಿಲ್ಲ, ಅದೊಂದು ಅತ್ಯಂತ ವ್ಯವಸ್ಥಿತ ಮೋಸದ ಆಟವಾಗಿತ್ತು. ದಾಳಿಯ ಹಿಂದಿನ ರಾತ್ರಿ ಇಸ್ರೇಲಿ ಅಧಿಕಾರಿಗಳು ಯಾವುದೇ ಸಂಶಯ ಬಾರದಂತೆ ತಮ್ಮ ಕಚೇರಿಗಳಿಂದ ಹೊರಬಂದು ಶಬ್ಬತ್ ಭೋಜನಕ್ಕೆ ತೆರಳಿದ್ದರು. ಅಮೆರಿಕದ ಸಿಐಎ ತಿಂಗಳುಗಳಿಂದ ಖಮೇನಿಯ ಚಲನವಲನವನ್ನು ಗಮನಿಸುತ್ತಿತ್ತು. ಮೊದಲು ರಾತ್ರಿ ವೇಳೆ ದಾಳಿ ಮಾಡಲು ಯೋಜಿಸಲಾಗಿತ್ತು, ಆದರೆ ಖಮೇನಿ ಅವರು ಬೆಳಿಗ್ಗೆ ಮೀಟಿಂಗ್ ಕರೆದಿದ್ದಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ದಾಳಿಯ ಸಮಯವನ್ನು ಬದಲಿಸಲಾಯಿತು. ಫೆಬ್ರವರಿ 28ರ ಬೆಳಿಗ್ಗೆ 9:40ಕ್ಕೆ ತೆಹ್ರಾನ್ ಮೇಲೆ ಮಿಸೈಲ್‌ಗಳು ಅಪ್ಪಳಿಸಿದಾಗ ಖಮೇನಿ ಅವರ ಅಧ್ಯಾಯ ಅಂತ್ಯವಾಗಿತ್ತು.

ಉತ್ತರವಿಲ್ಲದ ಪ್ರಶ್ನೆ: ಇರಾನ್ ಸುಮ್ಮನಿದ್ದದ್ದೇಕೆ..?

ಯುದ್ಧ ವಿಮಾನಗಳ ನಿಯೋಜನೆ ಕಣ್ಣಿಗೆ ಕಾಣಿಸುತ್ತಿತ್ತು, ಮಾಧ್ಯಮಗಳಲ್ಲಿ ನಾಯಕರ ಹತ್ಯೆಯ ವರದಿ ಬರುತ್ತಿತ್ತು, ಸ್ವತಃ ಗುಪ್ತಚರ ಇಲಾಖೆ ಎಚ್ಚರಿಸಿತ್ತು. ಇಷ್ಟೆಲ್ಲಾ ಇದ್ದರೂ ಖಮೇನಿ ಯಾಕೆ ಸುರಕ್ಷಿತ ಬಂಕರ್‌ಗೆ ಹೋಗಲಿಲ್ಲ. ಇದು ಅತಿಯಾದ ಆತ್ಮವಿಶ್ವಾಸವೇ ಅಥವಾ ಅಮೆರಿಕ ಮಾತುಕತೆಯ ಹೆಸರಿನಲ್ಲಿ ತನ್ನನ್ನು ಕೊಲ್ಲುವುದಿಲ್ಲ ಎಂಬ ನಂಬಿಕೆಯೇ ಎಂಬ ಈ ಪ್ರಶ್ನೆಗಳಿಗೆ ಉತ್ತರ ಈಗ ಇತಿಹಾಸದ ಪುಟಗಳಲ್ಲಿ ಹೂತುಹೋಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net