ಟ್ರಂಪ್ ಘೋಷಿಸಿದ ಮಿಲಿಟರಿ ಕಾರ್ಯಾಚರಣೆಗೆ ನಡುಗಿದ ವೆನೆಜುವೆಲಾ: ದೇಶಾದ್ಯಂತ ಮಿಲಿಟರಿ ನಿಯೋಜನೆ, ಅನಿಶ್ಚಿತತೆಯಲ್ಲಿ ಭವಿಷ್ಯ.. Donald Trump

Donald Trump
Donald Trump
Published on

ಪ್ರಮುಖ ಮುಖ್ಯಾಂಶಗಳು

  • ವೆನೆಜುವೆಲಾ ಅಧ್ಯಕ್ಷ ಹಾಗೂ ದಂಪತಿ ಅಮೆರಿಕ ವಶ
  • ವೆನೆಜುವೆಲಾ ಅನಿಶ್ಚಿತ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ
  • ವೆನೆಜುವೆಲಾ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ದೇಶಾದ್ಯಂತ ಮಿಲಿಟರಿ ನಿಯೋಜನೆಗೆ ಘೋಷಣೆ
ವಾಷಿಂಗ್​ಟಂನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕದ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಹಾರಿಸಿದ್ದಾರೆ ಎಂದು ಹೇಳಿದ ನಂತರ ವೆನೆಜುವೆಲಾದ ಭವಿಷ್ಯವು ಅನಿಶ್ಚಿತತೆಯತ್ತ ಸಾಗುವಂತಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಅಮೆರಿಕವು ವೆನೆಜುವೆಲಾ ಮತ್ತು ಅದರ ನಾಯಕನ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ವೆನೆಜುವೆಲಾದಲ್ಲಿ ನಡೆದ ಕಾರ್ಯಾಚರಣೆಯನ್ನು ಶ್ಲಾಘಿಸಿ ಇದೊಂದು ಅದ್ಭುತ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

ಮಡುರೊ ಮುಂದಿನ ಸವಾಲುಗಳೇನು?

ವರದಿಗಳ ಪ್ರಕಾರ, ಮಡುರೊ ಅವರನ್ನು ಯುಎಸ್ ಮಿಲಿಟರಿಯ ವಿಶೇಷ ಕಾರ್ಯಾಚರಣೆ ಘಟಕವಾದ ಡೆಲ್ಟಾ ಫೋರ್ಸ್ ವಶಪಡಿಸಿಕೊಂಡಿದೆ. ಟ್ರಂಪ್ ಅವರ ಘೋಷಣೆಯ ನಂತರ, ಯುಎಸ್ ರಿಪಬ್ಲಿಕನ್ ಸೆನೆಟರ್ ಮೈಕ್ ಲೀ,ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತನಾಡಿದ್ದಾರೆಂದು ಹೇಳಿದ್ದಾರೆ.
ಮಡುರೊ ಅವರನ್ನು ಯುಎಸ್ ಸಿಬ್ಬಂದಿ ಬಂಧಿಸಿದ್ದಾರೆ ಮತ್ತು ಕ್ರಿಮಿನಲ್ ಆರೋಪಗಳ ಮೇಲೆ ವಿಚಾರಣೆಗೆ ಅಮೆರಿಕಕ್ಕೆ ಕರೆದೊಯ್ಯಲಾಗುವುದು ಎಂದು ರೂಬಿಯೊ ತನಗೆ ಹೇಳಿದ್ದರು ಎಂದು ಲೀ ಹೇಳಿಕೊಂಡಿದ್ದಾರೆ. ಮಡುರೊ ಬಂಧನದಲ್ಲಿರುವುದರಿಂದ ವೆನೆಜುವೆಲಾದಲ್ಲಿ ಯಾವುದೇ ಯುಎಸ್ ಮಿಲಿಟರಿ ಕ್ರಮವನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕಾದ ಈ ಕಾರ್ಯಚರಣೆಯನ್ನು ಹೊಗಳಿರುವ ವಿದೇಶಾಂಗ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ X ನಲ್ಲಿ ಇದು ವೆನೆಜುವೆಲಾಗೆ ಹೊಸ ಉದಯ ಎಂದು ಬರೆದುಕೊಂಡಿದ್ದಾರೆ. ಅವರ ದೇಶದ ನಾಯಕ ನಮ್ಮ ವಶದಲ್ಲಿದ್ದು ಆಪಾದಿತ ಅಪರಾಧಗಳಿಗೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳದ್ದಾರೆ.
ವೆನೆಜುವೆಲಾ ಏನು ಹೇಳಿದೆ?
ಟ್ರಂಪ್​ನ ಹೇಳಿಕೆಯ ನಂತರ ವೆನೆಜುವೆಲಾದೊಳಗೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ದೇಶಾದ್ಯಂತ ಮಿಲಿಟರಿ ಪಡೆಗಳನ್ನು ತಕ್ಷಣ ನಿಯೋಜಿಸುವುದಾಗಿ ಘೋಷಿಸಿದ್ದಾರೆ. ವೆನೆಜುವೆಲಾ ಇದುವರೆಗೆ ಎದುರಿಸಿದ ಅತ್ಯಂತ ಕೆಟ್ಟ ಆಕ್ರಮಣ ಇದಾಗಿದ್ದು, ದಾಳಿಯ ಹೊರತಾಗಿಯೂ ದೇಶವನ್ನು ಅಮೆರಿಕ ವಶಪಡಿಸಿಕೊಳ್ಳಲಾಗುವುದಿಲ್ಲ ಎಂದು ಲೋಪೆಜ್ ಹೇಳಿದ್ದಾರೆ.
ವೆನೆಜುವೆಲಾದ ಸರ್ಕಾರವು ಅಮೆರಿಕದ ಕ್ರಮವನ್ನು ಸಾಮ್ರಾಜ್ಯಶಾಹಿ ದಾಳಿ ಎಂದು ಖಂಡಿಸಿ ನಾಗರಿಕರನ್ನು ಬೀದಿಗಿಳಿಯುವಂತೆ ಒತ್ತಾಯಿಸಿದೆ. ಆದರೆ ಮಡುರೊ ನಿಜವಾಗಿಯೂ ಅಮೆರಿಕದ ವಶದಲ್ಲಿದ್ದಾರೆ ಎಂಬುದಕ್ಕೆ ವೆನೆಜುವೆಲಾ ಸರ್ಕಾರ ಇನ್ನೂ ದೃಢೀಕರಣ ನೀಡಿಲ್ಲ.

ವೆನೆಜುವೆಲಾ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ

ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಕಂಡುಹಿಡಿಯಲು ಸಹಾಯ ಮಾಡಲು ಸಿದ್ಧ ಎಂದು ಹೇಳುವ ಮೂಲಕ ಸ್ಪೇನ್ ಮಧ್ಯಸ್ಥಿಕೆ ವಹಿಸಲು ಮುಂದಾಯಿತು. ರಷ್ಯಾ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿತು. ವಿದೇಶಿ ಮಿಲಿಟರಿ ಹಸ್ತಕ್ಷೇಪವಿಲ್ಲದೆ ವೆನೆಜುವೆಲಾ ತಮ್ಮ ಭವಿಷ್ಯವನ್ನು ಸ್ವತಃ ನಿರ್ಧರಿಸಲು ಅವಕಾಶ ನೀಡಬೇಕು ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಲ್ಯಾಟಿನ್ ಅಮೆರಿಕ ಶಾಂತಿಯ ವಲಯವಾಗಿ ಉಳಿಯಬೇಕು ಎಂದು ರಷ್ಯಾ ಹೇಳಿದೆ.
ಘಟನೆಗಳು ಮುಂದುವರಿಯುತ್ತಿದ್ದಂತೆ, ವೆನೆಜುವೆಲಾ ನಿರ್ಣಾಯಕ ಕ್ಷಣವನ್ನು ಎದುರಿಸುತ್ತಿದೆ. ಅದರ ಅಧ್ಯಕ್ಷರು ಅಮೆರಿಕದ ವಶದಲ್ಲಿದ್ದಾರೆ ಎಂದು ವರದಿಯಾಗಿದೆ. ಅದರ ಮಿಲಿಟರಿ ಹೆಚ್ಚಿನ ಎಚ್ಚರಿಕೆಯಲ್ಲಿದೆ ಮತ್ತು ಜಾಗತಿಕ ಶಕ್ತಿಗಳ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶವು ಅನಿಶ್ಚಿತ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net