ಬಕ್ರೀದ್ ಬಲಿಪೀಠದಿಂದ ವೈರಲ್​ ಆಗಿದ್ದ 'ಡೊನಾಲ್ಡ್ ಟ್ರಂಪ್' ಎಮ್ಮೆ ರಕ್ಷಣೆ; ಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯಕ್ಕೆ ಶಿಫ್ಟ್

Donald Trump buffalo Bangladesh
Donald Trump buffalo Bangladesh
Published on

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್ ಟ್ರಂಪ್ ಎಂದು ಕರೆಸಿಕೊಂಡಿದ್ದ ಎಮ್ಮೆ ರಾಷ್ಟ್ರೀಯ ಮೃಗಾಲಯಕ್ಕೆ ಶಿಫ್ಟ್
  • ಎಮ್ಮೆಯನ್ನು ಖರೀದಿಸಿ ಮೃಗಾಲಯದಲ್ಲಿ ರಕ್ಷಣೆ ಮಾಡಿದ ಬಾಂಗ್ಲಾದೇಶ ಸರ್ಕಾರ
  • ಸದಾ ಸಿಟ್ಟಿನಿಂದ ಕೂಡಿರುವ ಮತ್ತೊಂದು ಎಮ್ಮೆಗೆ ನೆತನ್ಯಾಹು ಎಂದು ಹೆಸರಿಡಲಾಗಿತ್ತು
Donald Trump buffalo Bangladesh: ಥೇಟ್​​ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ನಂತೆ ಕಾಣುವ ಆಲ್ಬಿನೋ ತಳಿಯ ಬಾಂಗ್ಲಾದೇಶದ ಎಮ್ಮೆಯೊಂದು ಇತ್ತೀಚೆಗೆ ವೈರಲ್ ಆಗಿತ್ತು. ಈದ್ ಉಲ್ ಅಧಾ (ಬಕ್ರೀದ್)ಗಾಗಿ ಮಾರಾಟ ಮಾಡಲು ತರಲಾಗಿದ್ದ ಈ ಎಮ್ಮೆಯನ್ನು ಬಾಂಗ್ಲಾದೇಶ ಸರ್ಕಾರ ರಕ್ಷಿಸಿದೆ. ಸದ್ಯ ಸೆಲಬ್ರೆಟಿ ಎಮ್ಮೆಯನ್ನು ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಸುಮಾರು 700 ಕೆಜಿ ತೂಕದ ಆಲ್ಬಿನೋ ತಳಿಯ ಎಮ್ಮೆಯು ಕೇಶ ವಿನ್ಯಾಸ, ಸಿಡುಕು ಮೂತಿಯನ್ನು ಕಂಡ ಕೆಲವರು ಫೋಟೋ ತೆಗೆದು, ಅದನ್ನು "ಡೊನಾಲ್ಡ್ ಟ್ರಂಪ್ ಎಮ್ಮೆ" ಎಂದು ಕರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಹೆಚ್ಚುತ್ತಿರುವ ಸಾರ್ವಜನಿಕ ಹಿತಾಸಕ್ತಿಯಿಂದ ಬಾಂಗ್ಲಾದ ಸರ್ಕಾರಿ ಅಧಿಕಾರಿಗಳು ಅದನ್ನು ಖರೀದಿ ಮಾಡಿ ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಶಿಫ್ಟ್​ ಮಾಡಿದ್ದಾರೆ. ಆ ಮೂಲಕ ಈ ಎಮ್ಮೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ.
ವೈರಲ್​ ಆಗಿರುವ ಬಿಳಿ ಎಮ್ಮೆಯು ಬಾಂಗ್ಲಾದೇಶದ 38 ವರ್ಷದ ಜಿಯಾ ಉದ್ದೀನ್ ಮೃಧಾ ಎಂಬುವವರಿಗೆ ಸೇರಿದ್ದಾಗಿದೆ. ಈ ಅಪರೂಪದ ಬಿಳಿ ಎಮ್ಮೆ, ಹಬ್ಬದ ಪ್ರಯುಕ್ತ ಮಾರಾಟಕ್ಕಿಟ್ಟಾಗ ಮಾಲೀಕನ ತಮ್ಮ ಇದನ್ನು ಕಂಡಿದ್ದಾರೆ. ಹಳದಿ-ಬಿಳಿ ಕೂದಲಿನ ವಿನ್ಯಾಸವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇರ್‌ಸ್ಟೈಲ್‌ನಂತೆ ಇದ್ದುದರಿಂದ ಎಮ್ಮೆಯ ಫೋಟೋ ಕ್ಲಿಕ್​ ಮಾಡಿ ತಮಾಷೆಗೆ 'ಡೊನಾಲ್ಡ್ ಟ್ರಂಪ್' ಎಂದು ಕರೆದು ಪೋಸ್ಟ್​ ಹಂಚಿಕೊಂಡಿದ್ದ. ವಿಡಂಬನಾತ್ಮಕವಾಗಿ ಪೋಸ್ಟ್​ ಹಂಚಿಕೊಂಡಿದ್ದ ಮಾಹಿತಿಯು ಕೋಟಿಗಟ್ಟಲೇ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿತ್ತು. ಆನಂತರ ಎಮ್ಮೆ ನೋಡಲು ಜನ ಮುಗಿಬಿದ್ದಿದ್ದರು.

ಅಧಿಕಾರಿಗಳು ಏನಂದ್ರು?

ಈ ಎಮ್ಮೆಯನ್ನು ಈದ್ ಹಬ್ಬದ ಬಲಿಗಾಗಿ ಈಗಾಗಲೇ ಗ್ರಾಹಕರೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಆದರೆ, ಇದರ ಸಾರ್ವಜನಿಕ ಕ್ರೇಜ್ ಹೆಚ್ಚಾದ ಕಾರಣ ಮೃಗಾಲಯದ ಅಧಿಕಾರಿಗಳು ಮತ್ತು ಸಚಿವಾಲಯದ ಅಧಿಕಾರಿಗಳು ಮಧ್ಯಪ್ರವೇಶಿಸಿದರು. ಹೆಚ್ಚಿನ ಸಾರ್ವಜನಿಕ ಆಸಕ್ತಿ ಮತ್ತು ಭದ್ರತೆಯ ದೃಷ್ಟಿಯಿಂದ ಈ ಅಪರೂಪದ ಪ್ರಾಣಿಯನ್ನು ಬಲಿ ನೀಡುವುದರಿಂದ ಮುಕ್ತಗೊಳಿಸಲು ಕೊನೆಯ ಕ್ಷಣದಲ್ಲಿ ನಿರ್ಧರಿಸಲಾಯಿತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ಎಮ್ಮೆಯನ್ನು ಮೃಗಾಲಯಕ್ಕೆ ಒಪ್ಪಿಸಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಇಂತಹ ಆಲ್ಬಿನೋ ಎಮ್ಮೆಗಳು ಅತ್ಯಂತ ಅಪರೂಪವಾಗಿದ್ದು, ಇವುಗಳಿಗೆ ಜೋಳ, ಸೋಯಾಬೀನ್ ಮತ್ತು ತೌಡಿನ ಪೌಷ್ಟಿಕ ಆಹಾರ ನೀಡಲಾಗಿತ್ತು.

ನೆಟ್ಟಿಗರು ಏನಂದ್ರು?

ದೂರದ ಊರುಗಳಿಂದ ಬಂದು ಈ ಎಮ್ಮೆಯೊಂದಿಗೆ ಸೆಲ್ಫಿ ಪಡೆದ ಜನರು, "ಇದು ನೋಡಲು ಟ್ರಂಪ್ ತರಹವೇ ಇದೆ. ಆದರೆ ನಿಜವಾದ ಟ್ರಂಪ್‌ಗಿಂತ ಇದು ತುಂಬಾ ಶಾಂತ ಮತ್ತು ವಿನಮ್ರ ಸ್ವಭಾವದ್ದಾಗಿದೆ" ಎಂದು ಲೇವಡಿ ಮಾಡಿದ್ದಾರೆ.

ನೆತನ್ಯಾಹುಯಂತೆ ಕಾಣುವ ಎಮ್ಮೆ

ಇದೇ ವೇಳೆ ಬಾಂಗ್ಲಾದೇಶದಲ್ಲಿ 750 ಕೆಜಿಗಿಂತಲೂ ಹೆಚ್ಚು ತೂಕವಿರುವ ಮತ್ತೊಂದು ಎಮ್ಮೆ ಭಾರಿ ಸದ್ದು ಮಾಡುತ್ತಿದೆ. ಸದಾ ಸಿಟ್ಟಿನಿಂದ, ನಿರ್ವಹಣೆ ಮಾಡುವವರ ಮೇಲೆಯೇ ನುಗ್ಗುವ ಮತ್ತು ತುಂಟಾಟದ ಸ್ವಭಾವ ಹೊಂದಿರುವ ಈ ಎಮ್ಮೆಗೆ ಫಾರ್ಮ್ ಕಾರ್ಮಿಕರು ಇಸ್ರೇಲ್ ಪ್ರಧಾನಿ ಹೆಸರನ್ನಿಟ್ಟು 'ಬೆಂಜಮಿನ್ ನೆತನ್ಯಾಹು' ಎಂದು ಕರೆಯುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net