ಸಿಂಧೂ ನದಿ ನೀರು ತಡೆದರೆ ಅಣುಬಾಂಬ್ ದಾಳಿ ಎಚ್ಚರಿಕೆ: ಭಾರತದ ವಿರುದ್ಧ ಪಾಕ್​ ನಾಯಕ ಬಿಲಾವಲ್ ಭುಟ್ಟೋ ಉದ್ಧಟತನದ ಹೇಳಿಕೆ! Bilawal Bhutto

ಸಿಂಧೂ ನದಿ ನೀರು ತಡೆದರೆ ಅಣುಬಾಂಬ್ ದಾಳಿ ಎಚ್ಚರಿಕೆ: ಭಾರತದ ವಿರುದ್ಧ ಪಾಕ್​ ನಾಯಕ ಬಿಲಾವಲ್ ಭುಟ್ಟೋ ಉದ್ಧಟತನದ ಹೇಳಿಕೆ!
ಸಿಂಧೂ ನದಿ ನೀರು ತಡೆದರೆ ಅಣುಬಾಂಬ್ ದಾಳಿ ಎಚ್ಚರಿಕೆ: ಭಾರತದ ವಿರುದ್ಧ ಪಾಕ್​ ನಾಯಕ ಬಿಲಾವಲ್ ಭುಟ್ಟೋ ಉದ್ಧಟತನದ ಹೇಳಿಕೆ!
Published on
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (Indus Waters Treaty) ಬಿಕ್ಕಟ್ಟು ಈಗ ತಾರಕಕ್ಕೇರಿದೆ. ಈ ವಿಷಯದಲ್ಲಿ ಪಾಕಿಸ್ತಾನದ ಪ್ರಮುಖ ರಾಜಕೀಯ ನಾಯಕ ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ(Bilawal Bhutto) ಭಾರತದ ವಿರುದ್ಧ ಮತ್ತೊಮ್ಮೆ ವಿಷ ಕಾರಿದ್ದಾರೆ. ಭಾರತ ಏನಾದರೂ ಸಿಂಧೂ ನದಿಯ ನೀರನ್ನು ತಡೆದರೆ, ಪಾಕಿಸ್ತಾನವು ತನ್ನ ಪರಮಾಣು ನೀತಿಯನ್ನು ಬಳಸಬೇಕಾಗುತ್ತದೆ ಎಂದು ಹೇಳುವ ಮೂಲಕ ಅಣುಬಾಂಬ್ ದಾಳಿಯ ಉದ್ಧಟತನದ ಬೆದರಿಕೆ ಹಾಕಿದ್ದಾರೆ.
ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದ ಜರ್ದಾರಿ, ಸಿಂಧೂ ನದಿ ನೀರಿನ ಬಿಕ್ಕಟ್ಟನ್ನು ಕೇವಲ ಪರಿಸರ ಅಥವಾ ರಾಜತಾಂತ್ರಿಕ ವಿಷಯವಾಗಿ ನೋಡಲು ಸಾಧ್ಯವಿಲ್ಲ, ಇದು ಪಾಕಿಸ್ತಾನದ ಉಳಿವು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಗುಡುಗಿದ್ದಾರೆ.

ಪರಮಾಣು ನೀತಿ ನೆನಪಿಸಿದ ಬಿಲಾವಲ್!

ವಿಚಾರಸಂಕಿರಣದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬಿಲಾವಲ್ ಭುಟ್ಟೋ, ಪಾಕ್​ ಪರಮಾಣು ನೀತಿಯನ್ನು ಜಗತ್ತಿಗೆ ನೆನಪಿಸಲು ಪ್ರಯತ್ನಿಸಿದರು. ಪಾಕಿಸ್ತಾನದ ನ್ಯೂಕ್ಲಿಯರ್ ನೀತಿಯ ಪ್ರಕಾರ, ದೇಶದ ಆರ್ಥಿಕತೆಯನ್ನು ಉಸಿರುಗಟ್ಟಿಸುವ ಅಥವಾ ಜಲಮಾರ್ಗಗಳನ್ನು ಕಡಿತಗೊಳಿಸುವಂತಹ ಯಾವುದೇ ತೀವ್ರ ಪರಿಸ್ಥಿತಿ ಎದುರಾದರೂ, ಅದನ್ನು ದೇಶದ ಉಳಿವಿಗಾಗಿ ಅತ್ಯಂತ ಅಪರೂಪದ ಸಂದರ್ಭ ಎಂದು ಪರಿಗಣಿಸಿ ಪರಮಾಣು ದಾಳಿ ನಡೆಸಲು ಅವಕಾಶವಿದೆ ಎಂದು ಬಿಲಾವಲ್ ಭುಟ್ಟೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಸಿಂಧೂ ನದಿಯ ನೀರನ್ನು ಸಂಪೂರ್ಣವಾಗಿ ಬಂದ್ ಮಾಡುವುದು ಜಾಗತಿಕ ವಿನಾಶದ ಸನ್ನಿವೇಶಕ್ಕೆ ಸಮನಾಗಿದ್ದರೆ, ಪಾಕಿಸ್ತಾನವು ಇದನ್ನು ಕೇವಲ ಪರಿಸರ ಸಮಸ್ಯೆಯಾಗಿ ನೋಡುವುದಿಲ್ಲ. ಬದಲಿಗೆ ಇದನ್ನು ದೇಶದ ಮೇಲಿನ ನೇರ ಸೇನಾ ದಾಳಿ ಎಂದು ಪರಿಗಣಿಸಿ ಒಟ್ಟಾಗಿ ಮಿಲಿಟರಿ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂದು ಭುಟ್ಟೋ ಎಚ್ಚರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಪರಮಾಣು ನೀತಿಯ ವ್ಯತ್ಯಾಸವೇನು?

ಭಾರತವು ಮೊದಲು ಪರಮಾಣು ಅಸ್ತ್ರ ಬಳಸುವುದಿಲ್ಲ ಎಂಬ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ. ಆದರೆ ಪಾಕಿಸ್ತಾನಕ್ಕೆ ಇಂತಹ ಯಾವುದೇ ನೀತಿ ಇಲ್ಲ. ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ಅನಿಸಿದರೆ ಯಾವುದೇ ಕ್ಷಣದಲ್ಲಿ ಮೊದಲು ಪರಮಾಣು ದಾಳಿ ನಡೆಸುವ ಆಯ್ಕೆಯನ್ನು ಅದು ಮುಕ್ತವಾಗಿಟ್ಟುಕೊಂಡಿದೆ. ಇದನ್ನೇ ಬಿಲಾವಲ್ ಈಗ ಅಸ್ತ್ರವಾಗಿ ಬಳಸುತ್ತಿದ್ದಾರೆ.

ನದಿನೀರು ಭಾರತದ ಕೈಯಲ್ಲಿರುವ ಆಯುಧವಲ್ಲ

ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರವು 1960 ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಭಾರತದ ಈ ಕಠಿಣ ನಡೆಯಿಂದ ಪಾಕಿಸ್ತಾನ ಕಂಗಾಲಾಗಿದೆ. ಏಕೆಂದರೆ ಪಾಕಿಸ್ತಾನದ ಶೇ. 80 ರಷ್ಟು ಕೃಷಿ ಭೂಮಿ ಈ ಸಿಂಧೂ ನದಿ ವ್ಯವಸ್ಥೆಯನ್ನೇ ನಂಬಿಕೊಂಡಿದೆ.
ಭಾರತವು ನೀರನ್ನು ನಮ್ಮ ವಿರುದ್ಧ ಒತ್ತಡ ಹೇರುವ ಆಯುಧವಾಗಿ ಬಳಸುತ್ತಿದೆ. ಆದರೆ ಸಿಂಧೂ ನದಿ ಭಾರತದ ಕೈಯಲ್ಲಿರುವ ಆಟದ ವಸ್ತುವಲ್ಲ, ಅದು ಪಾಕಿಸ್ತಾನದ ಜೀವನಾಡಿ. ಸಿಂಧೂ ನದಿಯನ್ನು ನಮ್ಮ ಕುತ್ತಿಗೆಗೆ ಉರುಳನ್ನಾಗಿ ಮಾಡಲು ಹೊರಟರೆ ನಾವು ಸುಮ್ಮನಿರುವುದಿಲ್ಲ. ನಾವು ಶಾಂತಿಯನ್ನು ಬಯಸುತ್ತೇವೆ, ಆದರೆ ಅದು ಗೌರವಯುತವಾಗಿರಬೇಕು. ಪಾಕಿಸ್ತಾನವು ತನ್ನ ನೀರು, ಜನ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಸಿದ್ಧವಾಗಿದೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ.

ಕಳೆದ ವರ್ಷವೂ ರಕ್ತದ ಹೊಳೆ ಹರಿಸುವ ಮಾತನಾಡಿದ್ದ ಬಿಲಾವಲ್!

ಬಿಲಾವಲ್ ಭುಟ್ಟೋ ಭಾರತದ ವಿರುದ್ಧ ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ 2025 ರ ಏಪ್ರಿಲ್‌ನಲ್ಲಿ ಭಾರತವು ಒಪ್ಪಂದವನ್ನು ಅಮಾನತುಗೊಳಿಸಿದ ತಕ್ಷಣವೇ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಸಿಂಧೂ ನದಿ ನಮ್ಮದು ಮತ್ತು ಅದು ಎಂದಿಗೂ ನಮ್ಮದಾಗಿಯೇ ಇರುತ್ತದೆ. ಒಂದೋ ಅದರಲ್ಲಿ ನಮ್ಮ ನೀರು ಹರಿಯಬೇಕು, ಇಲ್ಲದಿದ್ದರೆ ಭಾರತೀಯರ ರಕ್ತ ಹರಿಯಬೇಕು ಎಂದು ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಯುದ್ಧದ ವಾತಾವರಣ ಸೃಷ್ಟಿಸುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ಮಾಡಲು ಯತ್ನಿಸಿದ್ದರು.
ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು, ತನ್ನ ಆಂತರಿಕ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮತ್ತು ದೇಶದ ಜನರಲ್ಲಿ ಭಾರತದ ವಿರುದ್ಧ ದ್ವೇಷ ಬಿತ್ತಲು ಇಂತಹ ಪರಮಾಣು ಯುದ್ಧದ ವದಂತಿ ಹಾಗೂ ಬೆದರಿಕೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net