ಒಂದು ಬೆಳಕಿನ ದಿನ ದೂರಕ್ಕೆ ವಾಯೇಜರ್-1

ಮಾನವನ ತಂತ್ರಜ್ಞಾನ ಮತ್ತು ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ನಾಸಾದ ವಾಯೇಜರ್-1 ಬಾಹ್ಯಾಕಾಶ ನೌಕೆ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಸುಮಾರು 49 ವರ್ಷಗಳ ಸುದೀರ್ಘ ಪಯಣದ ಬಳಿಕ ಈ ನೌಕೆ ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರವನ್ನು ಕ್ರಮಿಸಿದೆ. ಮಾನವ ನಿರ್ವಿುತ ಯಾವುದೇ ನೌಕೆ ಈವರೆಗೆ ಕ್ರಮಿಸದಷ್ಟು ದೂರವನ್ನು ವಾಯೇಜರ್-1 ತಲುಪಿದೆ. ನ. 18ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.46ಕ್ಕೆ ವಾಯೇಜರ್-1 ಈ ಸಾಧನೆ ಮಾಡಿದೆ.
ಒಂದು ಬೆಳಕಿನ ದಿನ ದೂರಕ್ಕೆ ವಾಯೇಜರ್-1
WEB
Published on: 

ವಾಷಿಂಗ್ಟನ್: ಮಾನವನ ತಂತ್ರಜ್ಞಾನ ಮತ್ತು ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ನಾಸಾದ ವಾಯೇಜರ್-1 ಬಾಹ್ಯಾಕಾಶ ನೌಕೆ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಸುಮಾರು 49 ವರ್ಷಗಳ ಸುದೀರ್ಘ ಪಯಣದ ಬಳಿಕ ಈ ನೌಕೆ ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರವನ್ನು ಕ್ರಮಿಸಿದೆ. ಮಾನವ ನಿರ್ವಿುತ ಯಾವುದೇ ನೌಕೆ ಈವರೆಗೆ ಕ್ರಮಿಸದಷ್ಟು ದೂರವನ್ನು ವಾಯೇಜರ್-1 ತಲುಪಿದೆ. ನ. 18ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.46ಕ್ಕೆ ವಾಯೇಜರ್-1 ಈ ಸಾಧನೆ ಮಾಡಿದೆ.

ಭೂಮಿಯಿಂದ ಸುಮಾರು 25,900 ಕೋಟಿ ಕಿ.ಮೀ. ದೂರದಲ್ಲಿರುವ ಈ ನೌಕೆಯೊಂದಿಗೆ ಸಂಪರ್ಕ ಸಾಧಿಸುವುದೂ ಈಗ ದೊಡ್ಡ ಸವಾಲಾಗಿದೆ. ಭೂಮಿಯಿಂದ ಕಳುಹಿಸುವ ರೇಡಿಯೊ ಸಂಕೇತ ನೌಕೆಯನ್ನು ತಲುಪಲು 24 ಗಂಟೆ ಬೇಕು. ಅಲ್ಲಿಂದ ಪ್ರತಿಕ್ರಿಯೆ ಮರಳಿ ಭೂಮಿಗೆ ಬರಲು ಮತ್ತೊಂದು 24 ಗಂಟೆ ಬೇಕಾಗುತ್ತದೆ. ಅಂದರೆ ಒಂದು ಸಂದೇಶ ಕಳುಹಿಸಿ ಉತ್ತರ ಪಡೆಯಲು ಕನಿಷ್ಠ ಎರಡು ದಿನ ಕಾಯಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

ಈಗ ಗ್ಲೀಸೆ-445 ನಕ್ಷತ್ರದತ್ತ ಪಯಣ

ವಾಯೇಜರ್-1 ಈಗ ಗ್ಲೀಸೆ-445 ಎಂಬ ನಕ್ಷತ್ರದ ದಿಕ್ಕಿನಲ್ಲಿ ಸಾಗುತ್ತಿದೆ. ಈ ನಕ್ಷತ್ರದ ಸಮೀಪಕ್ಕೆ ತಲುಪಲು ಸುಮಾರು 40 ಸಾವಿರ ವರ್ಷಗಳು ಬೇಕಾಗಬಹುದು. ಆಗಲೂ ನಕ್ಷತ್ರದಿಂದ ಸುಮಾರು 1.7 ಬೆಳಕಿನ ವರ್ಷಗಳಷ್ಟು ದೂರ ಇರಲಿದೆ.

1977ರಲ್ಲಿ ಆರಂಭವಾದ ಪಯಣ

1977ರ ಸೆಪ್ಟೆಂಬರ್ 5ರಂದು ವಾಯೇಜರ್-1 ಉಡಾವಣೆಯಾಗಿತ್ತು. ಸೌರವ್ಯೂಹದ ಹೊರಗಿನ ಗ್ರಹಗಳ ಅಧ್ಯಯನ ಇದರ ಪ್ರಮುಖ ಉದ್ದೇಶವಾಗಿತ್ತು. 1979ರಲ್ಲಿ ಗುರು ಗ್ರಹ, 1980ರಲ್ಲಿ ಶನಿ ಗ್ರಹ ಸಮೀಪ ಹಾದುಹೋದ ವಾಯೇಜರ್, ಅಲ್ಲಿನ ಉಪಗ್ರಹಗಳು, ಉಂಗುರಗಳು ಹಾಗೂ ವಾತಾವರಣದ ಕುರಿತು ಮಹತ್ವದ ಮಾಹಿತಿಯನ್ನು ಭೂಮಿಗೆ ರವಾನಿಸಿತ್ತು.

ಅನ್ಯಗ್ರಹ ಜೀವಿಗಳಿಗೆ ಕನ್ನಡದಲ್ಲಿ ಸಂದೇಶ

ವಾಯೇಜರ್-1 ನೌಕೆಯಲ್ಲಿರುವ ಚಿನ್ನದ ಲೇಪನದ ‘ಗೋಲ್ಡನ್ ರೆಕಾರ್ಡ್’ನಲ್ಲಿ ಭಾರತದ ಸಂಸ್ಕೃತಿ, ಸಂಗೀತ ಮತ್ತು ಭಾಷೆಗಳಿಗೂ ವಿಶೇಷ ಸ್ಥಾನವಿದೆ. ಕನ್ನಡ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿನ ಶುಭಾಶಯಗಳು, ಗೋವಾದ ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ ಕೇಸರಬಾಯಿ ಕರ್ಕರ್ ಅವರ ಭೈರವಿ ರಾಗ ಹಾಗೂ ತಾಜ್​ವುಹಲ್​ನ ಚಿತ್ರವೂ ಈ ದಾಖಲೆಯಲ್ಲಿವೆ. ಭವಿಷ್ಯದಲ್ಲಿ ಬೇರೆ ಗ್ರಹಗಳ ಜೀವಿಗಳು ಈ ನೌಕೆಯನ್ನು ಪತ್ತೆಹಚ್ಚಿದರೆ, ಭೂಮಿಯ ಜನಜೀವನ ಮತ್ತು ನಾಗರಿಕತೆಯ ಪರಿಚಯ ಮಾಡಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ. 115 ಚಿತ್ರಗಳು, ಪ್ರಕೃತಿಯ ಶಬ್ದಗಳು, ವಿವಿಧ ದೇಶಗಳ ಸಂಗೀತ ಹಾಗೂ 55 ಭಾಷೆಗಳಲ್ಲಿನ ಶುಭಾಶಯಗಳಿವೆ. ಗಾಳಿ, ಮಳೆ, ಗುಡುಗು, ಪಕ್ಷಿಗಳ ಕಲರವ, ಪ್ರಾಣಿಗಳ ಕೂಗು ಸೇರಿದಂತೆ ಭೂಮಿಯ ನೈಸರ್ಗಿಕ ಶಬ್ದಗಳನ್ನೂ ದಾಖಲಿಸಲಾಗಿದೆ. ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಶುಭಾಶಯಗಳನ್ನು ದಾಖಲಿಸಲಾಗಿದೆ.

ಒಂದು ಬೆಳಕಿನ ದಿನ ಎಂದರೇನು?

ಬೆಳಕು ಪ್ರತಿ ಸೆಕೆಂಡ್​ಗೆ ಸುಮಾರು 3 ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಈ ವೇಗದಲ್ಲಿ 24 ಗಂಟೆಗಳಲ್ಲಿ ಕ್ರಮಿಸುವ ದೂರವೇ ಒಂದು ಬೆಳಕಿನ ದಿನ. ಇದು ಸುಮಾರು 25.9 ಶತಕೋಟಿ ಕಿ.ಮೀ. ಆಗುತ್ತದೆ.