ಇಸ್ರೇಲ್ ಚುನಾವಣೆಯ ಮತ ಎಣಿಕೆ ಮುಕ್ತಾಯ; ಬಹುಮತ ಪಡೆಯದ ಪ್ರಧಾನಿ ನೆತನ್ಯಾಹು ಪಕ್ಷ: ಕಿಂಗ್​ ಮೇಕರ್​​ಗಳಾದ ಅರಬ್ ಪಕ್ಷಗಳು | Israel Election

ಅ. 27ರಂದು ನಡೆದ ಇಸ್ರೇಲ್ ಸಂಸತ್ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, 120 ಸದಸ್ಯರ ಬಲದ 'ನೆಸೆಟ್' (ಇಸ್ರೇಲ್ ಸಂಸತ್ತು)ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷವೂ ಬಹುಮತ ಪಡೆಯಲು ವಿಫಲವಾಗಿದೆ. ಮತ್ತು ಅರಬ್ ಪಕ್ಷಗಳು 19 ಸ್ಥಾನ ಪಡೆದು ಕಿಂಗ್​ ಮೇಕರ್​​ಗಳಾಗಿವೆ ಎಂದು ಇಸ್ರೇಲ್​ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಚುನಾವಣೆಯ ಮತ ಎಣಿಕೆ ಮುಕ್ತಾಯ; ಬಹುಮತ ಪಡೆಯದ ಪ್ರಧಾನಿ ನೆತನ್ಯಾಹು ಪಕ್ಷ: ಕಿಂಗ್​ ಮೇಕರ್​​ಗಳಾದ ಅರಬ್ ಪಕ್ಷಗಳು | Israel Election
Published on: 

ಟೆಲ್​ ಅವೀವ್: ಅ. 27ರಂದು ನಡೆದ ಇಸ್ರೇಲ್ ಸಂಸತ್ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, 120 ಸದಸ್ಯರ ಬಲದ 'ನೆಸೆಟ್' (ಇಸ್ರೇಲ್ ಸಂಸತ್ತು)ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷವೂ ಬಹುಮತ ಪಡೆಯಲು ವಿಫಲವಾಗಿದೆ. ಮತ್ತು ಅರಬ್ ಪಕ್ಷಗಳು 19 ಸ್ಥಾನ ಪಡೆದು ಕಿಂಗ್​ ಮೇಕರ್​​ಗಳಾಗಿವೆ ಎಂದು ಇಸ್ರೇಲ್​ ಮಾಧ್ಯಮಗಳು ವರದಿ ಮಾಡಿವೆ.

ಸರ್ಕಾರ ರಚಿಸಲು ಸಂಸತ್​​ನಲ್ಲಿ ಬಹುಮತಕ್ಕೆ ಅಗತ್ಯವಿರುವ 61 ಸ್ಥಾನಗಳನ್ನು ಯಾವುದೇ ರಾಜಕೀಯ ಪಕ್ಷ ಪಡೆದಿಲ್ಲ. ನೆತನ್ಯಾಹು ಅವರ ಬಣವು 53 ಸ್ಥಾನಗಳಲ್ಲಿ ಗೆದ್ದರೆ, ವಿರೋಧ ಪಕ್ಷವು 48 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಅರಬ್ ಪಕ್ಷಗಳು 19 ಸ್ಥಾನಗಳನ್ನು ಗಳಿಸಿವೆ. ಯಾವುದೇ ಪಕ್ಷ ಅಧಿಕಾರ ರಚಿಸಬೇಕಾದ್ರೂ ಅರಬ್ ಪಕ್ಷ ಬೆಂಬಲ ಪಡೆಯಬೇಕಾಗಿದೆ.

ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಲಿಕುಡ್

ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷವೂ, ಡಬಲ್ ಎನ್ವಲಪ್ ಮತಗಳ ಎಣಿಕೆ ಪೂರ್ಣಗೊಂಡ ಬಳಿಕ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವಿರೋಧ ಪಕ್ಷದ ನಾಯಕ ಗಡಿ ಐಸೆನ್‌ಕೋಟ್‌ನ ಯಾಶರ್ 21 ಸ್ಥಾನಗಳನ್ನು ಗೆದ್ದರೆ, ಬಿ'ಯಾಚದ್ 12 ಸ್ಥಾನಗಳನ್ನು ಮತ್ತು ಜೊಯಿಂಟ್ ಲಿಸ್ಟ್ 11 ಸ್ಥಾನಗಳನ್ನು ಪಡೆದರು. ಡೆಮೋಕ್ರಾಟ್‌ಗಳು ಮತ್ತು ರಾಮ್ ತಲಾ ಎಂಟು ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಯುನೈಟೆಡ್ ಟೋರಾ ಜುದಾಯಿಸಂ, ಇಸ್ರೇಲ್ ಬೀಟೈನು ಮತ್ತು ಓಟ್ಜ್ಮಾ ಯೆಹೂದಿತ್ ತಲಾ ಏಳು ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ಶಾಸ್ ಮತ್ತು ಧಾರ್ಮಿಕ ಝಿಯೋನಿಸಂ ತಲಾ ಆರು ಸ್ಥಾನಗಳನ್ನು ಗೆದ್ದಿವೆ.

ಅರಬ್ ಪಕ್ಷಗಳು ಚುನಾವಣೆ ಕದ್ದಿವೆ ಎಂದು ಆರೋಪಿಸಿದ ಲಿಕುಡ್

ಚುನಾವಣೆಯಲ್ಲಿ ಕಿಂಗ್​ ಮೇಕರ್​ಗಳಾಗಿ ಹೊರಹೊಮ್ಮಿರುವ ಅರಬ್ ಪಕ್ಷಗಳ ವಿರುದ್ಧ ಆಡಳಿತರೂಢ ಲಿಕುಡ್ ಪಕ್ಷ ಗಂಭೀರ ಆರೋಪ ಮಾಡಿದ್ದು, ಅಕ್ರಮ ಮತದಾರರ ಕ್ರೋಢೀಕರಣದಿಂದ ಲಾಭ ಪಡೆದಿವೆ. ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಮಾಡಿದ್ದು, ಮತಗಳನ್ನು ಕದಿಯಲಾಗಿದೆ ಎಂದು ಹೇಳಿದೆ.

ಇಸ್ರೇಲ್‌ನ ದೇಶೀಯ ಭದ್ರತಾ ಸಂಸ್ಥೆಯಾದ ಶಿನ್ ಬೆಟ್, ಕತಾರ್ ಮತ್ತು ಟರ್ಕಿಗೆ ಸಂಬಂಧಿಸಿದ ವಿದೇಶಿ ಹಣವನ್ನು ಅರಬ್ ಮತದಾರರ ಮತದಾನದ ಮೇಲೆ ಅಕ್ರಮವಾಗಿ ಪ್ರಭಾವ ಬೀರಲು ಬಳಸಲಾಗಿದೆ ಎಂಬ ಅನುಮಾನಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ (ಏಜೆನ್ಸೀಸ್).